ಭಾನುವಾರ, ಡಿಸೆಂಬರ್ 8, 2019
21 °C
ಸಾಲ ಸೌಲಭ್ಯಕ್ಕೆ ಫಲಾನುಭವಿಗಳ ಅಲೆದಾಟ

ಬ್ಯಾಂಕ್‌ಗಳ ವಿರುದ್ಧ ತೀವ್ರ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿತ್ರದುರ್ಗ: ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ನಿರುದ್ಯೋಗಿಗಳಿಗೆ ಮಂಜೂರು ಮಾಡಿದ ಸಾಲ ಸೌಲಭ್ಯವನ್ನು ಸಕಾಲಕ್ಕೆ ನೀಡದ ಬ್ಯಾಂಕ್‌ಗಳ ವಿರುದ್ಧ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಮಂಗಳವಾರ ನಡೆದ ಮಾಸಿಕ ಕೆಡಿಪಿ ಸಭೆಯಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಯಿತು. ಮಾರ್ಗಸೂಚಿ ಬ್ಯಾಂಕ್‌ ವ್ಯವಸ್ಥಾಪಕರಿಗೆ ಆಕ್ಷೇಪಗಳನ್ನು ವಿವರಿಸಿದ ಅವರು, ‘ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೆ ಸ್ಪಂದಿಸದ ಬ್ಯಾಂಕ್‌ಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂಬ ಎಚ್ಚರಿಕೆಯನ್ನೂ ನೀಡಿದರು..

‘ವಿವಿಧ ಯೋಜನೆಯಡಿ ಅರ್ಜಿ ಆಹ್ವಾನಿಸಿ ಫಲಾನುಭವಿಗಳ ಆಯ್ಕೆ ಮಾಡಲಾಗುತ್ತದೆ. ನಿಗಮಗಳೇ ಸಾಲ ಮಂಜೂರು ಮಾಡಿ ಚೆಕ್‌ ಕೂಡ ನೀಡುತ್ತವೆ. ಹಣ ನೀಡಲು ಬ್ಯಾಂಕ್‌ಗಳು ಫಲಾನುಭವಿಗಳಿಗೆ ಕಿರುಕುಳ ನೀಡುತ್ತಿವೆ. ವಿನಾ ಕಾರಣ ಅಲೆದಾಡಿಸಲಾಗುತ್ತಿದೆ ಎಂಬ ದೂರುಗಳು ಬರುತ್ತಿವೆ’ ಎಂದು ಏರು ಧ್ವನಿಯಲ್ಲಿ ಅಸಮಾಧಾನ ಹೊರಹಾಕಿದರು.

‘ಮಂಜೂರಾಗಿರುವ ಸಾಲದ ಮೊತ್ತದಷ್ಟು ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡುವಂತೆ ಫಲಾನುಭವಿಗಳಿಗೆ ಸೂಚನೆ ನೀಡಲಾಗಿದೆ. ಠೇವಣಿ ಇಡುವಷ್ಟು ಹಣ ಅವರ ಬಳಿ ಇದ್ದಿದ್ದರೆ ಸಾಲವನ್ನೇಕೆ ಪಡೆಯುತ್ತಿದ್ದರು? ಬಡ್ಡಿ ರೂಪದಲ್ಲಿ ಹಣ ತಂದು ಬ್ಯಾಂಕುಗಳಲ್ಲಿ ಠೇವಣಿ ಇಡುತ್ತಿದ್ದಾರೆ. ಇದು ಎಷ್ಟು ಸರಿ’ ಎಂದು ಮಾರ್ಗಸೂಚಿ ಬ್ಯಾಂಕ್‌ ವ್ಯವಸ್ಥಾಪಕ ನಿಂಗೇಗೌಡ ಅವರನ್ನು ಪ್ರಶ್ನಿಸಿದರು.

ಮುದ್ರಾ ಯೋಜನೆಗೆ ಸೇರ್ಪಡೆ: ನಿಗಮಗಳು ಮಂಜೂರು ಮಾಡುವ ₹ 10 ಲಕ್ಷಕ್ಕೂ ಹೆಚ್ಚು ಮೊತ್ತದ ಸಾಲ ಸೌಲಭ್ಯವನ್ನು ‘ಮುದ್ರಾ’ ಯೋಜನೆಗೆ ತಳುಕು ಹಾಕುತ್ತಿರುವ ಬ್ಯಾಂಕ್‌ಗಳ ಬಗ್ಗೆ ಅಧಿಕಾರಿಗಳಿಂದಲೇ ಆಕ್ಷೇಪ ವ್ಯಕ್ತವಾಯಿತು.

‘ಮುಖ್ಯಮಂತ್ರಿ ಅವರ ಉದ್ಯೋಗ ಸೃಜನೆ ಯೋಜನೆಯ 71 ಆಕಾಂಕ್ಷಿಗಳಲ್ಲಿ 18 ಜನರಿಗೆ ಮಾತ್ರ ಬ್ಯಾಂಕ್‍ ಸಾಲ ಸಿಕ್ಕಿದೆ. ಜಿಲ್ಲೆಯಲ್ಲಿ ಹೆಚ್ಚು ಶಾಖೆಯನ್ನು ಹೊಂದಿರುವ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್, ಒಬ್ಬ ಅಭ್ಯರ್ಥಿಗೆ ಮಾತ್ರ ಸಾಲ ಒದಗಿಸಿದೆ. ಬ್ಯಾಂಕ್‍ಗಳ ಈ ಧೋರಣೆಯಿಂದ ಬಡವರಿಗೆ ತೊಂದರೆಯಾಗುತ್ತಿದೆ. ₹ 10 ಲಕ್ಷಕ್ಕೂ ಹೆಚ್ಚಾದ ಸಾಲಗಳನ್ನು, ಮುದ್ರಾ ಯೋಜನೆಯಡಿ ಸೇರಿಸಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಆನಂದ್ ಸಭೆಯ ಗಮನ ಸೆಳೆದರು.

ಗಂಗಾ ಕಲ್ಯಾಣ ತ್ವರಿತಗೊಳ್ಳಲಿ: ಗಂಗಾ ಕಲ್ಯಾಣ ಯೋಜನೆಯಡಿ ಕೊರೆಸುವ ಕೊಳವೆ ಬಾವಿಗಳಿಗೆ ಪಂಪ್‌ಸೆಟ್‌ ವಿತರಣೆ ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸುವಲ್ಲಿ ಆಗುತ್ತಿರುವ ವಿಳಂಬಕ್ಕೆ ಅಧ್ಯಕ್ಷರು ಕಳವಳ ವ್ಯಕ್ತಪಡಿಸಿದರು.

‘ಬಡ ರೈತರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಯೋಜನೆ ರೂಪಿಸಲಾಗಿದೆ. ಕೊಳವೆ ಬಾವಿ ಕೊರೆಸಿ ವರ್ಷ ಕಳೆದರೂ ಕಾರ್ಯನಿರ್ವಹಿಸುತ್ತಿಲ್ಲ. ಬರ ಪರಿಸ್ಥಿತಿಯಿಂದ ತತ್ತರಿಸಿರುವ ರೈತರಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ. ದಿನ ಕಳೆದಂತೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಅಧಿಕಾರಿಗಳ ತಾತ್ಸಾರದಿಂದ ಇಡೀ ಯೋಜನೆ ವಿಫಲವಾಗುವ ಸಾಧ್ಯತೆಗಳಿವೆ’ ಎಂದು ಆಕ್ರೋಶ ಹೊರಹಾಕಿದರು.

ಭದ್ರಾ ನೀರು ಯಾವತ್ತು ಬರುತ್ತೆ?
ಭದ್ರಾ ಮೇಲ್ದಂಡೆ ಕಾಮಗಾರಿಯ ವಿಳಂಬಕ್ಕೆ ಕಳವಳ ವ್ಯಕ್ತಪಡಿಸಿದ ಸೌಭಾಗ್ಯ, ‘ಡಿಸೆಂಬರ್‌, ಜನವರಿಗೆ ನೀರು ಬರುತ್ತೆ ಎಂದು ಹೇಳುತ್ತೀರಿ. ಆದರೆ, ಕಾಮಗಾರಿ ಮಾತ್ರ ಪ್ರಗತಿ ಆಗುತ್ತಿಲ್ಲ. ವಿ.ವಿ.ಸಾಗರ ಜಲಾಶಯಕ್ಕೆ ಯಾವತ್ತು ನೀರು ಬರುತ್ತೆ ಎಂಬುದನ್ನು ಸ್ಪಷ್ಟವಾಗಿ ಹೇಳಿ’ ಎಂದು ಪಟ್ಟು ಹಿಡಿದರು.

‘ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಪೂರೈಕೆ ಮಾಡುವ ಕಾಮಗಾರಿ ಪ್ರಗತಿಯಲ್ಲಿದೆ. ವಿದ್ಯುದೀಕರಣ ಕಾರ್ಯ ಮಾತ್ರ ಬಾಕಿ ಇದೆ. 2 ಟಿಎಂಸಿ ಅಡಿ ನೀರು ಜನವರಿ ಅಂತ್ಯದೊಳಗೆ ಜಲಾಶಯಕ್ಕೆ ಹರಿಯುವ ವಿಶ್ವಾಸವಿದೆ’ ಎಂದು ಅಧಿಕಾರಿಗಳು ಉತ್ತರಿಸಿದರು.

ಪ್ರತಿಕ್ರಿಯಿಸಿ (+)