ಕೈಕೊಟ್ಟ ಮಳೆ; ಈ ವರ್ಷವೂ ಮಣ್ಣುಪಾಲಾದ ಶೇಂಗಾ, ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹ

7
ಒಣಗಿದ ಬೆಳೆ

ಕೈಕೊಟ್ಟ ಮಳೆ; ಈ ವರ್ಷವೂ ಮಣ್ಣುಪಾಲಾದ ಶೇಂಗಾ, ಬರಪೀಡಿತ ತಾಲ್ಲೂಕು ಘೋಷಣೆಗೆ ಆಗ್ರಹ

Published:
Updated:
Deccan Herald

ಪರಶುರಾಂಪುರ:  ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ಸತತ ಬರಗಾಲಕ್ಕೆ ತುತ್ತಾಗುತ್ತಾ ಬಂದಿದ್ದು, ಇಲ್ಲಿನ ಪ್ರಮುಖ ವಾಣಿಜ್ಯ ಬೆಳೆಯಾದ ಶೇಂಗಾ ಈ ವರ್ಷವೂ ಮಳೆಯಿಲ್ಲದೆ ಒಣಗಿದೆ. ಬಿತ್ತಿದ ಬೀಜಗಳೆಲ್ಲಾ ಮಣ್ಣು ಪಾಲಾಗಿವೆ.

ಎರಡು ತಿಂಗಳ ಹಿಂದೆ ಬಿದ್ದ ಅಲ್ಪ ಮಳೆಯನ್ನೇ ನೆಚ್ಚಿಕೊಂಡ ರೈತರು ಶೇಂಗಾ ಬಿತ್ತನೆ ಮಾಡಿದ್ದರು. ಉಳುಮೆ, ಬಿತ್ತನೆ ಬೀಜಕ್ಕೆಂದು ಎಕರೆಗೆ ₹ 15 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದು, ಈ ಹಣವನ್ನೂ ಬೆಳೆಗಾರರು ಕಳೆದುಕೊಳ್ಳುವಂತಾಗಿದೆ. ಬಿತ್ತನೆ ನಂತೆ ಭೂಮಿಯಲ್ಲಿದ್ದ ತೇವಾಂಶದಿಂದ ಬೀಜಗಳು ಮೊಳಕೆಯೊಡೆದು ಗೇಣುದ್ದ ಬೆಳೆದವು. ಆದರೆ, ನಂತರ ಹನಿ ಮಳೆಯೂ ನೆಲಕ್ಕೆ ಬಿದ್ದಿಲ್ಲ. ಇಂದೋ, ನಾಳೆಯೋ ಮಳೆ ಬರುತ್ತದೆ ಎಂಬ ನಿರೀಕ್ಷೆಯಲ್ಲೇ ರೈತರು ಇದ್ದಾರೆ. ಆದರೆ, ಮಳೆ ಬರದೇ ಬೆಳೆ ಒಣಗುವುದು ಮುಂದುವರಿದಿದೆ.

ಬರಪೀಡಿತ ಘೋಷಣೆಗೆ ಕೂಗು

ಪ್ರತಿ ಮಳೆಗಾಲದ ನಂತರ ತಾಲ್ಲೂಕನ್ನು ಬರ ಪೀಡಿತ ಪ್ರದೇಶ ಘೋಷಿಸುವ ಕೂಗು ಗಟ್ಟಿಯಾಗಿ ಕೇಳುತ್ತದೆ. ಆ ನಂತರ ಮುಂದಿನ ವರ್ಷದವರೆಗೂ ಚಳ್ಳಕೆರೆ ತಾಲ್ಲೂಕಿನ ಜನ ಸುಮ್ಮನಾಗುತ್ತಿದ್ದಾರೆ. ಹೀಗಾಗಿ, ಇಲ್ಲಿನ ಗಂಭೀರ ಪರಿಸ್ಥಿತಿ ಸರ್ಕಾರದ ಅರಿವಿಗೆ ಬರುತ್ತಿಲ್ಲ. ಜನರ ಸಮಸ್ಯೆ ಪರಿಹಾರವಾಗುತ್ತಿಲ್ಲ.

ಬಯಲುಸೀಮೆಯ ತೀರ ಕಡಿಮೆ ಮಳೆ ಬೀಳುವ ಚಳ್ಳಕೆರೆ, ಮೊಳಕಾಲ್ಮೂರು ತಾಲ್ಲೂಕುಗಳಲ್ಲಿ ಇನ್ನೂಂದು ತಿಂಗಳು ಮಳೆ ಬರದಿದ್ದರೆ ಕುಡಿಯಲೂ ನೀರು ಸಿಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೂ ಸರ್ಕಾರ ಬರಪೀಡಿತ ತಾಲ್ಲೂಕು ಘೋಷಣೆಗೆ ಮೀನಮೇಷ ಎಣಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ರೈತರು.

ಚಳ್ಳಕೆರೆ ಅತಿ ಕಡಿಮೆ ಮಳೆ ಬೀಳುವ ಪ್ರದೇಶದ ಜತೆಗೆ ಪ್ರತಿ ವರ್ಷವೂ ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಕಾಯಂ ಸ್ಥಾನ ಪಡೆಯುತ್ತಿದೆ. ಆದರೂ ಬರ ಪರಿಹಾರ ಹಾಗೂ ಬೆಳೆವಿಮೆ ಸೌಲಭ್ಯಗಳು ಇಲ್ಲಿನ ಜನರಿಗೆ ಗಗನಕುಸುಮವಾಗಿವೆ ಎಂಬುದು ರೈತರ ಬೇಸರದ ನುಡಿ.

ಸಚಿವರು, ಅಧ್ಯಯನ ತಂಡಗಳು ಪ್ರತಿವರ್ಷ ತಾಲ್ಲೂಕಿಗೆ ಬೇಟಿ ನೀಡಿ, ಮಾಹಿತಿ ಸಂಗ್ರಹಿಸುತ್ತಾರೆ. ಆದರೆ, ಪರಿಹಾರ ಮಾತ್ರ ಶೂನ್ಯ ಎನ್ನುವುದು ಈ ಭಾಗದ ರೈತರು ಒಕ್ಕೂರಲ ಅಭಿಪ್ರಾಯ.

‘ಶಾಶ್ವತವಾಗಿ ಗುಳೆ ಹೋಗುತ್ತೇವೆ’

‘ಸರ್ಕಾರ ಈ ಭಾಗದ ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ. ತಾಲ್ಲೂಕನ್ನು ಶಾಶ್ವತ ಬರಪೀಡಿತ ಪ್ರದೇಶ ಎಂದು ಘೊಷಣೆ ಮಾಡಬೇಕು. ವಿಶೇಷ ಪ್ಯಾಕೇಜ್ ನೀಡುವ ಮೂಲಕ ಈ ಭಾಗದ ರೈತರ ನೆರವಿಗೆ ಮುಂದಾಗಬೇಕು. ಇಲ್ಲದಿದ್ದರೆ ರೈತರು ಜಾನುವಾರು ಜತೆಗೆ ಶಾಶ್ವತವಾಗಿ ಗುಳೆ ಹೋಗುತ್ತೇವೆ’ ಎಂದು ಎಚ್ಚರಿಸುತ್ತಾರೆ ನಾಗರಿಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 1

  Frustrated
 • 0

  Angry

Comments:

0 comments

Write the first review for this !