ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗದಲ್ಲಿ ಮತಾಂತರಕ್ಕೆ ಕಡಿವಾಣ ಹಾಕಲು ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚನೆ

ಜಿಲ್ಲೆಯ ಪೊಲೀಸ್‌ ಅಧಿಕಾರಿಗಳೊಂದಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಭೆ
Last Updated 9 ಜೂನ್ 2022, 2:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಮತಾಂತರದ ಪಿಡುಗು ಹೆಚ್ಚಾಗಿದೆ. ಆಮಿಷ ಹಾಗೂ ಬಲವಂತದ ಮತಾಂತರಕ್ಕೆ ಕಡಿವಾಣ ಹಾಕುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

ಜಿಲ್ಲೆಯ ಪೊಲೀಸ್‌ ಅಧಿಕಾರಿಗಳೊಂದಿಗೆ ಬುಧವಾರ ಸಭೆ ನಡೆಸಿದ ಅವರು ಕಾನೂನು ಮತ್ತು ಸುವ್ಯವಸ್ಥೆಯ ಕುರಿತು ಪರಿಶೀಲನೆ ನಡೆಸಿದರು. ಮತಾಂತರ, ಹಿಜಾಬ್‌, ಧಾರ್ಮಿಕ ಕೇಂದ್ರಗಳಲ್ಲಿ ಧ್ವನಿವರ್ಧಕ ಬಳಕೆ, ಕಸಾಯಿಖಾನೆ ಬಗ್ಗೆ ಮಾಹಿತಿ ಪಡೆದರು. ಸಭೆಯ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಮತಾಂತರ ಸಂವಿಧಾನಬದ್ಧ ಧಾರ್ಮಿಕ ಹಕ್ಕು. ಇದನ್ನು ನಿರ್ಬಂಧಿಸುವುದು ತಪ್ಪಾಗುತ್ತದೆ. ಆದರೆ, ಆಮಿಷ ಹಾಗೂ ಬಲವಂತದ ಮತಾಂತರ ತಪ್ಪು. ಈ ಪಿಡುಗು ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಇದಕ್ಕೆ ಸಂಬಂಧಿಸಿದಂತೆ ಮೂರು ಪ್ರಕರಣಗಳು ದಾಖಲಾಗಿವೆ. ರಾಜ್ಯ ಸರ್ಕಾರ ಹೊಸ ಕಾನೂನು ರೂಪಿಸಿದ್ದು, ಅದರ ಅನ್ವಯ ಕ್ರಮ ಕೈಗೊಳ್ಳುವಂತೆ ತಾಕೀತು ಮಾಡಲಾಗಿದೆ’ ಎಂದು ಹೇಳಿದರು.

‘ಮತಾಂತರ ಆಗುವವರು ತಿಂಗಳ ಮೊದಲು ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬೇಕು. ಮತಾಂತರ ಮಾಡಿಕೊಳ್ಳುವವರೂ ಮಾಹಿತಿ ನೀಡಬೇಕು. ಜಿಲ್ಲಾಧಿಕಾರಿಗಳು ಕೂಲಂಕುಷವಾಗಿ ವಿಚಾರಣೆ ನಡೆಸಿ ಯಾವುದೇ ಆಮಿಷ, ಬಲವಂತಕ್ಕೆ ಒಳಗಾಗಿಲ್ಲ ಎಂಬುದು ಕಂಡುಬಂದರೆ ಮಾತ್ರ ಒಪ್ಪಿಗೆ ನೀಡುವರು. ಮತಾಂತರವಾದ ವ್ಯಕ್ತಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ್ದರೆ ಮೂಲಜಾತಿಯಲ್ಲಿ ಪಡೆಯುತ್ತಿದ್ದ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಾರೆ’ ಎಂದು ವಿವರಿಸಿದರು.

‘ಮತಾಂತರಕ್ಕೆ ಸಂಬಂಧಿಸಿದ ವಿವಾದ ಚಿತ್ರದುರ್ಗದಲ್ಲಿ ಬೆಳಕಿಗೆ ಬಂದ ಬಳಿಕ ಸರ್ಕಾರ ಎಚ್ಚೆತ್ತುಕೊಂಡಿದೆ. ಇದರ ಆಧಾರದ ಮೇರೆಗೆ ಕಾನೂನು ರೂಪಿಸಿದೆ. ಮತಾಂತರ ಹೆಚ್ಚಾಗಲು ಇರುವ ಕಾರಣವನ್ನು ಪತ್ತೆ ಮಾಡಲು ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ನಡೆಸುವ ಕುರಿತು ಆಲೋಚಿಸಲಾಗುವುದು’ ಎಂದು ಹೇಳಿದರು.

‘ಧಾರ್ಮಿಕ ಸ್ಥಳ ಗಳಲ್ಲಿ ಧ್ವನಿವರ್ಧಕ ಬಳಕೆಗೆ ಸಂಬಂಧಿಸಿ ದಂತೆ ಜಿಲ್ಲೆಯಲ್ಲಿ 163 ಪರವಾನಗಿಗಳನ್ನು ನೀಡ ಲಾಗಿದೆ. 122 ಮಸೀದಿ, 24 ದೇವಸ್ಥಾನ, 16 ಚರ್ಚ್‍ಗಳು ಪರವಾನಗಿ ಪಡೆದಿವೆ. ಚರ್ಚ್‌ ಹಾಗೂ ಪ್ರಾರ್ಥನಾ ಮಂದಿರಗಳು ಅಧಿಕೃತವಾಗಿ ಪರವಾನಗಿ ಹೊಂದಿರಬೇಕು. ಮನೆಯಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಲು ಅವಕಾಶವಿಲ್ಲ. ಅಕ್ರಮ ಕಸಾಯಿಖಾನೆ ಸಂಪೂರ್ಣವಾಗಿ ಬಾಗಿಲು ಮುಚ್ಚಬೇಕು. ಮಟ್ಕಾ, ಇಸ್ಪೀಟು ದಂಧೆ ಇರುವುದು ಕಂಡುಬಂದಿದ್ದು ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ಕಡಿವಾಣ ಹಾಕಲಿದ್ದಾರೆ’ ಎಂದರು.

ದಾವಣಗೆರೆ ಪೂರ್ವವಲಯ ಐಜಿಪಿ ತ್ಯಾಗರಾಜ್, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಪರಶುರಾಮ್‌, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಸ್‌.ಜೆ.ಕುಮಾರಸ್ವಾಮಿ ಇದ್ದರು.

ಅಪಘಾತ: ವರ್ಷಕ್ಕೆ 400 ಬಲಿ

ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ವಾರ್ಷಿಕ ಸರಾಸರಿ 400 ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದು ಅತಿ ಅಘಾತಕಾರಿ ಸಂಗತಿ. ಅಪಘಾತ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವರು ತಿಳಿಸಿದರು.

ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗುವುದು. ಕೇಂದ್ರ ಸರ್ಕಾರದ ಗಮನ ಸೆಳೆಯಲಾಗುವುದು. ಈ ಅಪಘಾತ ಪ್ರಮಾಣವನ್ನು ತಗ್ಗಿಸಿ ಪ್ರಾಣ ಉಳಿಸಬೇಕಿದೆ ಎಂದು ಹೇಳಿದರು.

ಎಸಿ ಅಪಘಾತ ತನಿಖೆ

ರಸ್ತೆ ಅಪಘಾತದಲ್ಲಿ ಮೃತಪಟ್ಟ ಉಪವಿಭಾಗಾಧಿಕಾರಿ ವಿ.ಪ್ರಸನ್ನ ಅವರಿಗೆ ಸಂಬಂಧಿಸಿದ ಪ್ರಕರಣ ಇನ್ನೂ ತನಿಖಾ ಹಂತದಲ್ಲಿದೆ. ಇದೊಂದು ಅಪಘಾತ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರಶುರಾಮ್‌ ತಿಳಿಸಿದರು.

ವಾಯುವಿಹಾರಕ್ಕೆ ತೆರಳಿದಾಗ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು ಪ್ರಸನ್ನ ಮೃತಪಟ್ಟಿದ್ದರು. ವಿಧಾನಮಂಡಲ ಅಧಿವೇಶನದಲ್ಲಿ ಇದು ಚರ್ಚೆಯಾದ ಬಳಿಕ ತನಿಖೆ ಚುರುಕುಗೊಳಿಸಲಾಯಿತು. ಅಪಘಾತಕ್ಕೆ ಕಾರಣವಾದ ವಾಹನ ಪತ್ತೆಯಾಗಿಲ್ಲ. ಇದೊಂದು ಹಿಟ್‌ ಅಂಡ್‌ ರನ್‌ ಪ್ರಕರಣ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT