ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಳಲ್ಕೆರೆ | ವಾರಕ್ಕೊಮ್ಮೆ ಸೂಳೆಕೆರೆ ನೀರು ಸಿದ್ಧತೆ

ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ, ಕೊಳವೆಬಾವಿ ಕೊರೆಸಲು ಸಿದ್ಧತೆ
Last Updated 22 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಹೊಳಲ್ಕೆರೆ:ಪಟ್ಟಣದ ನಾಗರಿಕರಿಗೆ ವಾರಕ್ಕೊಮ್ಮೆ ಸೂಳೆಕೆರೆ ನೀರು ಪೂರೈಕೆಯಾಗುತ್ತಿದ್ದು, ತೀವ್ರ ಸಂಕಷ್ಟ ಅನುಭವಿಸುವಂತೆ ಆಗಿದೆ.

ಕಳೆದ ವರ್ಷ ಸಾಕಷ್ಟು ಮಳೆ ಬಂದು ಭದ್ರಾ ಜಲಾಶಯ ತುಂಬಿತ್ತು. ಇದರಿಂದ ಸೂಳೆಕೆರೆಯ ತುಂಬ ನೀರಿದ್ದರೂ ಸರಿಯಾದ ನಿರ್ವಹಣೆ ಇಲ್ಲದೆ ‘ದೇವರು ಕೊಟ್ಟರೂ ಪೂಜಾರಿ ಕೊಡ’ ಎಂಬ ಪರಿಸ್ಥಿತಿ ಆಗಿದೆ. ಕೆಲವು ಬಡಾವಣೆಗಳಲ್ಲಿ 15 ದಿನಗಳಾದರೂ ನೀರು ಬರದೆ ಪರಿತಪಿಸುವಂತೆ ಆಗಿದೆ. ಕೆಲವರು ದುಬಾರಿ ಹಣ ನೀಡಿ ಟ್ಯಾಂಕರ್‌ನಿಂದ ನೀರು ತರಿಸಿಕೊಳ್ಳುತ್ತಿದ್ದಾರೆ. ಪಟ್ಟಣದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳೂ ಸರಿಯಾಗಿ ಕಾರ್ಯ ನಿರ್ವಹಿಸದೆ ಜನ ನೀರಿಗಾಗಿ ಗಂಟೆಗಟ್ಟಲೇ ಕಾಯುವ ಪರಿಸ್ಥಿತಿ ಇದೆ.

ಪೈಪ್‌ಲೈನ್ ಸಮಸ್ಯೆ:‘ಬಿ.ದುರ್ಗ ಹೋಬಳಿಯ ಹಿರೇಕಂದವಾಡಿಯಲ್ಲಿ ಸೂಳೆಕೆರೆ ನೀರು ಶುದ್ಧೀಕರಣ ಘಟಕ ಇದೆ. ಇಲ್ಲಿಂದ ಪಟ್ಟಣದ ಮಾರ್ಗದ 9 ಹಳ್ಳಿಗಳಿಗೂ ಸೂಳೆಕೆರೆ ನೀರು ವಿತರಣೆ ಆಗುತ್ತಿದೆ. ನೀರು ಹರಿಯುವ ಒತ್ತಡದಿಂದ ಆಗಾಗ ಪೈಪ್‌ಲೈನ್ ಒಡೆದು ಹೋಗುತ್ತದೆ. ಇದನ್ನು ದುರಸ್ತಿ ಮಾಡುವುದೇ ನಮಗೆ ದೊಡ್ಡ ಸವಾಲಾಗಿದೆ. ಶುದ್ಧೀಕರಣ ಘಟಕದಲ್ಲಿ ಒಮ್ಮೆ ವಿದ್ಯುತ್ ಹೋದರೆ ಮತ್ತೆ ಮೋಟರ್ ಚಾಲನೆ ಆಗಲು ನಾಲ್ಕಾರು ಗಂಟೆ ಬೇಕು’ ಎನ್ನುತ್ತಾರೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ವಾಸಿಂ.

ಗ್ರಾಮೀಣ ಭಾಗದಲ್ಲಿ ಸಮಸ್ಯೆ ಕಡಿಮೆ:ತಾಲ್ಲೂಕಿನ ಗ್ರಾಮೀಣ ಭಾಗದಲ್ಲಿ ಈ ವರ್ಷ ಕುಡಿಯುವ ನೀರಿನ ಸಮಸ್ಯೆ ಕಡಿಮೆ ಇದೆ. ಕಳೆದ ವರ್ಷ ಉತ್ತಮ ಮಳೆ ಸುರಿದು ಕೆರೆ, ಕಟ್ಟೆಗಳಲ್ಲಿ ನೀರು ಸಂಗ್ರಹ ಆಗಿದ್ದರಿಂದ ಕೊಳವೆಬಾವಿಗಳಲ್ಲಿ ನೀರು ಕಡಿಮೆ ಆಗಿಲ್ಲ. ಆದರೆ ವಿದ್ಯುತ್ ಸಮಸ್ಯೆಯಿಂದ ಸರಿಯಾಗಿ ಕುಡಿಯುವ ನೀರು ಸಿಗುತ್ತಿಲ್ಲ ಎಂದು ಗ್ರಾಮೀಣ ಭಾಗದ ಜನರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

‘ಸಾಮಾನ್ಯವಾಗಿ ಎಲ್ಲಾ ಗ್ರಾಮಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಶೇ 90ರಷ್ಟು ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ 8 ಘಟಕಗಳು ದುರಸ್ತಿಯಲ್ಲಿವೆ. ಗುಂಜಿಗನೂರು ಕೊರಚರ ಹಟ್ಟಿಯಲ್ಲಿ ಮಾತ್ರ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಮುಂದೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗುವ ಸಂಭವ ಇರುವ 21 ಹಳ್ಳಿಗಳನ್ನು ಗುರುತಿಸಲಾಗಿದೆ. ಈ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಲು ಸಿದ್ಧತೆ ಮಾಡಿಕೊಂಡಿದ್ದೇವೆ. ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ಟೆಂಡರ್ ನೀಡಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ತಾರಾನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT