ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗ: ಸಾಮೂಹಿಕ ವಿವಾಹದಿಂದ ಬಡವರ ಕಲ್ಯಾಣ

ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ ಬಸವಪ್ರಭು ಸ್ವಾಮೀಜಿ ಅಭಿಪ್ರಾಯ
Last Updated 6 ಫೆಬ್ರುವರಿ 2023, 5:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಆಧುನಿಕ ಯುಗದಲ್ಲೂ ವರದಕ್ಷಿಣಿ ಸಾಮಾಜಿಕ ಪಿಡುಗಾಗಿ ಕಾಡುತ್ತಿದೆ. ವಿವಾಹ ಮಹೋತ್ಸವದ ಸಮಯದಲ್ಲಿ ಹಣ, ಒಡವೆ ತೆಗೆದುಕೊಳ್ಳುವವರು ಎಂದಿಗೂ ಆದರ್ಶ ವ್ಯಕ್ತಿಯಾಗಲು ಸಾಧ್ಯವಿಲ್ಲ ಎಂದು ಮುರುಘಾ ಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಮುರುಘಾ ಮಠದ ಅನುಭವ ಮಂಟಪದಲ್ಲಿ ಬಸವ ಕೇಂದ್ರ ಹಾಗೂ ಜಗದ್ಗುರು ಮುರುಘ ರಾಜೇಂದ್ರ ಬೃಹನ್ಮಠದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ
33ನೇ ವರ್ಷದ ಎರಡನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಾಮೂಹಿಕ ವಿವಾಹ ಮಹೋತ್ಸವದಿಂದ ಬಡವರ ಕಲ್ಯಾಣವಾಗಿದೆ. ಬಡವರ ಬಂಧು ಮುರುಘಾ ಮಠ. ಇದೊಂದು ಭಾವೈಕ್ಯ ಕೇಂದ್ರ. ವರದಕ್ಷಿಣೆ ಹಾಗೂ ಅದ್ಧೂರಿ ಮದುವೆಗಳಿಗೆ ಕಡಿವಾಣ ಹಾಕುವ ಮೂಲಕ ಸಮ ಸಮಾಜ ನಿರ್ಮಾಣವಾಗಬೇಕು. ಸಂಸಾರದಲ್ಲಿ ದಂಪತಿ ಮಧ್ಯೆ ಪ್ರತಿಷ್ಠೆ ಇಣುಕದಂತೆ ಜಾಗೃತೆ ವಹಿಸಿ, ಸದಾ ಪ್ರೀತಿ, ನೆಮ್ಮದಿಯ ಜೀವನ ಸಾಗಿಸಬೇಕು. ನಂಬಿಕೆ ಎಂಬ ಔಷಧ ನಮ್ಮಲ್ಲಿರಬೇಕು’ ಎಂದು ತಿಳಿಸಿದರು.

ಜಗಳೂರಿನ ಗವಿಸಿದ್ದೇಶ್ವರ ಮಠದ ಪ್ರಭುಲಿಂಗ ಸ್ವಾಮೀಜಿ ಮಾತನಾಡಿ, ‘ಯಾವುದೇ ಜಾತಿಭೇದ ಇಲ್ಲದೆ 33 ವರ್ಷದಿಂದ ಮುರುಘಾ ಮಠ ಸಾಮೂಹಿಕ ಕಲ್ಯಾಣ ಮಹೋತ್ಸವವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಶರಣರನ್ನು ಒಗ್ಗೂಡಿಸುವ ಶಕ್ತಿ ಶ್ರೀಮಠಕ್ಕೆ ಇದೆ’ ಎಂದರು.

ಶಿವಶರಣ ಹರಳಯ್ಯ ಗುರುಪೀಠದ ಬಸವ ಹರಳಯ್ಯ ಸ್ವಾಮೀಜಿ ಮಾತನಾಡಿ, ‘ದೀನ ದಲಿತರು, ಮೇಲ್ವರ್ಗ ಮತ್ತು ಕೆಳವರ್ಗದವರು ಜತೆಗೆ ಕುಳಿತು ವಿವಾಹವಾಗುವ ಮೂಲಕ ಅಸ್ಪೃಶ್ಯತೆ ನಿವಾರಣೆಯಾಗಬೇಕು ಎಂಬುದು ಸಾಮೂಹಿಕ ಕಲ್ಯಾಣ ಮಹೋತ್ಸವದ ಉದ್ದೇಶ. ಅದ್ಧೂರಿ ವಿವಾಹ ಮಹೋತ್ಸವಗಳ ಸಂಖ್ಯೆ ಕಡಿಮೆ ಮಾಡಲು ಸರಳ ವಿವಾಹಗಳನ್ನು ಶ್ರೀಗಳು ನಡೆಸುತ್ತಿದ್ದಾರೆ’ ಎಂದು ತಿಳಿಸಿದರು.

‘ಸತ್ಯ ಯಾವಾಗಲೂ ಉರಿಯುವ ಸೂರ್ಯನಿದ್ದಂತೆ. ಇಡೀ ರಾಜ್ಯ, ದೇಶಕ್ಕೆ ನೀತಿಬೋಧನೆಯನ್ನು ಮುರುಘಾ ಮಠ ಹೇಳಿಕೊಟ್ಟಿದೆ. ಇದೊಂದು ಶಕ್ತಿಪೀಠವಾಗಿದ್ದು, ಮನಸ್ಸುಗಳು ಒಂದಾದಾಗ ಅದು ಕಲ್ಯಾಣ ಮಹೋತ್ಸವವಾಗುತ್ತದೆ’ ಎಂದು ಹೇಳಿದರು.

ಕುರುಬ (ವರ)- ಕ್ರಿಶ್ಚಿಯನ್‌ (ವಧು) ಅಂತರ್‌ ಧರ್ಮೀಯ ಸೇರಿ ನಾಯಕ-2 ಮತ್ತು ವಿಶ್ವಕರ್ಮ-2 ಸೇರಿ ಒಟ್ಟು 5 ಜೋಡಿಗಳ ವಿವಾಹ ನೆರವೇರಿತು. ಮುಖಂಡರಾದ ಪೈಲ್ವಾನ್‌ ತಿಪ್ಪೇಸ್ವಾಮಿ, ಜ್ಞಾನಮೂರ್ತಿ, ಬಸವಲಿಂಗ ದೇವರು, ಪ್ರಕಾಶ ದೇವರು ಇದ್ದರು.

**

33ವರ್ಷಗಳಿಂದ ಸತತವಾಗಿ ವಿವಾಹ ಮಹೋತ್ಸವ ನಡೆಸುವುದು ಸುಲಭವಲ್ಲ. ಸತ್ಯ ಹೇಳಿದ್ದರಿಂದ ಅನೇಕ ದಾರ್ಶನಿಕರು ನೋವು ಅನುಭವಿಸಿದರು.

-ಬಸವ ಹರಳಯ್ಯ ಸ್ವಾಮೀಜಿ, ಶಿವಶರಣ ಹರಳಯ್ಯ ಗುರುಪೀಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT