ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಯೋಜನೆ ಅನುಷ್ಠಾನದಲ್ಲಿ ವಿಫಲ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕಿಡಿ

Last Updated 21 ಆಗಸ್ಟ್ 2021, 11:34 IST
ಅಕ್ಷರ ಗಾತ್ರ

ಚಿತ್ರದುರ್ಗ: ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಜಿಲ್ಲೆಯ ಅಧಿಕಾರಿಗಳು ವಿಫಲರಾಗಿದ್ದಾರೆ. ಇದೇ ರೀತಿಯ ಕಾರ್ಯವೈಖರಿ ಮುಂದುವರಿದರೆ ಸುಮ್ಮನಿರಲು ಸಾಧ್ಯವಿಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ಎ.ನಾರಾಯಣಸ್ವಾಮಿ ಎಚ್ಚರಿಕೆ ನೀಡಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಅಧಿಕಾರಿ ವರ್ಗ ಮತ್ತು ಸಾರ್ವಜನಿಕರ ನಡುವೆ ಸೌಹಾರ್ದ ಸಂಬಂಧವಿಲ್ಲ. ಅಧಿಕಾರಿಗಳು ಅತ್ಯಂತ ತಾತ್ಸಾರದಿಂದ ವರ್ತಿಸುತ್ತಿದ್ದಾರೆ. ಸರ್ಕಾರ ಮತ್ತು ಜನರ ನಡುವೆ ಕಂದಕ ಸೃಷ್ಟಿಯಾಗುತ್ತಿದೆ. ಇದನ್ನು ಸರಿಪಡಿಸಿಕೊಳ್ಳದೇ ಇದ್ದರೆ ಅಭಿವೃದ್ಧಿಗೆ ಹಿನ್ನಡೆ ಆಗುತ್ತದೆ’ ಎಂದರು.

‘ಜಿಲ್ಲೆಗೆ ಬಿಡುಗಡೆಯಾದ ಅನುದಾನ, ನಡೆದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನರಿಗೆ ಮಾಹಿತಿ ನೀಡಬೇಕು. ಯಾವ ಜನಪ್ರತಿನಿಧಿಯ ಬದ್ಧತೆ ಎಷ್ಟು ಎಂಬುದು ಮತದಾರರಿಗೆ ಗೊತ್ತಾಗಬೇಕು. ಸಂಸ್ಕಾರ ಇರುವ ಕಾರಣಕ್ಕೆ ಇಷ್ಟು ದಿನ ಬಾಯಿ ಮುಚ್ಚಿಕೊಂಡು ಸುಮ್ಮನೆ ಇದ್ದೆ’ ಎಂದು ಕಿಡಿಕಾರಿದರು.

‘ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಿವೆ. ಸಾರ್ವಜನಿಕರ ತೆರಿಗೆ ಹಣ ಸರಿಯಾದ ರೀತಿಯಲ್ಲಿ ವ್ಯಯವಾಗಬೇಕು. ಅಟಲ್‌ ಬಿಹಾರಿ ವಾಜಪೇಯಿ ಪ್ರಧಾನಿ ಆಗಿದ್ದ ಅವಧಿಯಲ್ಲಿ ಗ್ರಾಮೀಣ ರಸ್ತೆಗಳ ಅಭವೃದ್ಧಿಗೆ ಯೋಜನೆ ರೂಪಿಸಿದರು. ಇದು ಸದುಪಯೋಗ ಆಗಬೇಕು ಅಲ್ಲವೇ’ ಎಂದು ಪ್ರಶ್ನಿಸಿದರು.

₹ 117 ಕೋಟಿ ಅನುದಾನ

ಜಿಲ್ಲೆಯ 173 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ ₹ 117 ಕೋಟಿ ಅನುದಾನ ಬಿಡುಗಡೆಯಾಗಿದೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಗ್ರಾಮೀಣ ರಸ್ತೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್‌ ಕೆ.ಮರಿಸ್ವಾಮಿ ತಿಳಿಸಿದರು.

‘ಪ್ರಧಾನಮಂತ್ರಿ ಗ್ರಾಮ ಸಡಕ್‌ ಯೋಜನೆಗೆ ಕೇಂದ್ರ ಶೇ 60 ಮತ್ತು ರಾಜ್ಯ ಶೇ 40 ಅನುದಾನ ಭರಿಸುತ್ತದೆ. ನಿರ್ಮಾಣ ಮತ್ತು ನಿರ್ವಹಣೆ ಎರಡೂ ಸರ್ಕಾರದ ಹೊಣೆ ಇದೆ. 11 ರಸ್ತೆಗಳಿಗೆ ಮೊದಲ ಹಂತದಲ್ಲಿ ಹಾಗೂ 98 ರಸ್ತೆಗಳಿಗೆ ಎರಡನೇ ಹಂತದಲ್ಲಿ ಅನುದಾನ ಸಿಕ್ಕಿದೆ. ರಾಷ್ಟ್ರ ಮಟ್ಟದ ಸಮಿತಿ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸುತ್ತದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ನಂದಿನಿದೇವಿ, ಪ್ರೊ.ಹಾಲಸ್ವಾಮಿ ಇದ್ದರು.

***

ಗ್ರಾಮೀಣ ಪ್ರದೇಶದ ರಸ್ತೆಗಳು ಸಾಕಷ್ಟು ಹಾಳಾಗಿವೆ. ಹಿಂದುಳಿದ ಜಿಲ್ಲೆಯ ಅಭಿವೃದ್ಧಿಗೆ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇನ್ನಷ್ಟು ರಸ್ತೆ ನಿರ್ಮಾಣಕ್ಕೆ ಗಮನಹರಿಸಬೇಕು.

- ಕೆ.ಪೂರ್ಣಿಮಾ,ಶಾಸಕಿ, ಹಿರಿಯೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT