ಬುಧವಾರ, ಸೆಪ್ಟೆಂಬರ್ 22, 2021
29 °C
ನೂರು ವರ್ಷಗಳ ಹೋರಾಟಕ್ಕೆ ಸಂದ ಫಲ

ಐತಿಹಾಸಿಕ ಧರ್ಮಪುರ ಕೆರೆಗೆ ನೀರು; ನೂರು ವರ್ಷಗಳ ಹೋರಾಟಕ್ಕೆ ಸಂದ ಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಧರ್ಮಪುರ: ಸತತ 40 ವರ್ಷಗಳಿಂದ ಬರಗಾಲದ ಬವಣೆಯಿಂದ ಬೇಸತ್ತಿದ್ದ ಧರ್ಮಪುರ ಹೋಬಳಿಯ ಜನತೆಗೆ ಸಿಹಿ ಸುದ್ದಿ ಹೊರಬಿದ್ದಿದೆ. ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕ ಧರ್ಮಪುರ ಕೆರೆಗೆ ನೀರುಣಿಸುವ ಕಾರ್ಯಕ್ಕೆ ಅನುಮೋದನೆ ದೊರೆತಿದೆ. ಹೋಬಳಿಯ ಜನತೆ ಗುರುವಾರ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಐತಿಹಾಸಿಕ ಧರ್ಮಪುರ ಕೆರೆಗೆ ಪೂರಕ ನಾಲೆ ಕಲ್ಪಿಸಬೇಕು ಎಂದು ಶುರು ಮಾಡಿದ ರೈತರ ಹೋರಾಟಕ್ಕೆ ನೂರು ವರ್ಷಗಳು ತುಂಬಿವೆ. ಶಾಸಕಿ ಪೂರ್ಣಿಮಾ ಶ್ರೀನಿವಾಸ್‌ ಅವರ ಶ್ರಮದಿಂದಾಗಿ ವೇದಾವತಿ ನದಿಗೆ ನಿರ್ಮಾಣಗೊಂಡಿರುವ ಹೊಸಹಳ್ಳಿ ಬ್ಯಾರೇಜ್‌ನಿಂದ ಪೈಪ್‌ಲೈನ್ ಮೂಲಕ ಧರ್ಮಪುರ ಕೆರೆಗೆ ನೀರು ಬರಲಿದೆ. ಅಂದಾಜು ₹ 90 ಕೋಟಿ ವೆಚ್ಚದ ಕಾಮಗಾರಿಗೆ ಸಚಿವ ಸಂಪುಟದ ಅನುಮೋದನೆ ದೊರೆತಿರುವುದು ಈ ಭಾಗದ ರೈತರಲ್ಲಿ ಸಂತಸ ಉಂಟು ಮಾಡಿದೆ.

ಸ್ವಾತಂತ್ರ್ಯ ಪೂರ್ವದಲ್ಲಿಯೇ ಶುರುವಾದ ಹೋರಾಟಕ್ಕೆ ಸ್ವಾತಂತ್ರ್ಯಾ ನಂತರ 70 ವರ್ಷಗಳ ಬಳಿಕ ಮಂಜೂರಾತಿ ದೊರಕಿರುವುದು ಅತ್ಯಂತ ಚಾರಿತ್ರಿಕ ಘಟನೆ ಎಂದು ಭದ್ರಾ ಮೇಲ್ದಂಡೆಯ ಅಚ್ಚುಕಟ್ಟುದಾರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕಸವನಹಳ್ಳಿ ರಮೇಶ್ ಹೇಳಿದ್ದಾರೆ.

ಇತರ ಕೆರೆಗಳಿಗೂ ನೀರು: ‘ನಮ್ಮ ತಂದೆ ದಿವಂಗತ ಎ.ಕೃಷ್ಣಪ್ಪನವರು ಹಿರಿಯೂರು ಕ್ಷೇತ್ರಕ್ಕೆ ಬಂದು ಪರಾಜಿತರಾದರೂ ಧರ್ಮಪುರ ಕೆರೆಗೆ ನೀರು ತರಬೇಕೆಂದುಕೊಂಡಿದ್ದರೂ ಆಸೆ ಕೈಗೂಡಿರಲಿಲ್ಲ. ನಾನು ಚುನಾವಣೆಯಲ್ಲಿ ಅಶ್ವಾಸನೆ ಕೊಟ್ಟಿರಲಿಲ್ಲ. ಆದರೆ, ಧರ್ಮಪುರ ಕೆರೆಗೆ ನೀರು ತರಲೇ ಬೇಕೆಂದು ಮನಸ್ಸಿನಲ್ಲಿ ಅಂದುಕೊಂಡಿದ್ದೆ. ನೂರಾರು ವರ್ಷಗಳಿಂದ ಈಡೇರದೇ ಇದ್ದ ಬೇಡಿಕೆ ನಮ್ಮ ಮುಖ್ಯಮಂತ್ರಿಗಳು ಮತ್ತು ಸಚಿವರ ಸಹಕಾರದಿಂದ ಈಡೇರಿದೆ. ಹೋಬಳಿಯ ಜನತೆಯ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು’ ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.

‘ಹೊಸಹಳ್ಳಿ ಬ್ಯಾರೇಜ್‌ನಿಂದ ಧರ್ಮಪುರ ಕೆರೆಗೆ ಬರು ದಾರಿ ಮಧ್ಯೆ ಮುಂಗುಸವಳ್ಳಿ, ಗೂಳ್ಯ, ಸೂಗೂರು, ಅಜ್ಜಿಕಟ್ಟೆ ಮತ್ತು ಶ್ರವಣಗೆರೆ ಕೆರೆಗಳಿಗೂ ನೀರು ತುಂಬಿಸಲಾಗುವುದು. ಹೋಬಳಿಯ ಜನತೆಯ ಮತ್ತೊಂದು ಬೇಡಿಕೆ ಇದ್ದು, ಮುಂದಿನ ದಿನಗಳಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಅವರು ತಿಳಿಸಿದರು.

1,100 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ

‘ಐತಿಹಾಸಿಕ, ಪುರಾಣ ಪ್ರಸಿದ್ಧ ಧರ್ಮಪುರ ಕೆರೆ ನೀರಿನ ಸಾಮರ್ಥ್ಯ 0.50 ಟಿಎಂಸಿ ಅಡಿ ಆಗಿದ್ದು, 1,100 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿಯೇ ಪೂರಕ ನಾಲೆ ಪ್ರಸ್ತಾವವಾಗಿದ್ದರೂ ಪೂರಕನಾಲೆಯ ಕನಸು ಕನಸಾಗಿಯೇ ಉಳಿದಿತ್ತು. ಸ್ವಾತಂತ್ರ್ಯಾನಂತರ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ ದಿವಂಗತ ಬಿ.ಎಲ್. ಗೌಡರು ಪೂರಕ ನಾಲೆಯ ಬಗ್ಗೆ ಅಧಿವೇಶನದಲ್ಲಿ ಮಾತನಾಡಿದ್ದರು. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಪೂರಕ ನಾಲೆಯ ಕನಸು ಜೀವಂತವಾಗಿಯೇ ಉಳಿದಿತ್ತು. ಅದು ಈಗ ನೆರವೇರಿದೆ’ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಬಿ.ಎಸ್. ರಘುನಾಥ್ ತಿಳಿಸಿದ್ದಾರೆ.

ಗುಳೇ ಹೋಗುವುದನ್ನು ತಪ್ಪಿಸಿದಂತಾಗಿದೆ

‘ಧರ್ಮಪುರ ಕೆರೆಗೆ ನೀರು ಮತ್ತು ಹೋಬಳಿಯನ್ನು ತಾಲ್ಲೂಕು ಮಾಡಬೇಕೆಂದು ಉರುಳು ಸೇವೆ, ಪಂಜಿನ ಮೆರವಣಿಗೆ, 125ದಿನಗಳ ಸರದಿ ಉಪವಾಸ ಸತ್ಯಾಗ್ರಹ ಮಾಡಿದ್ದೆವು. ಆದರೆ, ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೂ, ಹೋರಾಟವನ್ನು ಬಿಟ್ಟಿರಲಿಲ್ಲ. ನಮ್ಮ ತಾಲ್ಲೂಕನ್ನು ಪ್ರತಿನಿಧಿಸಿದ ಎಲ್ಲ ಜನಪ್ರತಿನಿಧಿಗಳು ಬರಿ ಆಶ್ವಾಸನೆಗಳನ್ನು ಮಾತ್ರ ನೀಡಿದ್ದರು. ಆದರೆ, ಶಾಸಕಿ ಪೂರ್ಣಿಮಾ ಶ್ರೀನಿವಾಸ್ ನೂರು ವರ್ಷಗಳ ಬೇಡಿಕೆಯನ್ನು ತಮ್ಮ ಇಚ್ಛಾಶಕ್ತಿಯ ಮೂಲಕ ಈಡೇರಿಸಿದ್ದಾರೆ. ಇದರಿಂದ ಇನ್ನು ಮುಂದೆ ಇಲ್ಲಿಯ ಜನರು ಗುಳೇ ಹೋಗುವುದನ್ನು ತಪ್ಪಿಸಿದ್ದಾರೆ’ ಎಂದು ಧರ್ಮಪುರ ಫೀಡರ್ ಚಾನಲ್ ಹೋರಾಟ ಸಮಿತಿಯ ಮಾಜಿ ಅಧ್ಯಕ್ಷ ಶ್ರವಣಗೆರೆ ಎಂ.ಶಿವಣ್ಣ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು