ಸೋಮವಾರ, ಜೂಲೈ 6, 2020
22 °C

ಮೋದಿ ಸರ್ಕಾರಕ್ಕೆ ವರ್ಷ; ಸರಳ ಆಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ 2.0 ಸರ್ಕಾರ ಒಂದು ವರ್ಷ ಪೂರೈಸಿದ ಬೆನ್ನಲ್ಲೇ ಇಲ್ಲಿನ ಬಿಜೆಪಿ ಜಿಲ್ಲಾ ಘಟಕದ ಕಚೇರಿಯಲ್ಲಿ ಶನಿವಾರ ಪದಾಧಿಕಾರಿಗಳು ಪೌರ ಕಾರ್ಮಿಕರಿಗೆ ಆಹಾರ ಸಾಮಗ್ರಿ ಕಿಟ್ ವಿತರಿಸುವ ಮೂಲಕ ಅತ್ಯಂತ ಸರಳವಾಗಿ ಸಮಾರಂಭ ನಡೆಸಿದರು.

ಕೋವಿಡ್-19ರ ಕಾರಣದಿಂದಾಗಿ ಕೇವಲ 20 ಜನ ಮಾತ್ರ ಪಾಲ್ಗೊಂಡು ಮೋದಿ ಅವರಿಗೆ ಮೊದಲು ಅಭಿನಂದನೆ ಸಲ್ಲಿಸಿದರು. ಅಧಿಕಾರ ವಹಿಸಿಕೊಂಡ ನಂತರ ವರ್ಷದಲ್ಲಿ ಆದ ಸಾಧನೆಗಳನ್ನು ಬಿಚ್ಚಿಟ್ಟರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎ. ಮುರುಳಿ, ‘ವರ್ಷದ ಸಾಧನೆ ಕುರಿತು ಮೋದಿ ಅವರು ಪತ್ರ ಬರೆದಿದ್ದಾರೆ. ಅದು ಜಿಲ್ಲಾ ಘಟಕದ ಕೈಸೇರಿದ ಕೂಡಲೇ ಮುದ್ರಿಸಿ, ಮನೆ-ಮನೆಗೆ ತಲುಪಿಸುವ ಕೆಲಸವನ್ನು ಕಾರ್ಯಕರ್ತರು ಮಾಡಲಿದ್ದಾರೆ’ ಎಂದರು.

‘ಕೊರೊನಾ ಸಂಕಷ್ಟಕ್ಕೆ ಸಿಲುಕಿರುವ ದೇಶ ಹಾಗೂ ಜನತೆಯನ್ನು ಆರ್ಥಿಕವಾಗಿ ಸದೃಢಗೊಳಿಸಲು ₹ 20 ಲಕ್ಷ ಕೋಟಿ ಪ್ಯಾಕೇಜ್‌ ಘೋಷಿಸಿದರು. ರೈತರು, ಶ್ರಮಿಕ ವರ್ಗ, ಬಡವರು, ಕಾರ್ಮಿಕರು, ಮಧ್ಯಮ ವರ್ಗ, ಸಣ್ಣ ಕೈಗಾರಿಕೆ, ದೀನದಲಿತರು ಸೇರಿ ಅನೇಕರಿಗೆ ಇದರಿಂದ ಮುಂದಿನ ದಿನಗಳಲ್ಲಿ ಅನುಕೂಲವಾಗಲಿದೆ. ಆದರೂ ವಿರೋಧ ಪಕ್ಷದವರು ಟೀಕಿಸುತ್ತಿದ್ದಾರೆ. ವಿಶ್ವದ ಬಲಿಷ್ಟ ರಾಷ್ಟ್ರಗಳು ಕೂಡ ಕೊರೊನಾಗೆ ನಲುಗಿ ಹೋಗಿದ್ದು, ಇಷ್ಟು ಪ್ರಮಾಣದ ಪ್ಯಾಕೇಜ್ ಘೋಷಿಸಿಲ್ಲ’ ಎಂದು ಹೇಳಿದರು.

‘ಕೊರೊನಾ ವಿರುದ್ಧ ಪ್ರಧಾನಿ ತೆಗೆದುಕೊಂಡ ನಿರ್ಧಾರ, ಕಾರ್ಯವೈಖರಿ ಕುರಿತು ವಿಶ್ವ ಆರೋಗ್ಯ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ. ಇದನ್ನು ಸಹಿಸಿಕೊಳ್ಳಲು ಕಾಂಗ್ರೆಸ್‌ ವರಿಷ್ಠರಿಗೆ, ಮುಖಂಡರಿಗೆ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಕೊರೊನಾ ಇನ್ನೂ ಕೆಲ ತಿಂಗಳು ದೇಶ ಬಿಟ್ಟು ಹೋಗುವುದಿಲ್ಲ. ಅದಕ್ಕೆ ಜಾಗೃತಿಯೊಂದೇ ಮದ್ದು. ಆದ್ದರಿಂದ ನಮ್ಮ ಆರೋಗ್ಯ ರಕ್ಷಣೆ ನಮ್ಮ ಕೈಯಲ್ಲಿದೆ. ಇದನ್ನು ಅರಿತು ಎಚ್ಚರವಹಿಸುವ ಮೂಲಕ ಕೊರೊನಾ ಮುಕ್ತ ದೇಶ ನಿರ್ಮಿಸೋಣ’ ಎಂದು ಮನವಿ ಮಾಡಿದರು.

ಮುಖಂಡ ಸಿದ್ದೇಶ್‌ಯಾದವ್, ‘ಕೋವಿಡ್-19 ವಿರುದ್ಧದ ಭಾರತದ ಯುದ್ಧದಲ್ಲಿ ಮುಂಚೂಣಿಯಲ್ಲಿರುವ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ವಿಶ್ವ ಆರೋಗ್ಯ ಸಂಸ್ಥೆ ಕಾರ್ಯಕಾರಿ ಮಂಡಳಿಯ ಅಧ್ಯಕ್ಷರಾಗಿ ಈಚೆಗೆ ಆಯ್ಕೆಯಾಗಿದ್ದಾರೆ. ಮೋದಿ ಅನೇಕ ಕಾರ್ಯಕ್ರಮ ರೂಪಿಸಿ ಅನುಷ್ಠಾನಗೊಳಿಸಿದ್ದಾರೆ. ಅವರು ದೇಶಕ್ಕೆ ಅಷ್ಟೇ ಅಲ್ಲದೆ, ವಿಶ್ವದಲ್ಲೇ ಜನನಾಯಕರಾಗಿದ್ದಾರೆ. ಇಂಥವರ ನಾಯಕತ್ವದಲ್ಲಿ ದೇಶ ಮುನ್ನಡೆಯುತ್ತಿರುವುದು ಹೆಮ್ಮೆಯ ಸಂಗತಿ’ ಎಂದು ತಿಳಿಸಿದರು.

ಮುಖಂಡರಾದ ಶಶಿ, ನಂದಿ ನಾಗರಾಜ್, ಸೇತೂರಾಂ, ಸುರೇಶ್ ಸಿದ್ಧಾಪುರ, ನಾಗರಾಜ್ ಬೇದ್ರೆ, ದಗ್ಗೆ ಶಿವಪ್ರಕಾಶ್, ಶೈಲಜಾರೆಡ್ಡಿ, ಶ್ಯಾಮಲಾ ಶಿವಪ್ರಕಾಶ್, ಚಂದ್ರಿಕಾ ಲೋಕನಾಥ್ ಅವರೂ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು