ಸಿರಿಗೆರೆ: ತುಂಗಾಭದ್ರಾ ನದಿ ಮೈದುಂಬಿ ಹರಿಯುತ್ತಿದ್ದು, ಭರಮಸಾಗರ ಏತ ನೀರಾವರಿ ವ್ಯಾಪ್ತಿಯ ಎಲ್ಲ ಕೆರೆಗಳಿಗೆ ನೀರು ಹರಿಸುವ ಕೆಲಸ ಆಗುತ್ತಿದೆ ಎಂದು ತರಳಬಾಳು ಜಗದ್ಗುರು ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಸಮೀಪದ ದೊಡ್ಡಾಲಗಟ್ಟ ಗ್ರಾಮದ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ನಡೆದ ಗೋವಿಂದರಾಜನ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭರಮಸಾಗರ ಏತ ನೀರಾವರಿ ಯೋಜನೆಗೆ ಭರಮಣ್ಣನಾಯಕನ ಕೆರೆ ಡ್ಯಾಂ ಇದ್ದಂತೆ. ಅದು ತುಂಬಿದರೆ ಸುತ್ತಲಿನ 42 ಕೆರೆಗಳ ವ್ಯಾಪ್ತಿಗೆ ಸೇರುವ ರೈತ ಸಮುದಾಯ ನಿಶ್ಚಿಂತರಾಗಿ ಇರಬಹುದು. ಏತ ನೀರಾವರಿ ಕಾಮಗಾರಿಯಲ್ಲಿ ಕೆಲವು ತಾಂತ್ರಿಕ ಮತ್ತು ಲೋಪಗಳು ಕಂಡುಬಂದಿರುವುದರಿಂದ ಕೆಲವು ಕೆರೆಗಳಿಗೆ ನೀರು ಬರುತ್ತಿಲ್ಲ ಎನ್ನುವ ದೂರುಗಳು ಇವೆ. ಅವುಗಳನ್ನು ಸರಿಪಡಿಸಿ ದೊಡ್ಡಾಲಗಟ್ಟ ವ್ಯಾಪ್ತಿಯ ಕೆರೆಗಳನ್ನು ಸಹ ತುಂಬಿಸಲಾಗುವುದು ಎಂದು ಹೇಳಿದರು.
ದೊಡ್ಡಾಲಗಟ್ಟ ಗ್ರಾಮದ ಜನರು ಮಠದ ಬಗ್ಗೆ ಅಪಾರ ಶ್ರದ್ಧೆ ಇಟ್ಟುಕೊಂಡಿದ್ದಾರೆ. ಶ್ರೀಗಳ ಕೃಪೆಯಿಂದ ಕೆರೆಗಳಿಗೆ ನೀರು ಬಂದಿರುವುದರಿಂದ ಎಲ್ಲರೂ ಸಂತೋಷದಿಂದ ಇದ್ದೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಎಂ ನಾಗರಾಜಪ್ಪ ತಿಳಿಸಿದರು.
ಶ್ರೀಗಳ ಗ್ರಾಮ ಭೇಟಿ ಹಿನ್ನೆಲೆಯಲ್ಲಿ ರಸ್ತೆಯನ್ನು ತಳಿರು–ತೋರಣಗಳಿಂದ ಅಲಂಕರಿಸಲಾಗಿತ್ತು. ಡೊಳ್ಳು, ನಗಾರಿಗಳನ್ನು ಬಾರಿಸುವ ಮೂಲಕ ಸ್ವಾಮೀಜಿ ಅವರನ್ನು ಅದ್ದೂರಿಯಾಗಿ ಬರಮಾಡಿಕೊಂಡರು.
ಗ್ರಾಮದ ಮುಖಂಡರಾದ ಬಿ.ಜೆ.ಗಿರಿಯಪ್ಪ, ಕೆ.ಓಂಕಾರಪ್ಪ, ಜಿ.ಬಿ.ರಂಗಪ್ಪ, ಉಮಾಪತಿ, ಓಬವ್ವನಾಗತಿಹಳ್ಳಿ ಮಂಜಣ್ಣ, ವಿಜಯ್ ಕುಮಾರ್, ಬಿ.ಟಿ.ನಾಗರಾಜ್, ಎಸ್.ರವಿ, ಎಸ್.ಬಿ.ಸ್ವಾಮಿ, ಸುಧಾಕರ್ ಹಾಗೂ ಗ್ರಾಮಸ್ಥರು ಭಾಗಿಯಾಗಿದ್ದರು.
ಮಠದ ವಿರುದ್ಧ ತಪ್ಪು ಮಾಹಿತಿ ಸಲ್ಲ
ತರಳಬಾಳು ಮಠದ ವಿಚಾರವಾಗಿ ಕೆಲವರು ಟಿವಿ ಮತ್ತು ಪತ್ರಿಕೆಗಳಲ್ಲಿ ತಪ್ಪು ಮಾಹಿತಿಗಳನ್ನು ಪ್ರಚುರಪಡಿಸುತ್ತಿದ್ದಾರೆ. ಇದು ಮಠಕ್ಕೆ ಶೋಭೆ ತರುವಂತದ್ದಲ್ಲ. ಸಮಸ್ಯೆಗಳಿದ್ದರೆ ಮಠಕ್ಕೆ ಬಂಧು ಶ್ರೀಗಳ ಬಳಿ ಮಾತನಾಡಬಹುದು. ಹೀಗೆ ಹಾದಿಬೀದಿಯಲ್ಲಿ ಮಾತಾಡಿ ಮಠದ ಘನತೆಗೆ ಧಕ್ಕೆ ತರಬಾರದು. ಶ್ರೀಗಳು ಮತ್ತು ಮಠದ ಬಗ್ಗೆ ಗ್ರಾಮಸ್ಥರಿಗೆ ಅಪಾರ ಶ್ರದ್ಧೆ ಇದೆ. ಶ್ರೀಗಳು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ ಎಂದು ಗ್ರಾಮಸ್ಥರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.