ಸೋಮವಾರ, ಡಿಸೆಂಬರ್ 9, 2019
16 °C

ಕೊಳವೆಬಾವಿಯಿಂದ ಉಕ್ಕುತ್ತಿರುವ ನೀರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೊಸದುರ್ಗ: ತಾಲ್ಲೂಕಿನ ಗುಡ್ಡದನೇರಲಕೆರೆ ಗ್ರಾಮ ಪಂಚಾಯಿತಿಯ ಅಗಸರಹಳ್ಳಿ ಗ್ರಾಮದ ರೈತ ಲಕ್ಷ್ಮಣ್‌ ಅವರ ಕೊಳವೆಬಾವಿಯಲ್ಲಿ ಸುಮಾರು ಎರಡು ತಿಂಗಳಿನಿಂದ ನೀರು ಉಕ್ಕುತ್ತಿದ್ದು, ಅಚ್ಚರಿಯನ್ನುಂಟು ಮಾಡಿದೆ.

ಕಳೆದ ಫೆಬ್ರುವರಿಯಲ್ಲಿ 540 ಅಡಿ ಕೊಳವೆಬಾವಿ ಕೊರೆಸಲಾಯಿತು. ಆಗ ಎರಡು ಇಂಚು ನೀರು ಸಿಕ್ಕಿತ್ತು. ಪಂಪ್‌ಸೆಟ್‌ ಆನ್‌ ಮಾಡಿದ ಅರ್ಧತಾಸು ಆದ ನಂತರ ನೀರು ಗ್ಯಾಪ್‌ ಒಡೆಯುತ್ತಿತ್ತು. ಸೆಪ್ಟೆಂಬರ್‌, ಅಕ್ಟೋಬರ್‌ನಲ್ಲಿ ಭಾರಿ ಮಳೆಯಾಗಿದ್ದರಿಂದ ಅಂತರ್ಜಲ ಹೆಚ್ಚಾಗಿದೆ. ಇದರಿಂದ ಪಂಪ್‌ಸೆಟ್‌ ಆನ್‌ ಮಾಡದಿದ್ದರೂ ಸ್ವಾಭಾವಿಕವಾಗಿ ನೀರು ಉಕ್ಕಿ ಸಮೀಪದ ಕೆರೆಗೆ ಹರಿಯುತ್ತಿದೆ.

ಪಂಪ್‌ಸೆಟ್‌ ಆನ್‌ ಮಾಡಿದರೂ ಅರ್ಧ ತಾಸು ನೀರು ಉಕ್ಕುತ್ತದೆ. ಪೈಪ್‌ನಲ್ಲೂ ನೀರು ಬರುತ್ತದೆ. ಪಂಪ್‌ಸೆಟ್‌ ಬಂದ್‌ ಮಾಡಿದ ಅರ್ಧ ತಾಸಿನ ನಂತರ ಮತ್ತೆ ನೀರು ಉಕ್ಕುತ್ತಿರುವುದು ವಿಸ್ಮಯವನ್ನುಂಟು ಮಾಡಿದೆ. ಇದು ಸತತ ಬರದಿಂದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಹರ್ಷವನ್ನುಂಟು ಮಾಡಿದೆ. ರೈತರು ಕುತೂಹಲದಿಂದ ಜಮೀನಿಗೆ ಬಂದು ಉಕ್ಕುತ್ತಿರುವ ನೀರು ವೀಕ್ಷಿಸುತ್ತಿದ್ದಾರೆ.

ಎರಡು ಇಂಚಿನ ಪೈಪ್‌ತುಂಬ ನೀರು ಬರುತ್ತಿದ್ದು, ಸುಮಾರು 3 ಎಕರೆ ಜಮೀನಿನಲ್ಲಿ ತೆಂಗು, ಅಡಿಕೆ, ಈರುಳ್ಳಿ, ಸುಗಂಧರಾಜ ಬೆಳೆ ಬೆಳೆಯಲು ಹೊಲವನ್ನು ಹಸನು ಮಾಡಲಾಗಿದೆ ಎಂದು ಲಕ್ಷ್ಮಣ್‌ ಪುತ್ರ ನಾಗು ಅಗಸರಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರತಿಕ್ರಿಯಿಸಿ (+)