ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭದ್ರಾದಿಂದ ವಾಣಿವಿಲಾಸಕ್ಕೆ ನೀರು: ಆತಂಕ ಬೇಡ’

Last Updated 13 ಮೇ 2022, 2:38 IST
ಅಕ್ಷರ ಗಾತ್ರ

ಹಿರಿಯೂರು:‘ಹಿಂದಿನ ವರ್ಷ ಭದ್ರಾ ಅಣೆಕಟ್ಟೆಯಿಂದ ವಾಣಿವಿಲಾಸ ಜಲಾಶಯಕ್ಕೆ 10 ಟಿಎಂಸಿ ಅಡಿ ನೀರು ಹರಿಸಿದ್ದು, ಇನ್ನು ಎರಡು ವರ್ಷ ರೈತರು ಚಿಂತಿಸುವುದು ಬೇಡ’ ಎಂದು ಭದ್ರಾ ಮೇಲ್ದಂಡೆ ಯೋಜನೆಯ ಅಧೀಕ್ಷಕ ಎಂಜಿನಿಯರ್ ಶಿವಪ್ರಕಾಶ್ಹೇಳಿದರು.‌

ನಗರದ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ವಾಣಿವಿಲಾಸ ಜಲಾಶಯಕ್ಕೆ 10 ಟಿಎಂಸಿ ಅಡಿ ನೀರು ಹರಿಸುವ ಆದೇಶ ಮಾಡುವಂತೆ ಒತ್ತಾಯಿಸಿ ತಾಲ್ಲೂಕು ರೈತ ಸಂಘ ಮತ್ತು ಹಸಿರು ಸೇನೆ ನಡೆಸುತ್ತಿರುವ 61ನೇ ದಿನವಾದ ಶುಕ್ರವಾರ ಧರಣಿ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾ ನಿರತ ರೈತರೊಂದಿಗೆ ಅವರು ಮಾತನಾಡಿದರು.

‘ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಎರಡು ವರ್ಷ ಬೇಕು. ಅಲ್ಲಿಯವರೆಗೆ ಈ ಭಾಗದ ರೈತರು ಆತಂಕಪಡುವುದು ಬೇಡ. ಈ ವರ್ಷವೂ ಹಿಂದಿನ ವರ್ಷದಂತೆ ನೀರು ಹರಿಸುತ್ತೇವೆ. ಜಲಾಶಯ ಎರಡನೇ ಬಾರಿಗೆ ಕೋಡಿ ಬೀಳುವ ಎಲ್ಲಾ ಸಾಧ್ಯತೆಗಳಿವೆ. ಈಗಿನ ಪರಿಸ್ಥಿತಿಯಲ್ಲಿ ಹೆಚ್ಚಿನ ನೀರನ್ನು ಹಂಚಿಕೆಮಾಡಲು ಸಾಧ್ಯವಿಲ್ಲ. ಈಗಾಗಲೇ ಧರಣಿ ನಿರತರ ಬೇಡಿಕೆಗಳ ಬಗ್ಗೆ ಸಂಬಂಧಿಸಿದವರಿಗೆ ಪತ್ರ ಕಳಿಸಿದ್ದೇವೆ. ಶೀಘ್ರ ಜಲಸಂಪನ್ಮೂಲ ಸಚಿವರು ಹಾಗೂ ವಿಶ್ವೇಶ್ವರಯ್ಯ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಜೊತೆ ಸಭೆ ಕರೆಯುವಂತೆ ಪತ್ರದ ಮೂಲಕ ಮನವಿ ಮಾಡುತ್ತೇವೆ’ ಎಂದು ಅವರು ಭರವಸೆನೀಡಿದರು.

‘ಧರ್ಮಪುರ ಕೆರೆಗೆ ನೀರನ್ನು ಸಣ್ಣ ನೀರಾವರಿ ಇಲಾಖೆ ಮೂಲಕ ಹರಿಸುವ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಗೆ ತುಮಕೂರು ಶಾಖಾ ನಾಲೆಯಿಂದ ನೀರಿನ ಹಂಚಿಕೆ ಆಗಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಲ್ಲೂಕು ರೈತ ಸಂಘದ ಅಧ್ಯಕ್ಷ ಕೆ. ಟಿ. ತಿಪ್ಪೇಸ್ವಾಮಿ, ‘ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ವಾಣಿವಿಲಾಸಕ್ಕೆ ಕೇವಲ ಎರಡು ಟಿಎಂಸಿ ಅಡಿ ನೀರು ಮಾತ್ರ ಮೀಸಲಿಟ್ಟಿದ್ದಾರೆ. ಅಗತ್ಯ ಇರುವ 6.506 ಟಿಎಂಸಿ ಅಡಿ ನೀರಿನ ಕೊರತೆಯನ್ನು ಹೇಗೆ ತುಂಬುತ್ತೀರಿ? ಮತ್ತೊಮ್ಮೆ ರೈತರನ್ನು ಸಂಕಷ್ಟದ ಸರಮಾಲೆಗೆ ನೂಕಿದಂತೆ ಆಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

ಎಇಇಗಳಾದ ಚಂದ್ರಮೌಳಿ, ಕೃಷ್ಣಮೂರ್ತಿ, ಎಇ ಪರಶುರಾಂ, ಆಲೂರು ಸಿದ್ದರಾಮಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ವೈ. ಶಿವಣ್ಣ, ದೇವೇಂದ್ರಪ್ಪ, ಹರಿಯಬ್ಬೆ ವೆಂಕಟೇಶ್, ಡಿ. ವಿ. ರಂಗನಾಥಗೌಡ, ಅಂಬಲಗೆರೆ ಶಂಕರ್, ಲಕ್ಷ್ಮಣಗೌಡ, ವೀರೇಂದ್ರ, ಉಮೇಶ್, ಪುಟ್ಟೇಗೌಡ, ಪ್ರಕಾಶ್, ಜಯಣ್ಣ, ಪಾಂಡುರಂಗಯ್ಯ, ವಿರೂಪಾಕ್ಷಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT