ಸೋಮವಾರ, ಮಾರ್ಚ್ 8, 2021
27 °C

ಪರಿಶಿಷ್ಟರ ಅನುದಾನ ಬಳಕೆ ಕಡ್ಡಾಯ: ಗ್ರಾ.ಪಂ.ವಾರು ಲೆಕ್ಕ ನೀಡಲು 15ದಿನ ಕಾಲಾವಕಾಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಚಿತ್ರದುರ್ಗ: ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾದ ತೆರಿಗೆಯಲ್ಲಿ ಶೇ 22.75ರಷ್ಟು ಹಣವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿಗೆ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಿದ ಜಿಲ್ಲಾ ಪಂಚಾಯಿತಿ, 2016ರಿಂದ 2018ರವರೆಗೆ ವಿನಿಯೋಗಿಸಿದ ಅನುದಾನದ ಲೆಕ್ಕ ಕೊಡಲು 15 ದಿನಗಳ ಕಾಲಾವಕಾಶ ನೀಡಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್‌ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ 5ನೇ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಪರಿಶಿಷ್ಟ ಜನಾಂಗಗಳಿಗೆ ಬಳಕೆ ಮಾಡಿದ ಅನುದಾನದ ಕುರಿತು ಸ್ಪಷ್ಟ ಮಾಹಿತಿ ನೀಡದ ಜಿಲ್ಲೆಯ ಆರು ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ (ಇಒ) ವಿರುದ್ಧ ಜಿಲ್ಲಾ ಪಂಚಾಯಿತಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ವಸೂಲಿಯಾದ ಕರ, ಬಳಕೆಯಾದ ಅನುದಾನ ಹಾಗೂ ಫಲಾನುಭವಿಗಳ ಪಟ್ಟಿಯನ್ನು ಗ್ರಾಮ ಪಂಚಾಯಿತಿವಾರು ನೀಡುವಂತೆ ಸೂಚನೆ ನೀಡಲಾಯಿತು. ಇಲ್ಲವಾದರೆ ಸಂಬಂಧಿಸಿದ ತಾಲ್ಲೂಕು ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು (ಪಿಡಿಒ) ಸೇವೆಯಿಂದ ಅಮಾನತುಗೊಳಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎನ್‌.ರವೀಂದ್ರ ಎಚ್ಚರಿಕೆ ನೀಡಿದರು.

ಪರಿಶಿಷ್ಟ ಜನಾಂಗಕ್ಕೆ ಬಳಕೆಯಾದ ಅನುದಾನದ ಕುರಿತು ಸದಸ್ಯ ಆರ್‌.ನರಸಿಂಹರಾಜು ಜುಲೈ 13ರಂದು ನಡೆದ ಸಭೆಯಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ತಾಲ್ಲೂಕು ಪಂಚಾಯಿತಿ ಇಒಗಳು ನೀಡಿದ ಮಾಹಿತಿಯ ಕುರಿತು ಅವರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಇತರ ಸದಸ್ಯರೂ ಧ್ವನಿಗೂಡಿಸಿದರು.

‘37 ಜಿಲ್ಲಾ ಪಂಚಾಯಿತಿ ಸದಸ್ಯರ ಪೈಕಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ 19 ಸದಸ್ಯರಿದ್ದೇವೆ. ಶೇ 22.75ರಷ್ಟು ಅನುದಾನವನ್ನು ಕಡ್ಡಾಯವಾಗಿ ಬಳಸುವಂತೆ ಸರ್ಕಾರ ಕಾನೂನು ರೂಪಿಸಿದರೂ ಪ್ರಯೋಜನವಾಗುತ್ತಿಲ್ಲ. ಹಲವು ಗ್ರಾಮ ಪಂಚಾಯಿತಿಗಳಲ್ಲಿ ಈ ಅನುದಾನವನ್ನು ಬೇರೆ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂಥವರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕು’ ಎಂದು ನರಸಿಂಹರಾಜು ಒತ್ತಾಯಿಸಿದರು.

‘ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾದ ತೆರಿಗೆಯಲ್ಲಿ ಆರೋಗ್ಯ, ಶಿಕ್ಷಣ, ಕ್ರೀಡೆ ಹಾಗೂ ಗ್ರಂಥಾಲಯಗಳಿಗೆ ಸೆಸ್‌ ನಿಗದಿಯಾಗಿದೆ. ಉಳಿದ ಹಣದಲ್ಲಿ ಕಚೇರಿ ಬಾಡಿಗೆ ಸೇರಿ ಇತರ ಖರ್ಚು, ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಬೇಕು ಎಂಬ ನಿಯಮವಿದೆ’ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು. ಇದರಿಂದ ಕೆರಳಿದ ಸದಸ್ಯರು ಪರಿಶಿಷ್ಟರಿಗೆ ಬಳಕೆ ಮಾಡಿದ ಹಣದ ಲೆಕ್ಕ ನೀಡಲೇಬೇಕು ಎಂದು ಪಟ್ಟುಹಿಡಿದರು.

ಶಿಷ್ಟಾಚಾರ ಉಲ್ಲಂಘನೆಗೆ ಆಕ್ಷೇಪ

ಶಿಷ್ಟಾಚಾರಕ್ಕೆ ಸಂಬಂಧಿಸಿ ಆರಂಭವಾದ ಚರ್ಚೆ ಸಭೆಯನ್ನು ನುಂಗಿಹಾಕಿತು. ಅಧಿಕಾರಿಗಳ ಬಗೆಗೆ ಮಹಿಳಾ ಸದಸ್ಯರಲ್ಲಿದ್ದ ಅಸಮಾಧಾನ ಹೊರಹಾಕಲು ಇದು ಅನುವು ಮಾಡಿಕೊಟ್ಟಿತು.

ಚಿತ್ರದುರ್ಗದಲ್ಲಿ ನಡೆದ ವಿಶ್ವಕರ್ಮ ಜಯಂತಿಗೆ ಆಹ್ವಾನ ನೀಡದಿರುವ ಕುರಿತು ಸದಸ್ಯರೊಬ್ಬರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಿಜಲಿಂಗಪ್ಪ ಅವರನ್ನು ಪ್ರಶ್ನಿಸಿದರು. ಇದಕ್ಕೆ ಚೇತನಾ ಪ್ರಸಾದ್‌, ಉಪಾಧ್ಯಕ್ಷೆ ಸುಶೀಲಮ್ಮ ಸೇರಿ ಅನೇಕರು ಧ್ವನಿಗೂಡಿಸಿದರು.

‘ಇದೊಂದು ಚರ್ಚೆಯ ವಿಷಯವೇ ಅಲ್ಲ. ಶಿಷ್ಟಾಚಾರ ಪಾಲನೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಹೇಳಿದರೆ ಸಾಕು’ ಎಂದು ಸಿಇಒ ರವೀಂದ್ರ ಅವರು ಮಧ್ಯಪ್ರವೇಶಿಸಿದ ಬಳಿಕ ಚರ್ಚೆ ಅನುಪಾಲನಾ ವರದಿಯತ್ತ ಹೊರಳಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು