ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿಭಾಷಾ ಸೂತ್ರ ಕರ್ನಾಟಕಕ್ಕೆ ಮಾತ್ರ ಏಕೆ?: ದೊಡ್ಡರಂಗೇಗೌಡ ಪ್ರಶ್ನೆ

ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಪ್ರಶ್ನೆ
Last Updated 6 ಜನವರಿ 2023, 8:37 IST
ಅಕ್ಷರ ಗಾತ್ರ

ಹಿರಿಯೂರು: ‘ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದ ತ್ರಿಭಾಷಾ ಸೂತ್ರ ಕರ್ನಾಟಕಕ್ಕೆ ಮಾತ್ರ ಏಕೆ? ನಮ್ಮಲ್ಲೂ ದ್ವಿಭಾಷಾ ನೀತಿ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕು’ ಎಂದು ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಸಮ್ಮೇಳನಾಧ್ಯಕ್ಷ ದೊಡ್ಡರಂಗೇಗೌಡ ಆಗ್ರಹಿಸಿದರು.

ಹಾವೇರಿಗೆ ಹೊರಟಿದ್ದ ದೊಡ್ಡರಂಗೇಗೌಡರನ್ನು ಗುರುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಿರಿಯೂರು ನಗರಕ್ಕೆ ಬರಮಾಡಿಕೊಂಡು ಸನ್ಮಾನಿಸಿದ ನಂತರ ಅವರು ಮಾತನಾಡಿದರು.

‘ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಗಡಿ ಸಮಸ್ಯೆ ಉಳಿದಿದೆ. ಹೀಗಾದಲ್ಲಿ ನಮ್ಮ ಕನಸಿನ ನಾಡನ್ನು ಕಟ್ಟುವುದು ಹೇಗೆ? ಕನ್ನಡನಾಡಿನಲ್ಲಿ ಕನ್ನಡ ಭಾಷೆಗೆ ಸಾರ್ವಭೌಮ ಸ್ಥಾನ ಇರಬೇಕೆಂದು ಇನ್ನೂ ಹೋರಾಟ ನಡೆಸಬೇಕಿರುವುದು ಕನ್ನಡಿಗರಿಗೆ ಬೇಸರದ ಸಂಗತಿಯಲ್ಲವೆ? ರಾಜ್ಯದಲ್ಲಿ ಉದ್ಯೋಗ ಬೇಕು ಎನ್ನುವವರಿಗೆ ಕನ್ನಡ ಕಲಿಕೆಯನ್ನು ಕಡ್ಡಾಯ ಮಾಡಿದರೆ ತಪ್ಪೇನು? ತ್ರಿಭಾಷಾ ಶಿಕ್ಷಣ ವ್ಯವಸ್ಥೆ ಯನ್ನು ಮೊದಲು ಬದಲಾಯಿಸಬೇಕು’ ಎಂದು ಅವರು ತಾಕೀತು ಮಾಡಿದರು.

‘ಆಸಕ್ತಿ ಇದ್ದವರು ಎಷ್ಟು ಭಾಷೆಗಳನ್ನು ಬೇಕಿದ್ದರೂ ಕಲಿಯಲಿ. ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುವುದನ್ನು ಮೊದಲು ನಿಲ್ಲಿಸಬೇಕು. ಸ್ಥಳೀಯ ಭಾಷೆಗಳನ್ನು ಉಳಿಸಿ–ಬೆಳೆಸಲು ಪ್ರೋತ್ಸಾಹ ನೀಡಬೇಕು. ಹಾವೇರಿಯ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡದ ಮನಸುಗಳೆಲ್ಲ ಒಂದಾಗಿ ಪಾಲ್ಗೊಳ್ಳಬೇಕು’ ಎಂದು ದೊಡ್ಡರಂಗೇಗೌಡ ಮನವಿ ಮಾಡಿದರು.

ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಎಂ. ನಾಗೇಶ್, ಎಚ್. ಕೃಷ್ಣಮೂರ್ತಿ, ಅಸ್ಗರ್ ಅಹಮದ್, ಎಚ್.ಎನ್. ನರಸಿಂಹಯ್ಯ, ಗ್ಯಾಸ್ ವಿಜಯ್, ಉದ್ಯಮಿ ಮಹೇಶ್, ಬಿ. ರಮೇಶ್, ಎಂ.ಪಿ. ತಿಪ್ಪೇಸ್ವಾಮಿ, ಯೋಗಾನಂದ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT