ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ಬದಿಯ ಗ್ರಾಮಗಳಿಗೆ ನುಗ್ಗುವ ನೀರು

ಅವೈಜ್ಞಾನಿಕ ಕಾಮಗಾರಿ: ಕ್ರಮ ಕೈಗೊಳ್ಳಲು ಗ್ರಾಮಸ್ಥರ ಮನವಿ
Last Updated 5 ಆಗಸ್ಟ್ 2022, 2:25 IST
ಅಕ್ಷರ ಗಾತ್ರ

ಮೊಳಕಾಲ್ಮುರು: ತಾಲ್ಲೂಕಿನಲ್ಲಿ ಇತ್ತೀಚೆಗಷ್ಟೇ ಅಭಿವೃದ್ಧಿ ಹೊಂದಿರುವ ನೂತನ ರಾಷ್ಟ್ರೀಯ ಹೆದ್ದಾರಿ– 150 ‘ಎ’ನಲ್ಲಿ ಕೆಲವೆಡೆ ಅವೈಜ್ಞಾನಿಕ ಕಾಮಗಾರಿ ನಡೆಸಿದ್ದರಿಂದ ಮಳೆ ಸುರಿದಾಗ ಹೆದ್ದಾರಿ ಬದಿಯಲ್ಲಿ ತೀವ್ರ ಸಮಸ್ಯೆ ಎದುರಾಗುತ್ತಿದೆ.

ತಾಲ್ಲೂಕಿನಲ್ಲಿ ಬಿ.ಜಿ. ಕೆರೆಯಿಂದ ಆರಂಭವಾಗುವ ಈ ಹೆದ್ದಾರಿಯು ತಮ್ಮೇನಹಳ್ಳಿ ಬಳಿ ಕೊನೆಯಾಗುತ್ತದೆ. ಮಾರ್ಗಮಧ್ಯದ ರಾಯಾಪುರ, ಹಾನಗಲ್, ನಾಗಸಮುದ್ರ, ರಾಂಪುರ, ಬೊಮ್ಮಕ್ಕನಹಳ್ಳಿ, ತಮ್ಮೇನಹಳ್ಳಿ ಗ್ರಾಮಗಳಲ್ಲಿ ಮಳೆ ಬಂದರೆ ಸಾಕು ಹೆದ್ದಾರಿ ಬದಿಯಲ್ಲಿ ನೀರುಸರಾಗವಾಗಿ ಮುಂದೆಸಾಗದೇ ನಿಲ್ಲುತ್ತದೆ.

ಹೀಗೆ ಸಂಗ್ರಹವಾಗುವ ನೀರು ಸಮೀಪದ ಮನೆಗಳಿಗೆ, ಶಾಲೆಗಳಿಗೆ, ಜಮೀನುಗಳಿಗೆ, ಸರ್ಕಾರಿ ಕಚೇರಿಗಳಿಗೆ ನುಗ್ಗುತ್ತಿದೆ ಎಂಬುದು ಗ್ರಾಮಸ್ಥರ ಆರೋಪ.

ಬುಧವಾರ ಸುರಿದ ಮಳೆಗೆ ಬಿ.ಜಿ. ಕೆರೆಯ ಬಸವೇಶ್ವರ ಬಡಾವಣೆಯ ಲಿಡ್ಕರ್ ಕಾಲೊನಿಗೆ ಭಾರಿ ಪ್ರಮಾಣದ ನೀರು ನುಗ್ಗಿ ಮನೆಯಲ್ಲಿದ್ದ ದವಸ, ಧಾನ್ಯ,ಸಾಮಗ್ರಿಗಳು ಜಲಾವೃತವಾಗಿದ್ದವು. ಇಲ್ಲೇ ಒಂದು ಕಾಪೌಂಡ್ ಸಹ ಕುಸಿದಿದೆ. ಹೆದ್ದಾರಿ ನಿರ್ಮಾಣ ವೇಳೆ ನೀರು ಹರಿಯಲು ಕಾಲುವೆ ವ್ಯವಸ್ಥೆಮಾಡಿಲ್ಲ. ಈ ಕುರಿತು ವಿರೋಧ ವ್ಯಕ್ತಪಡಿಸಿ ಗ್ರಾಮಸ್ಥರು ಕಾಮಗಾರಿ ತಡೆದು ಪ್ರತಿಭಟನೆ ಮಾಡಿದ್ದರೂ ಹೆದ್ದಾರಿ ಗುತ್ತಿಗೆ ಪಡೆದ ಕಂಪನಿಯು ದೂಕ್ತ ಕ್ರಮ ಕೈಗೊಳ್ಳಲೇ ಇಲ್ಲ. ಇದರಿಂದ ಹೆಚ್ಚಿನಸಮಸ್ಯೆಯಾಗಿದ್ದು ಮಳೆ ಬಂದರೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥ ಚಂದ್ರಶೇಖರ್ ದೂರಿದರು.

ಅಮಕುಂದಿ ಬಳಿ ನಾಗಸಮದ್ರಕ್ಕೆ ಹೋಗುವ ಜಲಾಶಯದ ನೀರಿನ ಕಾಲುವೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ. ಇದರಿಂದ ಭೈರಾಪುರ ಬಳಿಮನೆಗಳಿಗೆ ನೀರು ನುಗ್ಗುತ್ತದೆ. ಈ ಬಗ್ಗೆ ಗ್ರಾಮಸ್ಥರು ನಿರಂತರ ಪ್ರತಿಭಟನೆ ಮಾಡುತ್ತಿದ್ದರೂ ಕ್ರಮ ಜರುಗಿಲ್ಲ. ಹೆದ್ದಾರಿ ಇಕ್ಕೆಲದಲ್ಲಿ ನೀರು ಹರಿದುಹೋಗಲು ವ್ಯವಸ್ಥೆ ಇಲ್ಲ. ಕೆಳಸೇತುವೆಯ ಬಳಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಯಥೇಚ್ಚ ಪ್ರಮಾಣದಲ್ಲಿ ನೀರು ನಿಂತು ಅಪಾಯ ಆಹ್ವಾನಿಸುತ್ತಿದೆ.

ಚರಂಡಿ, ಸೇವಾ ರಸ್ತೆ ವ್ಯವಸ್ಥೆ ನಂತರವೇ ಟೋಲ್ ಆರಂಭಿಸಬೇಕು ಎಂಬ ಕಾನೂನಿದ್ದರೂ ಇದನ್ನು ಇಲ್ಲಿ ನಿರ್ಲಕ್ಷಿಸಲಾಗಿದೆ ಎಂದು ನಾಗಸಮುದ್ರದಗೋವಿಂದಪ್ಪ ಆರೋಪಿಸಿದರು.

ರಾಂಪುರದ ದೇವಸಮುದ್ರ ಕ್ರಾಸ್, ಜೆ.ಬಿ. ಹಳ್ಳಿ ಅಂಡರ್‌ಪಾಸ್‌ನಲ್ಲಿ ಬೇಕಾಬಿಟ್ಟಿ ಮಳೆ ನೀರು ನಿಲ್ಲುತ್ತಿದೆ. ದ್ವಿಚಕ್ರ ವಾಹನ, ಜನರು ಓಡಾಡಲುಸಾಧ್ಯವಾಗುವುದಿಲ್ಲ. ಈ ರಸ್ತೆಯಲ್ಲಿ ಶಾಲೆಗಳಿದ್ದು, ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಆತಂಕವಾಗುತ್ತಿದೆ. ಮಳೆ ಬಂದಾಗ ಸಮಸ್ಯೆ ಬಗ್ಗೆ ಗುತ್ತಿಗೆ ಪಡೆದ ಸಂಸ್ಥೆ ಡಿಬಿಎಲ್‌ಗೆ ಮನವರಿಕೆ ಮಾಡಿದ್ದರೂ ಯಾವುದೇ ಕ್ರಮ ಜರುಗಿಲ್ಲ ಎಂದು ಸ್ಥಳೀಯರಾದ ಎಸ್‌ಜಿಎಂ ಮಾಡೆಲ್ ಶಾಲೆಯ ಕಾರ್ಯದರ್ಶಿ ಜಿ.ಸಿ. ನಾಗರಾಜ್ ದೂರಿದರು.

ಬೊಮ್ಮಕ್ಕನಹಳ್ಳಿ ಸರ್ಕಾರಿ ಶಾಲೆಗೆ, ಸೇವಾ ರಸ್ತೆಗೆ ಅಪಾರ ನೀರು ನುಗ್ಗಿ ಆತಂಕ ನಿರ್ಮಾಣವಾಗಿತ್ತು. ತಮ್ಮೇನಹಳ್ಳಿಗ್ರಾಮದ ಹೆದ್ದಾರಿ ಪಕ್ಕದ ಗ್ರಾಮ ಪಂಚಾಯಿತಿ ಕಚೇರಿ, ಸರ್ಕಾರಿ ಪ್ರೌಢಶಾಲೆ, ಸುತ್ತಲಿನ ಜನವಸತಿ ಪ್ರದೇಶಗಳಲ್ಲಿ ಮಳೆ ನೀರು ನುಗ್ಗಿ ಸಮಸ್ಯೆಯಾಗಿತ್ತು. ಇಲ್ಲಿಯೂ ಸ್ಥಳಕ್ಕೆ ಡಿಬಿಎಲ್ ಕಂಪನಿ ಅಧಿಕಾರಿಗಳನ್ನು ಕರೆಸಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದು ಪಿಡಿಒ ಗುಂಡಪ್ಪ ತಿಳಿಸಿದರು.

ಪದೇ, ಪದೇ ಇದು ಮರುಕಳಿಸುತ್ತಿರುವ ಕಾರಣ ಜಿಲ್ಲಾಡಳಿತ ಈ ಭಾಗದ ಗ್ರಾಮಗಳಿಗೆ ಅಧಿಕಾರಿಗಳನ್ನು ಕಳಿಸಿ ಪರಿಶೀಲನೆ ನಡೆಸುವ ಮೂಲಕ ಕ್ರಮಕೈಗೊಳ್ಳುವಂತೆ ಸೂಚಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

****

ನೀರು ನಿಲ್ಲುತ್ತಿರುವ ಬಗ್ಗೆ ಡಿಬಿಎಲ್ ಕಂಪನಿಗೆ ಪತ್ರ ಬರೆಯಲಾಗಿದೆ. ಹಲವು ಬಾರಿ ದೂರು ಸಲ್ಲಿಸಲಾಗಿದೆ. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

-ಪರಮೇಶ್ವರಪ್ಪ, ಗ್ರಾ.ಪಂ. ಅಧ್ಯಕ್ಷ, ರಾಂಪುರ

ಮಳೆ ಬಂದಾಗ ಆಗುತ್ತಿರುವ ಸಮಸ್ಯೆ ಗಮನಕ್ಕೆ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಹೆದ್ದಾರಿ ಪ್ರಾಧಿಕಾರ ಕಚೇರಿಗೆ ಪತ್ರ ಬರೆದು ಕ್ರಮಕ್ಕೆ ಸೂಚಿಸಲಾಗುವುದು.

-ಟಿ. ಸುರೇಶ್‌ಕುಮಾರ್, ತಹಶೀಲ್ದಾರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT