ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಸಹಾಯ ಸಂಘದ ಉತ್ಪನ್ನಕ್ಕೆ ‘ಸ್ತ್ರೀಶಕ್ತಿ’

Last Updated 8 ಮಾರ್ಚ್ 2020, 11:24 IST
ಅಕ್ಷರ ಗಾತ್ರ

ಚಿತ್ರದುರ್ಗ: ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘದ ಮಹಿಳೆಯರು ತಯಾರಿಸುವ ಉತ್ಪನ್ನಗಳ ಮೌಲ್ಯವರ್ಧನೆ ಹಾಗೂ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತೆರೆದ ಮಳಿಗೆಗಳು ಹೊಸ ಭರವಸೆಗಳನ್ನು ಹುಟ್ಟುಹಾಕಿವೆ. ಪ್ರಾಯೋಗಿಕ ಜ್ಞಾನ ಪಡೆದ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿವೆ.

ಚಿತ್ರದುರ್ಗ ಜಿಲ್ಲೆಯ ಮಹಿಳಾ ಸ್ವಸಹಾಯ, ಸ್ತ್ರೀಶಕ್ತಿ ಸಂಘಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರು ಮಳಿಗೆ ತೆರೆಯಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಒಂದೊಂದು ಸಂಘಕ್ಕೆ ಈ ಮಳಿಗೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ತಾವು ತಯಾರಿಸಿದ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರುಕಟ್ಟೆ ಪ್ರವೇಶಿಸಲು ಇದರಿಂದ ಅನುಕೂಲವಾಗುತ್ತಿದೆ.

ಜಿಲ್ಲಾಧಿಕಾರಿ ಆರ್‌.ವಿನೋತ್ ಪ್ರಿಯಾ ಅವರ ಸಲಹೆ ಮೇರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮಹಿಳಾ ಸಂಘಗಳಿಗೆ ತರಬೇತಿ ನೀಡುತ್ತಿದೆ. ತಾಲ್ಲೂಕಿಗೆ ಒಂದರಂತೆ ಆರು ಹಾಗೂ ಹೆಚ್ಚುವರಿಯಾಗಿ ಒಂದು ತಂಡವನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಆಯ್ಕೆ ಮಾಡಲಾಗುತ್ತದೆ. ಅತ್ಯುತ್ತಮವಾಗಿ ಕಾರ್ಯನಿರ್ವಹಿಸುವ, ಉತ್ತಮ ಪದಾರ್ಥಗಳನ್ನು ಉತ್ಪಾದಿಸುವ ಸಂಘಕ್ಕೆ ಆದ್ಯತೆ ನೀಡಲಾಗುತ್ತಿದೆ. ಅಕ್ಟೋಬರ್ 2ರಂದು ಆರಂಭವಾದ ಈ ಮಳಿಗೆಗಳಲ್ಲಿ ಎರಡನೇ ತಂಡ ಕಾರ್ಯನಿರ್ವಹಿಸುತ್ತಿದೆ.

ಮಹಿಳೆಯರೇ ಉತ್ಪಾದಿಸುವ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಸಿರಿಧಾನ್ಯಗಳ ಪದಾರ್ಥಗಳು ಹೆಚ್ಚಾಗಿ ಇಲ್ಲಿ ಪ್ರದರ್ಶನ ಕಾಣುತ್ತವೆ. ಜಿಲ್ಲಾಧಿಕಾರಿ ಕಚೇರಿಗೆ ಬರುವವರೇ ಈ ಮಳಿಗೆಗಳ ಗ್ರಾಹಕರು. ವಾಹನ ನಿಲುಗಡೆ ಸ್ಥಳದ ಪಕ್ಕದಲ್ಲಿರುವ ಮಳಿಗೆಗಳು ಸಾರ್ವಜನಿಕರನ್ನೂ ಸೆಳೆಯುತ್ತಿವೆ. ಲೋಕೋಪಯೋಗಿ ಇಲಾಖೆಗೆ ಬರುವವರು, ಪಾದಚಾರಿಗಳು, ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು ಸೇರಿ ಅನೇಕರು ಈ ಮಳಿಗೆಗಳಲ್ಲಿ ವಸ್ತುಗಳನ್ನು ಖರೀದಿಸುತ್ತಾರೆ.

‘ಜಿಲ್ಲೆಯಲ್ಲಿ ಬಹುತೇಕ ಸ್ತ್ರೀಶಕ್ತಿ ಸಂಘಗಳು ಉತ್ತಮ ಕಾರ್ಯ ನಿರ್ವಹಿಸುತ್ತಿವೆ. ಸಹಕಾರ ಮನೋಭಾವದಲ್ಲಿ ಆಹಾರ ಪದಾರ್ಥ ತಯಾರಿಸುತ್ತಿವೆ. ಆ ಸರಕನ್ನು ಮಾರುಕಟ್ಟೆಗೆ ತರುವ, ಗ್ರಾಹಕರನ್ನು ಸೆಳೆಯುವ ಕೌಶಲದ ಕೊರತೆ ಇದೆ. ಈ ಕ್ಷೇತ್ರದಲ್ಲಿ ಯಶಸ್ಸು ಗಳಿಸಿದವರಿಂದ ಮಾರ್ಗದರ್ಶನ ನೀಡಲಾಗುತ್ತದೆ. ಅಗತ್ಯ ಸಾಲ–ಸೌಲಭ್ಯ ಒದಗಿಸಿ ನೈತಿಕ ಬೆಂಬಲ ನೀಡುವ ಕೆಲಸವನ್ನು ಜಿಲ್ಲಾಡಳಿತ ಮಾಡುತ್ತಿದೆ’ ಎನ್ನುತ್ತಾರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಕೆ.ಎಸ್‌.ರಾಜಾ ನಾಯಕ್‌.

ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳುವ ಉದ್ದೇಶದಿಂದ ಆರಂಭಿಸಿದ ವ್ಯಾಪಾರವನ್ನು ಕಾನೂನುಬದ್ಧಗೊಳಿಸುವ ಕ್ರಮವನ್ನು ತಿಳಿಸಲಾಗುತ್ತದೆ. ಆಹಾರ ಪದಾರ್ಥಗಳ ಮಾರಾಟಕ್ಕೆ ಅಗತ್ಯವಿರುವ ಪರವಾನಗಿ ನೀಡಲಾಗುತ್ತದೆ. ಪ್ರತಿ ಸ್ವಸಹಾಯ ಸಂಘಕ್ಕೆ ಒಂದು ಮಳಿಗೆಯನ್ನು ನೀಡಲಾಗುತ್ತದೆ. ಮೂರು ತಿಂಗಳೊಳಗೆ ವ್ಯಾಪಾರ ಕೌಶಲವನ್ನು ಸಂಘದ ಸದಸ್ಯರು ಪ್ರದರ್ಶಿಸುವ ಅಗತ್ಯವಿದೆ. ಕಾಲಮಿತಿ ಮುಗಿದ ಬಳಿಕ ಅವಕಾಶವನ್ನು ಮತ್ತೊಂದು ಸಂಘಕ್ಕೆ ನೀಡಲಾಗುತ್ತದೆ.

ಆರು ಮಳಿಗೆಗಳಲ್ಲಿ ಒಂದನ್ನು ಹೋಟೆಲ್‌ಗೆ ಮೀಸಲಿಡಲಾಗಿದೆ. ಟೀ–ಕಾಫಿ, ತಿಂಡಿ ಹಾಗೂ ಊಟವನ್ನು ತಯಾರಿಸಿ ಗ್ರಾಹಕರಿಗೆ ಒದಗಿಸುವ ಕೌಶಲವನ್ನು ಪರಿಣತರು ಕಲಿಸಿದ್ದಾರೆ. ಆಹಾರದ ಗುಣಮಟ್ಟ ಕಾಪಾಡಿಕೊಳ್ಳುವ ಬಗೆ, ಶುಚಿತ್ವದ ಅಗತ್ಯವನ್ನು ಮನವರಿಕೆ ಮಾಡಿಕೊಡಲಾಗಿದೆ. ಗ್ರಾಹಕರ ನಿರೀಕ್ಷೆಗಳು ಏನು ಎಂಬುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ.

‘ಪದಾರ್ಥಗಳನ್ನು ಮಾರಾಟ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಮಳಿಗೆಗಳನ್ನು ಒದಗಿಸಿಲ್ಲ. ಮಹಿಳೆಯರು ಪ್ರಾಯೋಗಿಕ ಜ್ಞಾನ ಪಡೆಯಲು ನೆರವಾಗುವ ಉದ್ದೇಶದಿಂದ ಈ ಪ್ರಯತ್ನಕ್ಕೆ ಕೈಹಾಕಿದ್ದೇವೆ. ಮೊದಲ ಸುತ್ತಿನಲ್ಲಿ ಏಳು ಸಂಘಗಳು ಯಶಸ್ವಿಯಾಗಿ ನಿರ್ವಹಿಸಿವೆ. ಅತ್ಯುತ್ತಮ ಏಳು ಸ್ವಸಹಾಯ, ಸ್ತ್ರೀಶಕ್ತಿ ಸಂಘಗಳ ಉತ್ಪನ್ನಗಳು ಮಾರುಕಟ್ಟೆ ಪ್ರವೇಶಿಸಲು ಅಗತ್ಯ ಸಹಕಾರ ನೀಡುತ್ತಿದ್ದೇವೆ. ಈ ಎಲ್ಲ ಸಂಘಗಳ ಉತ್ಪನ್ನಗಳಿಗೆ ಪರವಾನಗಿ ನೀಡುವಂತೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಶಿಫಾರಸು ಮಾಡಲಾಗಿದೆ’ ಎನ್ನುತ್ತಾರೆ ರಾಜಾ ನಾಯ್ಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT