ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಹೊಸ ವರ್ಷದ ಸ್ವಾಗತಕ್ಕೆ ಅರಳಿ ನಿಂತ ಮರಗಿಡಗಳು

Last Updated 4 ಏಪ್ರಿಲ್ 2019, 9:17 IST
ಅಕ್ಷರ ಗಾತ್ರ

ಚನ್ನಗಿರಿ: ತಾಲ್ಲೂಕಿನಾದ್ಯಂತ ಏ. 6, 7ರಂದು ಯುಗಾದಿ ಹಬ್ಬವನ್ನು ಆಚರಿಸಲು ಜನರು ಸಿದ್ಧತೆ ನಡೆಸಿದ್ದರೆ, ಹೊಸ ವರ್ಷಕ್ಕೆ ಸ್ವಾಗತವನ್ನು ಕೋರಲು ಪರಿಸರದಲ್ಲಿನ ಮರಗಿಡಗಳು ಹೊಸ ಚಿಗರುನ್ನು ಬಿಟ್ಟು, ಹಸಿರನ್ನು ಸೂಸುತ್ತಾ ಕಣ್ಮನ ಸೆಳೆಯುವ ಮೂಲಕ ಸಜ್ಜಾಗಿ ನಿಂತಿವೆ.

'ಯುಗಾದಿ ಕಳೆದರೂ, ಯುಗಾದಿ ಮರಳಿ ಬರುತಿದೆ' ಎನ್ನುವ ಹಾಡಿನ ಸಾರದಂತೆ, 'ವಸಂತ ಕಾಲ ಬಂದಾಗ ಮಾವು ಚಿಗುರಲೇಬೇಕು, ಕೋಗಿಲೆ ಹಾಡಲೇಬೇಕು' ಎನ್ನುವಂತೆ, 'ಹೊಸ ಚಿಗುರು, ಹಳೆ ಬೇರು, ಕೂಡಿರಲು ಮರ ಸೊಬಗು' ಎನ್ನುವ ಹಾಡಿನ ಸಾಲಿನಂತೆ ಮರಗಿಡಗಳು ತಮ್ಮಲ್ಲಿನ ಹಳೆಯ ಎಲೆಗಳನ್ನು ಉದುರಿಸಿ, ಹೊಸ ಚಿಗರನ್ನು ಬಿಟ್ಟು ಕಂಗೊಳಿಸುತ್ತಾ ವಸಂತ ಕಾಲವನ್ನು ಸ್ವಾಗತಿಸಲು ಸಜ್ಜಾಗಿ ನಿಂತು ಕಣ್ಮನ ಸೆಳೆಯುತ್ತಿವೆ.

ಮಾವು, ಬೇವು, ಹುಣಿಸೆ, ಹೊಂಗೆ, ಬೀಟೆ, ನಂದಿ, ಸಾಗುವಾನಿ, ಹೊನ್ನೆ, ಮತ್ತಿ ಮುಂತಾದ ಮರಗಳು ಹೊಸದಾಗಿ ಚಿಗುರನ್ನು ಬಿಟ್ಟು ಚೈತ್ರ ಮಾಸದ ಆರಂಭಕ್ಕೆ ಸ್ವಾಗತ ಕೋರಲು ಸಜ್ಜಾಗಿವೆ. ಸಾಮಾನ್ಯವಾಗಿ ಹಿಂದೂ ಪಂಚಾಗದ ಪ್ರಕಾರ ಏ. 6ರಿಂದ ಹೊಸ ವರ್ಷ ಆರಂಭವಾಗುತ್ತದೆ. ಯುಗಾದಿ ಹಿಂದೂಗಳಿಗೆ ಅತ್ಯಂತ ಪವಿತ್ರವಾದ ದೊಡ್ಡ ಹಬ್ಬವಾಗಿದೆ. ಈ ಹಬ್ಬಕ್ಕೆ ಎಲ್ಲರ ಮನೆಗಳಲ್ಲೂ ಕೂಡಾ ಹೊಸ ಆಹಾರ ಪದಾರ್ಥಗಳನ್ನು ತಯಾರಿಸುವುದು ಹಿಂದಿನಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ.

ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆಯಿಂದ ಹಿಡಿದು, ಹಪ್ಪಳ, ಸಂಡಿಗೆ, ಶ್ಯಾವಿಗೆ, ಉಪ್ಪಿನಕಾಯಿ ಮುಂತಾದ ಆಹಾರ ಪದಾರ್ಥಗಳನ್ನು ಕೂಡಾ ಹೊಸದಾಗಿ ತಯಾರಿಸಿಕೊಂಡು ಹಬ್ಬವನ್ನು ಆಚರಿಸಲು ಸಿದ್ಧತೆಯನ್ನು ಮಾಡಿಕೊಂಡಿರುತ್ತಾರೆ. ಈಗಾಗಲೇ 1 ತಿಂಗಳಿಂದ ಎಲ್ಲರ ಮನೆಗಳಲ್ಲೂ ಕೂಡಾ ಯುಗಾದಿ ಹಬ್ಬದ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಈ ಹಬ್ಬವನ್ನು ಎಲ್ಲಾ ಹಿಂದೂಗಳು ಕಡ್ಡಾಯವಾಗಿ ಆಚರಿಸುವುದರಿಂದ ಈ ಹಬ್ಬ ಅತ್ಯಂತ ದುಬಾರಿಯಾದ ಹಬ್ಬವಾಗಿದೆ.

ಸಾಮಾನ್ಯವಾಗಿ ಪ್ರತಿ ವರ್ಷ ಜನವರಿ ತಿಂಗಳಲ್ಲಿ ಮಾವು ಹೂವು ಬಿಟ್ಟು, ನಂತರ ಹೀಚಾಗಿ, ಮಾರ್ಚ್ ತಿಂಗಳೊತ್ತಿಗೆ ಕಾಯಿ ಬಿಡಲು ಆರಂಭಿಸುತ್ತಿದ್ದವು. ಆದರೆ ಈ ಬಾರಿ ಹವಾಮಾನ ವೈಪ್ಯರೀತ್ಯದಿಂದಾಗಿ ಮಾರ್ಚ ತಿಂಗಳಲ್ಲಿ ಹೂವು ಬಿಟ್ಟು ಏಫ್ರಿಲ್ ತಿಂಗಳಲ್ಲಿ ಕಾಯಿ ಬಿಡಲು ಪ್ರಾರಂಭಿಸಿವೆ. ಇನ್ನು ಕೋಗಿಲೆಗಳು ಹೊಂಗೆ, ಮಾವಿನ ಚಿಗುರಿನ ರಸವನ್ನು ಹೀರಿ ಮಧುರ ಕಂಠದಿಂದ ಹಾಡಲು ಸಜ್ಜಾಗಿವೆ. ಒಟ್ಟಾರೆ ಇಡೀ ಪರಿಸರವೇ ಯುಗಾದಿ ಹಬ್ಬದ ಸಂಭ್ರಮವನ್ನು ಆಚರಿಸಲು ಸಜ್ಜಾಗಿ ನಿಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT