ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾಲ ನಾಟಕೋತ್ಸವ ಪರಿಕಲ್ಪನೆ ವಿಶಿಷ್ಟವಾದುದು

ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ವಿಶುಕುಮಾರ್
Last Updated 7 ನವೆಂಬರ್ 2020, 2:08 IST
ಅಕ್ಷರ ಗಾತ್ರ

ಹೊಸದುರ್ಗ: ‘ಸಾಣೇಹಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರದ ಪ್ರಪ್ರಥಮ ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದ ಪರಿಕಲ್ಪನೆಯೇ ವಿಶಿಷ್ಟವಾದುದು. ಈ ಹಿಂದೆ ಕಂಪನಿ ನಾಟಕಗಳು ಶಿವಶರಣರ ಬಗ್ಗೆ ಪರಿಚಯಾತ್ಮಕವಾದ ಸಂದೇಶ ನೀಡುವ ಕೆಲಸ ಮಾಡುತ್ತಿದ್ದವು. ಪಂಡಿತಾರಾಧ್ಯ ಶ್ರೀಗಳು ಶಿವಸಂಚಾರದ ಮೂಲಕ ಅದರ ವಿಸ್ತರಣೆ ಮಾಡುತ್ತಿದ್ದಾರೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ಎನ್.ಆರ್.ವಿಶುಕುಮಾರ್ ತಿಳಿಸಿದರು.

ರಾಷ್ಟ್ರೀಯ ಅಂತರ್ಜಾಲ ನಾಟಕೋತ್ಸವದಲ್ಲಿ ಶುಕ್ರವಾರ ಸಂಜೆ ‘ಶಿವಸಂಚಾರ ಮತ್ತು ರಂಗಭೂಮಿ’ ಕುರಿತು ಅವರು ಉಪನ್ಯಾಸ ನೀಡಿದರು.

‘ಇಲ್ಲಿನ ಶಿವಕುಮಾರ ಕಲಾ ಸಂಘ, ಶಿವಸಂಚಾರ, ರಂಗಪ್ರಯೋಗಶಾಲೆ ಅತ್ಯಂತ ಯಶಸ್ವಿಯಾಗಿ ಮುನ್ನಡೆಯುತ್ತಿವೆ. ಶಿವಸಂಚಾರ ಪ್ರತಿವರ್ಷ 3 ನಾಟಕಗಳಂತೆ ಕಳೆದ 24 ವರ್ಷ 69 ನಾಟಕಗಳ ಸಾವಿರಾರು ಪ್ರದರ್ಶನಗಳನ್ನು ನಾಡಿನ ಒಳಹೊರಗೆ ನೀಡಿದೆ. ಇದರಲ್ಲಿ ಪಂಡಿತಾರಾಧ್ಯ ಸ್ವಾಮೀಜಿ ಬರೆದ ‘ಜಂಗಮದೆಡೆಗೆ’, ‘ಅಂಕುಶ’, ‘ಅಕ್ಕನಾಗಲಾಂಬಿಕೆ’, ‘ಮೋಳಿಗೆ ಮಾರಯ್ಯ’, ‘ಅಂತರಂಗ–ಬಹಿರಂಗ’ ಎನ್ನುವ ನಾಟಕಗಳೂ ಇವೆ’ ಎಂದು ವಿವರಿಸಿದರು.

‘ಕುಟುಂಬ ಮತ್ತು ರಂಗಭೂಮಿ’ ಕುರಿತು ಬೆಂಗಳೂರಿನ ಜೆಎಸ್ಎಸ್ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಲಲಿತ ಕಪ್ಪಣ್ಣ, ‘ರಂಗಭೂಮಿಯಲ್ಲಿ ಸೇಡು, ದ್ವೇಷವನ್ನು ನಾನು ನೋಡಿಯೇ ಇಲ್ಲ. ಪ್ರೀತಿ, ವಿಶ್ವಾಸಕ್ಕೆ ಮತ್ತೊಂದು ಹೆಸರೇ ರಂಗಭೂಮಿ. ರಂಗಭೂಮಿಯಲ್ಲಿ ಯಾರಾದರೂ ಹಿರಿಯರು ಸಾವನ್ನಪ್ಪಿದರೆ ಅವರನ್ನು ಗೌರವಪೂರ್ವಕವಾಗಿ ವಿದಾಯ ಹೇಳುವುದಿದೆಯಲ್ಲ ಅದು ಯಾವ ಕುಟುಂಬಕ್ಕಿಂತಲೂ ಕಡಿಮೆಯಿಲ್ಲ. ಕುಟುಂಬದಲ್ಲಿ ರಂಗಭೂಮಿ, ರಂಗಭೂಮಿಯಲ್ಲಿ ಕುಟುಂಬ ಒಂದಕ್ಕೊಂದು ಬೆಸೆದುಕೊಂಡಿವೆ’ ಎಂದು ವಿವರಿಸಿದರು.

ನೇತೃತ್ವ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು. ಶಿವಸಂಚಾರದ ಕಲಾವಿದರಾದ ಕೆ.ಜ್ಯೋತಿ, ಕೆ.ದಾಕ್ಷಾಯಣಿ, ಎಚ್.ಎಸ್.ನಾಗರಾಜ್ ವಚನಗೀತೆ, ಭಾವಗೀತೆ, ರಂಗಗೀತೆಗಳನ್ನು ಹಾಡಿದರು. ಮೈಸೂರಿನ ನಟನಾ ಕಲಾವಿದರು ಉಷಾಹರಣ ನಾಟಕ ಅಭಿನಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT