ಶುಕ್ರವಾರ, ಆಗಸ್ಟ್ 6, 2021
25 °C
ಜಿಲ್ಲಾ ಪಂಚಾಯಿತಿ ವಿಶೇಷ ಸಾಮಾನ್ಯ ಸಭೆಯಲ್ಲಿ ತೀರ್ಮಾನ, ಅಧಿಕಾರಿಗಳ ವಿರುದ್ಧ ಆಕ್ರೋಶ

ಚಿತ್ರದುರ್ಗ: ಅನುದಾನ ಮರು ಮಂಜೂರಾತಿಗೆ ಕೋರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: 2019–20ನೇ ಆರ್ಥಿಕ ವರ್ಷದಲ್ಲಿ ಸರ್ಕಾರಕ್ಕೆ ಮರಳಿದ ಅನುದಾನವನ್ನು ಮರು ಮಂಜೂರು ಮಾಡುವ ಬಗ್ಗೆ ಪತ್ರ ಬರೆಯಲು ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರಿಗೆ ಕೋರಿಕೆ ಸಲ್ಲಿಸಲು ಜಿಲ್ಲಾ ಪಂಚಾಯಿತಿ ವಿಶೇಷ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.

ಅಧ್ಯಕ್ಷೆ ಶಶಿಕಲಾ ಸುರೇಶಬಾಬು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಭೆಯಲ್ಲಿ ಸರ್ಕಾರಕ್ಕೆ ಅನುದಾನ ಹಿಂದಿರುಗಿದ ಬಗ್ಗೆ ಚರ್ಚೆ ನಡೆಯಿತು. ಅನುದಾನ ಬಳಕೆ ಮಾಡಿಕೊಳ್ಳದೇ ನಿರ್ಲಕ್ಷ್ಯ ತೋರಿದ ಹಾಗೂ ವಾಪಾಸಾಗಲು ಅವಕಾಶ ಕಲ್ಪಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಲು ಸಭೆ ಒಪ್ಪಿಗೆ ಸೂಚಿಸಿತು.

ಜಿಲ್ಲಾ ಪಂಚಾಯಿತಿಯ ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ವಿಭಾಗವೊಂದಲ್ಲೇ ₹ 25.81 ಕೋಟಿ ಅನುದಾನ ಸರ್ಕಾರಕ್ಕೆ ಹಿಂದಿರುಗಿದೆ. ಶಿಕ್ಷಣ, ಆರೋಗ್ಯ, ಕ್ರೀಡೆ, ಯುವಜನ ಮತ್ತು ಸೇವೆ ಸೇರಿ ಹಲವು ವಿಭಾಗಕ್ಕೆ ಮಂಜೂರಾಗಿದ್ದ ಕೋಟ್ಯಂತರ ರೂಪಾಯಿ ಅನುದಾನ ಆರ್ಥಿಕ ವರ್ಷಾಂತ್ಯಕ್ಕೆ ಸರ್ಕಾರಕ್ಕೆ ಮರಳಿದೆ. ಇದು ಜಿಲ್ಲಾ ಪಂಚಾಯಿತಿ ಸದಸ್ಯರನ್ನು ಕೆರಳಿಸಿತು.

ಜಿಲ್ಲಾ ಪಂಚಾಯಿತಿ ಸದಸ್ಯರಿಗೆ ಮಂಜೂರಾಗಿದ್ದ ಅಭಿವೃದ್ಧಿ ಅನುದಾನ ಬಹುತೇಕ ವಾಪಾಸ್ ಆಗಿರುವ ಬಗ್ಗೆ ಸದಸ್ಯ ಗುರುಮೂರ್ತಿ ಸಭೆಯಲ್ಲಿ ಪ್ರಸ್ತಾಪಿದರು. ಇದಕ್ಕೆ ಧ್ವನಿಗೂಡಿಸಿದ ಇತರ ಸದಸ್ಯರು, ‘ಫೆ.29ರಂದು ನಡೆದ ಸಾಮಾನ್ಯ ಸಭೆಯಲ್ಲಿ ಅನುದಾನ ಸಂಪೂರ್ಣ ಬಳಕೆ ಆಗುವಂತೆ ನೋಡಿಕೊಳ್ಳಬೇಕು ಎಂಬ ಎಚ್ಚರಿಕೆ ನೀಡಲಾಗಿತ್ತು. ಆದರೂ, ದೊಡ್ಡ ಮೊತ್ತ ಕೈತಪ್ಪಿದ್ದಕ್ಕೆ ಅಧಿಕಾರಿಗಳೇ ಹೊಣೆ. ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಿ’ ಎಂದು ಒತ್ತಾಯಿಸಿದರು.

‘ಆರ್ಥಿಕ ವರ್ಷ ಏಪ್ರಿಲ್‌ನಲ್ಲಿ ಆರಂಭವಾಗುತ್ತದೆ. ಜೂನ್‌ ಹಾಗೂ ಜುಲೈ ಹೊತ್ತಿಗೆ ಕಾಮಗಾರಿಗಳ ಬಿಲ್‌ ಸಲ್ಲಿಕೆ ಆಗುತ್ತದೆ. ಆದರೆ, ಮಾರ್ಚ್‌ ಅಂತ್ಯದವರೆಗೂ ಬಿಲ್‌ ಪಾವತಿಗೆ ಅಧಿಕಾರಿಗಳು ಆಸಕ್ತಿ ತೋರುವುದಿಲ್ಲ. ಪ್ರತಿ ವರ್ಷ ಇದೇ ಲೋಪ ಏಕೆ ಉಂಟಾಗುತ್ತಿದೆ’ ಎಂದು ಗುರುಮೂರ್ತಿ ಪ್ರಶ್ನಿಸಿದರು. ಇದಕ್ಕೆ ಧ್ವನಿಗೂಡಿಸಿದ ಸದಸ್ಯೆ ಜಯಪ್ರತಿಭಾ, ‘ಮೂರನೇ ಪಾರ್ಟಿ ಏಜೆನ್ಸಿ ನಿಗದಿಪಡಿಸುವಲ್ಲಿ ವಿಳಂಬವಾಗುತ್ತಿದೆ’ ಎಂಬ ಅಸಮಾಧಾನ ವ್ಯಕ್ತಪಡಿಸಿದರು.

ಎಂಜಿನಿಯರ್‌ ವಿರುದ್ಧ ಕಿಡಿ

ಪಂಚಾಯಿತ್‌ರಾಜ್‌ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ವಿರುದ್ಧ ಜಿಲ್ಲಾ ಪಂಚಾಯಿತಿ ಸದಸ್ಯರು ಕಿರಿಕಾರಿದರು. ಕರ್ತವ್ಯದಿಂದ ಅಮಾನತು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲು ಒತ್ತಡ ಹೇರಿದರು.

ಅನುಪಾಲನ ವರದಿಯ ಮೇಲೆ ನಡೆಯುತ್ತಿದ್ದ ಚರ್ಚೆಯ ಸಂದರ್ಭದಲ್ಲಿ ‘ಮಳೆ ಹಾನಿಗೆ ತುತ್ತಾದ ಕಟ್ಟಡ, ಕೆರೆ, ಕಟ್ಟೆಗಳು ದುರಸ್ತಿಯಾಗಿವೆ’ ಎಂದು ಸದಸ್ಯ ನರಸಿಂಹರಾಜು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾರ್ಯಪಾಲಕ ಎಂಜಿನಿಯರ್‌, ‘ಜಿಲ್ಲೆಯಲ್ಲಿ ಯಾವುದೇ ಕಟ್ಟಡ, ಕೆರೆ ನೆರೆಗೆ ತುತ್ತಾಗಿಲ್ಲ’ ಎಂಬ ಸ್ಪಷ್ಟನೆ ನೀಡಿದರು. ಇದು ಸದಸ್ಯರ ಆಕ್ರೋಶಕ್ಕೆ ಕಿಡಿಹೊತ್ತಿಸಿತು.

‘ನೆರೆಗೆ ಸಂಬಂಧಿಸಿದಂತೆ 536 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂಬ ಅನುಪಾಲನಾ ವರದಿಯ ಬಗ್ಗೆ ಸ್ಪಷ್ಟಪಡಿಸಿ’ ಎಂದು ಅಧ್ಯಕ್ಷೆ ಶಶಿಕಲಾ ಸೂಚನೆ ನೀಡಿದರು. ಹೊಸದುರ್ಗ ತಾಲ್ಲೂಕಿನ ನೀರಗುಂದ ಗ್ರಾಮದ ಕೆರೆ ಒಡೆದು ಅಪಾರ ನೀರು ನಷ್ಟವಾಗಿರುವುದು ನೆರೆಯ ಕಾರಣಕ್ಕೆ ಅಲ್ಲವೇ ಎಂದು ಸದಸ್ಯರಾದ ಆರ್‌.ಅನಂತು, ಅಜ್ಜಪ್ಪ ಪ್ರಶ್ನಿಸಿದರು. ‘ಕಾರ್ಯಪಾಲಕ ಎಂಜಿನಿಯರ್‌ ಸದಸ್ಯರ ಅಭಿಪ್ರಾಯ ಪರಿಗಣಿಸುವುದಿಲ್ಲ’ ಎಂದು ವಿಶಾಲಾಕ್ಷಿ ಕಿರಿಕಾರಿದರು.

ಗೊಂದಲದ ಗೂಡಾದ ಸಭೆ

ಜಿಲ್ಲಾ ಪಂಚಾಯಿತಿ ಸದಸ್ಯೆ ಸೌಭಾಗ್ಯ ಬಸವರಾಜನ್ ಅವರು ಎತ್ತಿದ ಪ್ರಶ್ನೆಗೆ ಸಭೆ ಗೊಂದಲ ಗೂಡಾಗಿ ಪರಿಣಮಿಸಿತು. ಅಧಿಕಾರಿಗಳ ತಪ್ಪಿನ ಬಗ್ಗೆ ಸದಸ್ಯರೂ ಅಸಮಾಧಾನ ವ್ಯಕ್ತಪಡಿಸಿದರು.

‘ಇದು ಸಾಮಾನ್ಯ ಸಭೆಯೇ ಅಥವಾ ವಿಶೇಷ ಸಾಮಾನ್ಯ ಸಭೆಯೇ ಸ್ಪಷ್ಟಪಡಿಸಿ’ ಎಂದು ಸೌಭಾಗ್ಯ ಪಟ್ಟು ಹಿಡಿದರು. ಅಧ್ಯಕ್ಷರು ನೀಡಿದ ಸಮಜಾಯಿಷಿಗೆ ತೃಪ್ತರಾಗದ ಅವರು, ಅಧಿಕಾರಿಗಳ ಸ್ಪಷ್ಟನೆಗೆ ಒತ್ತಾಯಿಸಿದರು. ಇದು ಆಡಳಿತಾರೂಢ ಪಕ್ಷದ ಸದಸ್ಯರನ್ನು ಕೆರಳಿಸಿತು.

‘ಜಿಲ್ಲೆಯಲ್ಲಿ ಹಲವು ಸಮಸ್ಯೆ ಇವೆ. ಅವುಗಳ ಚರ್ಚೆಗೆ ಅವಕಾಶ ಕಲ್ಪಿಸಿ’ ಎಂದು ಕಾಂಗ್ರೆಸ್ ಸದಸ್ಯರು ಮನವಿ ಮಾಡಿದರು. ಸದಸ್ಯ ಕೃಷ್ಣಮೂರ್ತಿ ಮಧ್ಯಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಉಪಾಧ್ಯಕ್ಷೆ ಸುಶೀಲಮ್ಮ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು