ಮೊಳಕಾಲ್ಮುರು: ಪ.ಪಂ.ನಿರ್ಲಕ್ಷ್ಯ, 20 ದಿನಕ್ಕೊಮ್ಮೆ ನೀರು: ಬೃಹತ್ ಪ್ರತಿಭಟನೆ

7

ಮೊಳಕಾಲ್ಮುರು: ಪ.ಪಂ.ನಿರ್ಲಕ್ಷ್ಯ, 20 ದಿನಕ್ಕೊಮ್ಮೆ ನೀರು: ಬೃಹತ್ ಪ್ರತಿಭಟನೆ

Published:
Updated:
Deccan Herald

ಮೊಳಕಾಲ್ಮುರು: ‘ಅವರು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿ ಇರಲಿಲ್ಲ, ಸಬೂಬು ಸಾಕು ಮೊದಲು ನೀರು ನೀಡಿ, ನಿಮ್ಮ ಭರವಸೆ ನಂಬಲು ನಾವು ಸಿದ್ಧರಿಲ್ಲ, 20 ದಿನಕ್ಕೊಮ್ಮೆ ನೀರು ನೀಡಿದರೆ ನಮ್ಮ ಜೀವನ ಹೇಗೆ ಸ್ವಾಮಿ’ ಎಂದು ತೀವ್ರ ಏರು ದನಿಯಲ್ಲಿ ಪ್ರಶ್ನೆ ಮಾಡುತ್ತಿದ್ದ ಚಿತ್ರಣ ಬುಧವಾರ ಪಟ್ಟಣ ಪಂಚಾಯಿತಿ ಎದುರು ಕಂಡುಬಂತು.

ನೀರಿನ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ನಾಗರಿಕರು ನಡೆಸಿದ ಪ್ರತಿಭಟನೆಯಲ್ಲಿ ಸೇರಿದ್ದ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದರು.

ಕಳೆದ 3 ತಿಂಗಳಿನಿಂದ ಸಮಸ್ಯೆ ತೀವ್ರವಾಗಿದೆ. ಇಂದು, ನಾಳೆ ಸಮಸ್ಯೆ ಬಗೆಹರಿಸಲಾಗುವುದು. ರಂಗಯ್ಯನದುರ್ಗ ಜಲಾಶಯದಲ್ಲಿ ನೀರಿನ ಕೊರತೆಯಿಂದಾಗಿ ಸಮಸ್ಯೆ ಎದುರಾಗಿದೆ. ಕೊಳವೆಬಾವಿ ದುರಸ್ತಿ ಮಾಡಿಸಲಾಗುವುದು ಎಂಬ ಸಬೂಬು ಹೇಳಲಾಗುತ್ತಿದೆ. ಶಾಸಕ ಶ್ರೀರಾಮುಲು ನೀಡಿದ್ದ ಭರವಸೆಯೂ ಕಾರ್ಯರೂಪಕ್ಕೆ ಬಂದಿಲ್ಲ. ಆದ್ದರಿಂದ ನೀರು ನೀಡುವ ತನಕ ಪ್ರತಿಭಟನೆ ನಡೆಸಲಾಗುವುದು ಎಂದು ಪಟ್ಟುಹಿಡಿದರು.

ಆರಂಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಲು ಹೋದಾಗ, ನಿಮ್ಮ ನಿರ್ಲಕ್ಷ್ಯದಿಂದಲೇ ಸಮಸ್ಯೆ ಎದುರಾಗಿದೆ. ನಿಮ್ಮ ಮಾತು ನಮಗೆ ಬೇಡ, ಸ್ಥಾನಕ್ಕೆ ರಾಜೀನಾಮೆ ನೀಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ಸ್ಥಳಕ್ಕೆ ಬಂದ ಶಾಸಕ ಶ್ರೀರಾಮುಲು, ‘ನೀರಿನ ಕೊರತೆ ಗಮನಕ್ಕೆ ಬಂದಿದೆ. ಕೊರೆಸಿರುವ ಕೊಳವೆಬಾವಿಗಳು ಬತ್ತಿವೆ, ಇಸ್ರೋ ತಂತ್ರಜ್ಞಾನ ಬಳಸಿ ನೀರಿನ ಮೂಲ ಹುಡುಕಲಾಗುವುದು. ಶಾಶ್ವತವಾಗಿ ತುಂಗಭದ್ರಾ ಹಿನ್ನೀರು ಮೂಲಕ ನೀರು ನೀಡಲು ಸರ್ಕಾರಕ್ಕೆ ಒತ್ತಡ ಹೇರಲಾಗುವುದು’ ಎಂದರು.

ಪಂಚಾಯಿತಿ ಸಿಬ್ಬಂದಿ ಹಾಗೂ ಸದಸ್ಯರ ಮಧ್ಯೆ ಹೊಂದಾಣಿಕೆ ಇಲ್ಲದಿರುವುದು ಸಮಸ್ಯೆಗೆ ಮುಖ್ಯ ಕಾರಣವಾಗಿದೆ. ಹಿಂದೆಂದೂ ಕಾಣದಷ್ಟು ಸಮಸ್ಯೆ ಭೀಕರತೆ ಪಡೆದಿದೆ. ಮುಖ್ಯಾಧಿಕಾರಿ ಹಾಗೂ ಅಧ್ಯಕ್ಷರ ಮಧ್ಯೆಯ ಶೀತಲ ಸಮರ ಇನ್ನಷ್ಟು ಒತ್ತು ನೀಡಿದೆ. ಸಿಬ್ಬಂದಿಗೆ ಹಲವು ತಿಂಗಳಿನಿಂದ ವೇತನ ನೀಡಿಲ್ಲ ಎಂದು ದೂರಿದರು.

‘ಇದೊಂದು ಬಾರಿ ಸಮಸ್ಯೆ ಪರಿಹಾರಕ್ಕೆ ಅವಕಾಶ ನೀಡಿ. ಇಂದು ನೀರು ಕೊಡಿಸಿಯೇ ಪಟ್ಟಣದಿಂದ ಹೊರ ಹೋಗುತ್ತೇನೆ’ ಎಂದು ಬಿ.ಶ್ರೀರಾಮುಲು ಮನವಿ ಮಾಡಿದರು. ಸಂಜೆ ಅಧಿಕಾರಿಗಳು ನೀರು ನೀಡಲು ಅಂತಿಮ ಸಿದ್ಧತೆ ಮಾಡಿಕೊಂಡಿರುವ ಬಗ್ಗೆ ಸ್ಪಷ್ಟನೆ ಪಡೆದು ಶ್ರೀರಾಮುಲು ವಾಪಾಸ್‌ ಹೋದರು ಎಂದು ಬೆಂಬಲಿಗರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !