ಸೋಮವಾರ, ಮಾರ್ಚ್ 8, 2021
25 °C

ಬೊಂಬೇರಹಳ್ಳಿ ಬ್ಯಾರೇಜ್‌ಗೆ ನೀರು: ಬೇಕಿದೆ ನಾಲ್ಕು ದಿನ

ಶಿವಗಂಗಾ ಚಿತ್ತಯ್ಯ Updated:

ಅಕ್ಷರ ಗಾತ್ರ : | |

Prajavani

ಚಳ್ಳಕೆರೆ: ವಾಣಿವಿಲಾಸ ಸಾಗರ ಜಲಾಶಯದಿಂದ ಚಳ್ಳಕೆರೆ ಕ್ಷೇತ್ರದ ವೇದಾವತಿ ನದಿಗೆ ನೀರು ಬಿಡಲು ಆರಂಭಿಸಿ ಮೇ 4ಕ್ಕೆ 11 ದಿನಗಳಾಗಿವೆ. ನೀರು ಹರಿಯುತ್ತಾ ಬಂದಂತೆ ಕಲಮರಹಳ್ಳಿ, ಗೊರ್ಲತ್ತು ಮೂಲಕ ಭಾನುವಾರ ತೊರೇಬೀರನಹಳ್ಳಿ ತಲುಪಿದೆ.

ಅತಿ ಹೆಚ್ಚು ಬಿಸಿಲಿನ ತಾಪಮಾನಕ್ಕೆ ನದಿ ಭಾಗ ಸಂಪೂರ್ಣವಾಗಿ ಒಣಗಿ ಬತ್ತಿಹೋಗಿದ್ದು, ನದಿಯ ತಳಭಾಗದಲ್ಲಿ ಯಾವುದೇ ತೇವಾಂಶವಿಲ್ಲದ ಕಾರಣ ನೀರು ಒಣ ಭೂಮಿಯಲ್ಲಿ ಹೀರಿಕೊಳ್ಳುತ್ತಿರುವುದರಿಂದ ಸರಾಗವಾಗಿ ಮುಂದಕ್ಕೆ ಹರಿಯಲು ಸಾಧ್ಯವಾಗುತ್ತಿಲ್ಲ. ನದಿ ಭಾಗದಲ್ಲಿ 15-20 ಅಡಿ ಆಳದವರೆಗೆ ಮರಳಿನ ಕಣ, ಮೇಲ್ಭಾಗದಲ್ಲಿ ಮರಳು ದಿಬ್ಬ, ಮಣ್ಣು ದಿನ್ನೆ, ಆಳವಾದ ಗುಂಡಿಗಳು, ಗಿಡಗಳು ಹಾಗೂ ಪೊದೆಯನ್ನು ದಾಟಿ ಬರಬೇಕಿದೆ.

ನಿಧಾನಗತಿಯಲ್ಲಿ ನೀರು ಹರಿಯುತ್ತಿರುವ ಕಾರಣ ಇನ್ನು 4-5 ದಿನದಲ್ಲಿ ಬೊಂಬೇರಹಳ್ಳಿ ಬ್ಯಾರೇಜ್ ತಲುಪುವ ಸಾಧ್ಯತೆ ಇದೆ. ಈ ಬ್ಯಾರೇಜ್ ತುಂಬಿದ ನಂತರ ಚೌಳೂರು, ಪರಶುರಾಂಪುರ, ಹರವಿಗೊಂಡನಹಳ್ಳಿ ಹಾಗೂ ಜಾಜೂರು ಬ್ಯಾರೇಜ್ ನೀರು ತಲುಪಲು 15-20 ದಿನ ಆಗಬಹುದು.

‘ನೀರು ತೊರೆಬೀರನಹಳ್ಳಿವರೆಗೂ ಬಂದಿದೆ ಅಂತೆ ಕಣ್ರಲಾ, ನಮ್ಮೂರಿಗೆ ಇನ್ಯಾವಾಗ ಎಷ್ಟೊತ್ತಿಗೆ ಬರುತ್ತೋ, ಬರ್ರೋ ನೋಡಾಕೆ ಹೋಗಾನಾ’ ಎಂದು ಕಾತುರದಿಂದ ನದಿಯಲ್ಲಿ ಹರಿದು ಬರುವ ನೀರನ್ನು ನೋಡಲು ತಾಲ್ಲೂಕಿನ ರೇಣುಕಾಪುರ, ಮೈಲನಹಳ್ಳಿ, ಗುಡಿಹಳ್ಳಿ, ಕಾಮಸಮುದ್ರ, ತಪ್ಪಗೊಂಡನಹಳ್ಳಿ, ನಾಗಗೊಂಡನಹಳ್ಳಿ, ಹರವಿಗೊಂಡನಹಳ್ಳಿ, ಹಾಲಗೊಂಡನಹಳ್ಳಿ, ಜಾಜೂರು, ಜುಂಜರಗುಂಟೆ, ಚೌಳೂರು, ಗೋಸಿಕೆರೆ, ವಡೇರಹಳ್ಳಿ, ಸೂರನಹಳ್ಳಿ, ಕೋನಿಗರಹಳ್ಳಿ ಹಾಗೂ ನಾರಾಯಣಪುರ ಸೇರಿ ನದಿ ತೀರದ ಜನರು, ನೀರನ್ನು ನೋಡಲಿಕ್ಕೆ ಟ್ಯಾಕ್ಟರ್ ಹಾಗೂ ಬೈಕ್‍ಗಳಲ್ಲಿ ಹೋಗುತ್ತಿರುವ ದೃಶ್ಯ ಕಂಡುಬಂತು.

ಇಷ್ಟು ದಿನ ಮಳೆ ನಂಬಿ ಜೀವನ ನಡೆಸುತ್ತಿದ್ವಿ, ಕೊರೆಯಿಸಿದ ಕೊಳವೆಬಾವಿ ಬತ್ತಿ ಹೋಗಿವೆ. ಈಗ ನದಿಯಲ್ಲಿ ನೀರು ಹರಿಯುವುದರಿಂದ ಅಂರ್ತಜಲ ವೃದ್ಧಿಯಾಗಿ ಕೊಳವೆಬಾವಿಯಲ್ಲಿ ನೀರು ಬಂದ್ರೆ ಕೃಷಿ ಚಟುವಟಿಕೆ ಮತ್ತು ಜನ-ಜಾನುವಾರರಿನ ಕುಡಿಯುವ ನೀರಿಗೂ ಅನುಕೂಲವಾಗುತ್ತದೆ ಎನ್ನುತ್ತಾರೆ ಗೊರ್ಲತ್ತು ತಿಪ್ಪೇಸ್ವಾಮಿ.

ನದಿ ಭಾಗದಲ್ಲಿ ಕೊಳವೆ ಬಾವಿ ಕೊರೆಸುವುದು. ಅಕ್ರಮ ಮರಳು ಗಣಿಗಾರಿಕೆ, ಒತ್ತುವರಿಯಾಗುವುದನ್ನು ತಡೆಯಬೇಕು. ಮತ್ತು ದಡದಲ್ಲಿ ಬೆಳೆದ ಮರಗಳನ್ನು ಸಂರಕ್ಷಣೆ ಮಾಡಬೇಕು. ಇದರಿಂದ ಭೂ ಸವಕಳಿಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಕಲಮರಹಳ್ಳಿ ಸಿದ್ದೇಶ್ ಹೇಳಿದರು.

ಶಾಸಕರ ಭೇಟಿ

ತಾಲ್ಲೂಕಿನ ಗೊರ್ಲತ್ತು ಗ್ರಾಮಕ್ಕೆ ಭಾನುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕ ಟಿ.ರಘುಮೂರ್ತಿ ಅವರು, ವೇದಾವತಿ ನದಿಯಲ್ಲಿ ಹರಿಯುತ್ತಿರುವ ನೀರಿನ ಒಳಹರಿವು ವೀಕ್ಷಿಸಿದರು. ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ, ಎಂಜಿನಿಯರ್ ಕೃಷ್ಣಮೂರ್ತಿ, ಸಿಪಿಐ ಈ. ಆನಂದ್, ಕಂದಾಯ ಅಧಿಕಾರಿ ಗಿರೀಶ್ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು