ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ಕಾರ್ಯವೈಖರಿಗೆ ಭಾರಿ ಅಸಮಾಧಾನ

ಕ್ರಿಯಾಯೋಜನೆ ಕೈಬಿಟ್ಟು ಕೊಳವೆ ಬಾವಿ ನಿರ್ಮಾಣ
Last Updated 6 ಜೂನ್ 2019, 14:20 IST
ಅಕ್ಷರ ಗಾತ್ರ

ಚಿತ್ರದುರ್ಗ: ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಉದ್ದೇಶದಿಂದ ರೂಪಿಸಿದ ಕ್ರಿಯಾಯೋಜನೆಯನ್ನು ಕೈಬಿಟ್ಟು ಕೊಳವೆ ಬಾವಿ ಕೊರೆಸಿದ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಕಾರ್ಯವೈಖರಿಯ ಬಗ್ಗೆ ಜಿಲ್ಲಾ ಪಂಚಾಯಿತಿ ಸದಸ್ಯರು ತೀವ್ರ ಅಸಮಾಧಾನ ಹೊರಹಾಕಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಿ.ಎಂ.ವಿಶಾಲಾಕ್ಷಿ ನಟರಾಜ್‌ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ಕುಡಿಯುವ ನೀರಿನ ಬಗ್ಗೆ ಗಂಭೀರ ಚರ್ಚೆ ನಡೆಯಿತು. ನೀರಿನ ಬವಣೆ ನೀಗಿಸಲು ಕೈಗೆತ್ತಿಕೊಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬ ಆಕ್ಷೇಪ ದಾಖಲಿಸಿದರು. ಗದ್ದಲ, ವಾಗ್ವಾದ, ಆರೋಪ–ಪ್ರತ್ಯಾರೋಪದ ನಡುವೆ ಸಾಮಾನ್ಯ ಸಭೆ ನಡೆಯಿತು.

ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎಲ್ಲ ಎಂಜಿನಿಯರುಗಳನ್ನು ಅಮಾನತು ಮಾಡಬೇಕು ಎಂದು ಸದಸ್ಯರು ಪಟ್ಟು ಹಿಡಿದರು. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ರಮ ಜರುಗಿಸದೇ ಇದ್ದರೆ ಸಭೆಯಿಂದ ಹೊರನಡೆಯುವುದಾಗಿ ಬೆದರಿಕೆ ಹಾಕಿದರು. ಇದರಿಂದ ಇತರ ವಿಚಾರಗಳು ಸಭೆಯಲ್ಲಿ ಚರ್ಚೆಗೆ ಬರುವುದು ವಿಳಂಬವಾಯಿತು.

ಸದಸ್ಯರ ಒತ್ತಡಕ್ಕೆ ಮಣಿದ ಮುಖ್ಯ ಕಾರ್ಯರ್ವಹಣಾಧಿಕಾರಿ ಸಿ.ಸತ್ಯಭಾಮ, ‘ಕ್ರಿಯಾ ಯೋಜನೆ ಹೊರತುಪಡಿಸಿ ಹೆಚ್ಚುವರಿ ಕೊಳವೆ ಬಾವಿಗಳನ್ನು ಕೊರೆಸಿರುವುದನ್ನು ಪ್ರಶ್ನಿಸಿ ಈಗಾಗಲೇ ಷೋಕಾಸ್‌ ನೋಟಿಸ್‌ ನೀಡಲಾಗಿದೆ. ಅವರಿಂದ ಬರುವ ಉತ್ತರವನ್ನು ಪರಿಶೀಲಿಸಿ, ಶಿಸ್ತುಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂಬ ಆಶ್ವಾಸನೆ ನೀಡಿದರು.

ಲೆಕ್ಕಕ್ಕಿಲ್ಲದ ಕ್ರಿಯಾ ಯೋಜನೆ:ಕುಡಿಯುವ ನೀರಿನ ಬವಣೆಯನ್ನು ನೀಗಿಸಲು ಜಿಲ್ಲಾ ಪಂಚಾಯಿತಿ ಕ್ರಿಯಾ ಯೋಜನೆ ರೂಪಿಸಿತ್ತು. ಬರ ಪರಿಹಾರದಲ್ಲಿ ಇದಕ್ಕೆ ಒತ್ತು ನೀಡಬೇಕಿತ್ತು. ಆದರೆ, ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ ಈ ಕ್ರಿಯಾ ಯೋಜನೆ ಹೊರತುಪಡಿಸಿ ಹೆಚ್ಚುವರಿ ಕೊಳವೆ ಬಾವಿ ಕೊರೆಸಿದೆ. ಇದಕ್ಕೆ ವಿಶೇಷ ಅನುದಾನ ನೀಡಬೇಕು ಎಂಬ ಕಾರ್ಯನಿರ್ವಾಹಕ ಎಂಜಿನಿಯರ್‌ ಮಂಜುನಾಥ್‌ ಅವರ ಕೋರಿಕೆ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಕೆರಳಿಸಿತು.

‘2018ರ ಏಪ್ರಿಲ್‌ 1ರಿಂದ 2019ರ ಮಾರ್ಚ್‌ ವರೆಗೆ 1,666 ಕೊಳವೆ ಬಾವಿ ಕೊರೆಸಲಾಗಿದೆ. ಈ ಪೈಕಿ ಕ್ರಿಯಾಯೋಜನೆಯ ಅನ್ವಯ 604 ಹಾಗೂ ಕ್ರಿಯಾಯೋಜನೆ ಹೊರತುಪಡಿಸಿ 1,062 ಬೋರ್‌ವೆಲ್‌ಗಳಿವೆ. ಈ ಕೊಳವೆ ಬಾವಿಗೆ ಬಿಲ್‌ ಪಾವತಿಸಲು ವಿಶೇಷ ಅನುದಾನ ಅಗತ್ಯವಿದೆ’ ಎಂದು ಮಂಜುನಾಥ್‌ ಸಭೆಗೆ ಮಾಹಿತಿ ನೀಡಿದರು. ವರದಿ ಓದುವುದು ಮುಕ್ತಾಯವಾಗುವುದಕ್ಕೂ ಮುನ್ನವೇ ಮೇಲೆದ್ದ ಸದಸ್ಯರು ಅಧಿಕಾರಿಯ ಬೆವರಿಳಿಸಿದರು.

ವಿಶ್ವಾಸಕ್ಕೆ ತೆಗೆದೊಳ್ಳಲು ಸಲಹೆ:‘ಕ್ರಿಯಾ ಯೋಜನೆ ಇಲ್ಲದೇ ಇಷ್ಟೊಂದು ಕೊಳವೆ ಬಾವಿ ಕೊರೆಸಲು ಅಧಿಕಾರ ಸಿಕ್ಕಿದ್ದು ಹೇಗೆ ಎಂಬುದು ಸ್ಪಷ್ಟವಾಗಬೇಕು. ಈ ಕೊಳವೆ ಬಾವಿಗಳನ್ನು ಕೊರೆಸಲು ಯಾವೊಬ್ಬ ಸದಸ್ಯರ ಅಭಿಪ್ರಾಯ ಪಡೆದಿಲ್ಲ. ನೀರಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಆದರೂ, ಜಿಲ್ಲಾ ಪಂಚಾಯಿತಿಯ ಬೊಕ್ಕಸ ಖಾಲಿಯಾಗುತ್ತಲೇ ಇದೆ’ ಎಂಬ ಅನುಮಾನವನ್ನು ಆರ್‌.ಕೃಷ್ಣಮೂರ್ತಿ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೀತಾ, ನಾಗೇಂದ್ರ ನಾಯ್ಕ್‌, ಮುಂಡರಗಿ ನಾಗರಾಜ, ಶಶಿಕಲಾ ಸುರೇಶ್, ಅಜ್ಜಪ್ಪ ಸೇರಿ ಇತರರೂ ಧ್ವನಿಗೂಡಿಸಿದರು. ಕೊಳವೆ ಬಾವಿ ಕೊರೆಸುವುದಕ್ಕೂ ಮುನ್ನ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಬಗ್ಗೆ ಕಿಡಿಕಾರಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವಿದ್ದೇವೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಸಹಕಾರದ ಅಗತ್ಯವಿದೆ. ಮೊಳಕಾಲ್ಮುರು ತಾಲ್ಲೂಕಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಲವು ಬಾರಿ ಭೇಟಿ ನೀಡಿದ್ದಾರೆ. ಗೋಶಾಲೆ ಪರಿಶೀಲನೆ ಮಾಡಿದ್ದಾರೆ. ಆದರೆ, ಸ್ಥಳೀಯ ಸದಸ್ಯರಿಗೆ ಮಾಹಿತಿ ನೀಡಿಲ್ಲ’ ಎಂದು ಡಾ.ಯೋಗೇಶ್‌ ಬಾಬು ಆರೋಪಿಸಿದರು.

ಮಾರ್ಗಸೂಚಿ ಉಲ್ಲಂಘಿಸಿಲ್ಲ:‘ಕುಡಿಯುವ ನೀರಿನ ಯೋಜನೆಗೆ ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಪ್ರತ್ಯೇಕ ಅನುದಾನವಿಲ್ಲ. ಎಲ್ಲ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಕ್ರಿಯಾಯೋಜನೆ ರೂಪಿಸಲಾಗುತ್ತದೆ. ಬರ ಪರಿಹಾರ ಕಾಮಗಾರಿಯಲ್ಲಿ ಕೊಳವೆ ಬಾವಿ ಕೊರೆಸಲು ಕೆಲ ಮಾರ್ಗಸೂಚಿಗಳಿವೆ. ಅತ್ಯಂತ ಕಡಿಮೆ ನೀರು ಲಭ್ಯವಿರುವ ಗ್ರಾಮ, ಜನವಸತಿ ಪ್ರದೇಶಕ್ಕೆ ಆದ್ಯತೆ ನೀಡಲಾಗುತ್ತದೆ’ ಎಂದು ಸಿ. ಸತ್ಯಭಾಮ ಸಭೆಗೆ ಮಾಹಿತಿ ನೀಡಿದರು.

‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕುಡಿಯುವ ನೀರು ಮತ್ತು ಗ್ರಾಮ ನೈರ್ಮಲ್ಯ ಸಮಿತಿಗಳ ಶಿಫಾರಸುಗಳ ಆಧಾರದ ಮೇರೆಗೆ ಕೊಳವೆ ಬಾವಿ ಕೊರೆಸಲಾಗಿದೆ. ಕ್ರಿಯಾಯೋಜನೆ ಪ್ರಕಾರ ಜಿಲ್ಲೆಗೆ ₹ 180 ಕೋಟಿ ಅಗತ್ಯವಿದೆ. ಆದರೆ, ಅಷ್ಟು ಅನುದಾನ ಲಭ್ಯವಿಲ್ಲದ ಕಾರಣ ಆದ್ಯತೆಯ ಮೇರೆಗೆ ಕೆಲಸ ಮಾಡಲಾಗುತ್ತಿದೆ’ ಎಂದರು.

ಈ ಸಮಜಾಯಿಷಿ ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಇನ್ನಷ್ಟು ಕೆರಳಿಸಿತು. ಗ್ರಾಮ ಸಮಿತಿಗಳ ನೈಜ ಕಾರ್ಯವೈಖರಿಯ ಬಗ್ಗೆ ಅನುಮಾನ ಹೊರಹಾಕಿದರು. ನಡಾವಳಿಗಳನ್ನು ಸಭೆಗೆ ತರಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT