ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ವರ ಬಂದರೆ ಕೂಲಿ ಕೆಲಸ ಹೇಗೆ ಮಾಡಲಿ?: ಲಸಿಕೆ ಹಾಕಿಸಿಕೊಳ್ಳದ ಮಹಿಳೆಯರ ಸಬೂಬು

Last Updated 18 ಸೆಪ್ಟೆಂಬರ್ 2021, 2:14 IST
ಅಕ್ಷರ ಗಾತ್ರ

ಹೊಳಲ್ಕೆರೆ: ‘ಮೇಡಂ ಲಸಿಕೆ ಹಾಕಿಸಿಕೊಂಡರೆ ನಮಗೆ ಜ್ವರ ಬರುತ್ತದೆ. ಜ್ವರ ಬಂದರೆ ನಾವು ಕೂಲಿ ಕೆಲಸಕ್ಕೆ ಹೋಗಲು ಆಗುವುದಿಲ್ಲ. ಮುಂದಿನ ವಾರ ನಮ್ಮೂರಲ್ಲಿ ಹಬ್ಬ ಇದೆ, ಹಬ್ಬ ಮುಗಿದ ಮೇಲೆ ಹಾಕಿಸಿಕೊಳ್ಳುತ್ತೇವೆ. ಇಂಜೆಕ್ಷನ್ ಮಾಡಿಸಿಕೊಂಡರೆ ನಮಗೆ ನೋವಾಗುತ್ತದೆ…’

- ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಶುಕ್ರವಾರ ತಾಲ್ಲೂಕಿನ ಕಾಮಸಮುದ್ರ ಹಾಗೂ ಚಿತ್ರಹಳ್ಳಿ ಗೊಲ್ಲರಹಟ್ಟಿಗಳಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಜನರ ಮನವೊಲಿಸುವಾಗ ಮಹಿಳೆಯರು ನೀಡಿದ ಸಬೂಬುಗಳಿವು.

ಜಿಲ್ಲಾಧಿಕಾರಿ ಬರುತ್ತಿದ್ದಂತೆ ಕೆಲವರು ಓಡಿಹೋಗಿ ಮನೆಯ ಕೋಣೆಯಲ್ಲಿ ಅವಿತುಕೊಂಡರು. ಮತ್ತೆ ಕೆಲವರು ಲಸಿಕೆ ಹಾಕಿಸಿಕೊಳ್ಳದಿದ್ದರೂ ‘ನಾವು ಮುಂಚೆಯೇ ಲಸಿಕೆ ಹಾಕಿಸಿಕೊಂಡಿದ್ದೇವೆ’ ಎಂದು ಸುಳ್ಳು ಹೇಳಿದರು. ಜಿಲ್ಲಾಧಿಕಾರಿ ಮನೆಯಲ್ಲಿ ಅವಿತುಕೊಂಡಿದ್ದವರನ್ನು ಹೊರಗೆ ಕರೆಸಿ ಬುದ್ದಿವಾದ ಹೇಳಿದರು. ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದವರಿಗೆ ಲಸಿಕೆಯ ಮಹತ್ವದ ಬಗ್ಗೆ ಮನವರಿಕೆ ಮಾಡಿಕೊಟ್ಟರು. ‘ನಾವೇನು ನಿಮ್ಮ ಆಸ್ತಿ ಬರೆಸಿಕೊಳ್ಳಲು ಬಂದಿಲ್ಲ. ನಿಮ್ಮ ಆರೋಗ್ಯ ಚೆನ್ನಾಗಿರಲಿ ಎಂದು ಇಷ್ಟೆಲ್ಲ ಪ್ರಯತ್ನ ಮಾಡುತ್ತಿದ್ದೇವೆ’ ಎಂದು ಮಹಿಳೆಯರ ಮನವೊಲಿಸಿದರು.

ಇದುವರೆಗೆ ಮೊದಲ ಡೋಸ್ ಲಸಿಕೆಯನ್ನೂ ಹಾಕಿಸಿಕೊಳ್ಳದ ಬಿಎ ಪದವೀಧರ ಮಹಿಳೆಯೊಬ್ಬರನ್ನು ಕಂಡು, ‘ವಿದ್ಯಾವಂತರಾದ ನೀವೇ ಹೀಗೆ ಮಾಡಿದರೆ ಹೇಗೆ? ನೀವು ಲಸಿಕೆ ಹಾಕಿಸಿಕೊಂಡು ಇತರರಿಗೂ ಪ್ರೇರಣೆ ನೀಡಬೇಕು’ ಎಂದು ಡಿಸಿ ಸಲಹೆ ನೀಡಿದರು.

‘ಈ ಕಾಲದಲ್ಲೂ ಮೂಢನಂಬಿಕೆ ಇದೆ ಎಂದರೆ ಹೇಗೆ? ಸರ್ಕಾರ ಕೋವಿಡ್ ನಿರ್ಮೂಲನೆಗೆ ಶತ ಪ್ರಯತ್ನ ಮಾಡುತ್ತಿದೆ. ಸಾರ್ವಜನಿಕರು ನಮ್ಮೊಂದಿಗೆ ಸಹಕರಿಸಬೇಕು. ಎಲ್ಲರೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು’ ಎಂದರು.

ಜಿಲ್ಲಾಧಿಕಾರಿ ಮಾತಿಗೆ ಮನ್ನಣೆ ನೀಡಿದ ಮಹಿಳೆಯರು ಲಸಿಕೆ ಹಾಕಿಸಿಕೊಳ್ಳಲು ಮುಂದಾದರು.ಲಸಿಕೆ ಮಹಾ ಅಭಿಯಾನದಲ್ಲಿ ಶುಕ್ರವಾರ ಒಂದೇ ದಿನ 12,000 ಜನರಿಗೆ ಲಸಿಕೆ ಹಾಕಲಾಯಿತು. ತಹಶೀಲ್ದಾರ್ ರಮೇಶಾಚಾರಿ, ತಾಲ್ಲೂಕು ವೈದ್ಯಾಧಿಕಾರಿ ಡಾ.ಜಯಸಿಂಹ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT