ಸೋಮವಾರ, ಮಾರ್ಚ್ 27, 2023
29 °C
ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ

ಚಿತ್ರದುರ್ಗ: ‘ವ್ಯಕ್ತಿತ್ವ ಮಠಾಧೀಶರ ಸಂಪತ್ತು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸಾಣೇಹಳ್ಳಿ (ಹೊಸದುರ್ಗ): ಮಠಾಧೀಶರು ರಕ್ಷಿಸಿಕೊಳ್ಳಬಹುದಾದ ನಿಜವಾದ ಸಂಪತ್ತು ಎಂದರೆ ವ್ಯಕ್ತಿತ್ವ. ವ್ಯಕ್ತಿತ್ವ ಸರಿಯಿದ್ದರೆ ಮಾತ್ರ ಆ ವ್ಯಕ್ತಿಗೆ ಬೆಲೆ ಬರುವುದು ಎಂದು ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಠದಲ್ಲಿ ನಡೆಯುತ್ತಿರುವ ಶಿವಸಂಚಾರ ನಾಟಕೋತ್ಸವ ಬೆಳ್ಳಿಹಬ್ಬ ಕಾರ್ಯಕ್ರಮದ 2ನೇ ದಿನವಾದ ಬುಧವಾರ ಬೆಳಿಗ್ಗೆ ನಡೆದ ಪ್ರಾರ್ಥನೆ, ಧ್ಯಾನ, ಮೌನ, ಚಿಂತನ ಸಭೆಯಲ್ಲಿ ‘ಮಾನವೀಯ ಮೌಲ್ಯಗಳು’ ವಿಷಯ ಕುರಿತು ಅವರು ಮಾತನಾಡಿದರು.

‘ಮಾನ ಎಂದರೆ ಘನತೆ, ಗೌರವ, ಪ್ರಮಾಣ, ಅಳತೆ ಎನ್ನುವ ಅರ್ಥಗಳಿವೆ. ಸತ್ಯ, ನ್ಯಾಯ, ಧರ್ಮಗಳೇ ಪ್ರಮಾಣಗಳು. ಇವನ್ನು ಬದುಕಿನಲ್ಲಿ ಅಳವಡಿಸಿಕೊಂಡು ನಡೆಯುವವರೇ ಮಾನವರು. ಇವಿಲ್ಲದವರನ್ನು ಮಾನವ ರೂಪಿ ಮೃಗ ಎನ್ನಬಹುದಷ್ಟೇ. ದೈಹಿಕ, ಆಧ್ಯಾತ್ಮಿಕ, ನೈತಿಕ, ಬೌದ್ಧಿಕ, ಸೌಂದರ್ಯೋಪಾಸನೆ, ಸಾಮಾಜಿಕ, ಭಾವನಾತ್ಮಕ ಇವು 7 ರೀತಿಯ ಮೌಲ್ಯಗಳಾಗಿವೆ. ಪ್ರೀತಿ, ದಯೆ, ಕರುಣೆ, ಅಹಿಂಸೆ, ಸತ್ಯ, ಪ್ರಾಮಾಣಿಕತೆ, ನಿಸ್ವಾರ್ಥತೆಗಳು ಮಾನವೀಯ ಮೌಲ್ಯಗಳು’ ಎಂದು ವಿವರಿಸಿದರು.

ಸಾನ್ನಿಧ್ಯ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ‘ಮೌಲ್ಯ ಎಂದ ಕೂಡಲೇ ವಸ್ತುಗಳ ಬೆಲೆ ನಮ್ಮ ಕಣ್ಣ ಮುಂದೆ ಬರುವುದು. ಅಷ್ಟರ ಮಟ್ಟಿಗೆ ಮನುಷ್ಯ ವಸ್ತುಗಳ ವ್ಯಾಮೋಹಕ್ಕೆ ಬಿದ್ದಿದ್ದಾನೆ. ಆದರೆ ನಿಜವಾದ ಮೌಲ್ಯ ವಸ್ತುಗಳಲ್ಲಿಲ್ಲ. ಬದುಕುವ ವಿಧಾನದಲ್ಲಿದೆ. ಜೀವಜಂತುಗಳಿಗೆ ಮೌಲ್ಯಗಳ ಅಗತ್ಯವಿಲ್ಲ. ಅಗತ್ಯ ಇರುವುದು ಮನುಷ್ಯರಿಗೆ. ಅದರಲ್ಲೂ ಸ್ವಾಮಿಗಳಿಗೆ, ರಾಜಕಾರಣಿಗಳಿಗೆ, ಅಧಿಕಾರಿಗಳಿಗೆ, ದೊಡ್ಡ-ದೊಡ್ಡ ವ್ಯಕ್ತಿಗಳಿಗೆ ಮೌಲ್ಯಗಳ ಅಗತ್ಯವಿದೆ’ ಎಂದು ಸಲಹೆ ನೀಡಿದರು.

ಸಂಗೀತ ಶಿಕ್ಷಕಿ ಕೆ. ಜ್ಯೋತಿ ಮತ್ತು ಎಚ್.ಎಸ್.ನಾಗರಾಜ್ ಸಾಮೂಹಿಕ ಪ್ರಾರ್ಥನೆ ನಡೆಸಿಕೊಟ್ಟರು. ವಿಮಶ್ರೀ ಕಾರ್ಯಕ್ರಮ ನಡೆಸಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.