ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಲಾಭ, ನಷ್ಟದ ಉದ್ದಿಮೆಯಲ್ಲ: ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ

ಚಿಣ್ಣರ ನಡೆ ಕೃಷಿಯ‌ ಕಡೆ ಕಾರ್ಯಕ್ರಮ
Last Updated 7 ನವೆಂಬರ್ 2019, 19:31 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಕೃಷಿ ಲಾಭ, ನಷ್ಟದ ಉದ್ದಿಮೆಯಲ್ಲ. ಅದು ದೇವರು, ಪ್ರಕೃತಿ ಕರುಣಿಸಿರುವ ಉದ್ಯೋಗ. ಇಂತಹ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಅನ್ನದಾತ ನಮ್ಮೆಲ್ಲರ ಪಾಲಿನ ಆಹಾರದಾತ’ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

ತರಾಸು ರಂಗಮಂದಿರದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಆಯೋಜಿಸಿದ್ದ ‘ಚಿಣ್ಣರ ನಡೆ ಕೃಷಿಯ ಕಡೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಇಂದಿನ ಎಲ್ಲಾ ಮಕ್ಕಳಿಗೂ ವೈದ್ಯರು, ಎಂಜಿನಿಯರ್ ಆಗಬೇಕು ಎಂಬ ‌ಆಸೆ. ಆದರೆ, ರೈತರಾಗಬೇಕು ಎಂದು ಬಯಸುವವರು ಸಂಖ್ಯೆ ತುಂಬಾ ವಿರಳ.‌ ಕೃಷಿ ನಮ್ಮ ದೇಶದ ಬೆನ್ನೆಲುಬಾಗಿದ್ದು, ಕೃಷಿ ಕ್ಷೇತ್ರದತ್ತ ಆಸಕ್ತಿಯನ್ನೂ ಬೆಳೆಸಿಕೊಳ್ಳಬೇಕಿದೆ’ ಎಂದು ಅಭಿಪ್ರಾಯಪಟ್ಟರು.

‘ಕೃಷಿ ಪದವೀಧರರು ಆದರೆ ಏನು ಪ್ರಯೋಜನ? ರೈತ ಜಮೀನುಗಳಲ್ಲಿ ಏನು ಕೆಲಸ ಮಾಡುತ್ತಾರೆ. ಅವರು ದವಸ, ಧಾನ್ಯ ಬೆಳೆಯಲು ಎಷ್ಟು ಕಷ್ಟ ಪಡುತ್ತಾರೆ ಎಂಬ ಅಂಶವನ್ನು ನಗರ ಪ್ರದೇಶದಲ್ಲಿ ಜನಿಸಿದ ಪ್ರತಿಯೊಂದು ಮಗುವೂ ತಿಳಿದುಕೊಳ್ಳಬೇಕು. ಆ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ವಿನೂತನ ಪ್ರಯತ್ನಕ್ಕೆ ಕೈಯಾಕಿರುವುದು ಸಂತಸದ ವಿಚಾರ’ ಎಂದರು.

ಜಿಲ್ಲಾ ಪಂ‌ಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯಭಾಮಾ, ‘ಜಾಗತೀಕರಣ ಪ್ರಭಾವದಿಂದಾಗಿ ಪೋಷಕರು ನಮ್ಮ ಮಕ್ಕಳು ಸಕಲ ವಿದ್ಯಾ ಪಾರಂಗತರಾಗಬೇಕು ಎಂಬುದಾಗಿ ಆಸೆ ಪಡುತ್ತಿದ್ದು, ಧಾವಂತದ ಸ್ಥಿತಿ ನಿರ್ಮಾಣವಾಗುತ್ತಿದೆ. ಎಲ್ಲವನ್ನೂ ಕಲಿಯಬೇಕೆಂದು ಮಕ್ಕಳ ಮೇಲೆ ಹೆಚ್ಚು ಹೊರೆ ಹಾಕಲಾಗುತ್ತಿದೆ’ ಎಂದು ಅಸಮಧಾನ ವ್ಯಕ್ತಪಡಿಸಿದರು.

‘ರಾಗಿಯನ್ನು ಬಿತ್ತನೆ ಹಾಗೂ ನಾಟಿ ವಿಧಾನಗಳಲ್ಲಿ ಬೆಳೆಯಲಾಗುತ್ತಿದ್ದು, ಎರಡೂ ಬಗೆಯಲ್ಲೂ ಸಾಕಷ್ಟು ವ್ಯತ್ಯಾಸಗಳಿವೆ. ಆದರೆ, ಈ ಕುರಿತು ಇಂದಿನ ಮಕ್ಕಳಲ್ಲಿ ಮಾಹಿತಿ ಇಲ್ಲ. ರೈತರ ಜಮೀನು ನೋಡಲು ಚೆನ್ನಾಗಿರುತ್ತದೆ. ಫಸಲು ಬಂದು ಇಳುವಡಿ ಕಡಿಮೆಯಾದರೆ ಅಥವಾ ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದೇ ನಷ್ಟವಾದರೆ ನೋವು ಅನುಭವಿಸುವುದು ರೈತ ಮಾತ್ರ. ಆದ್ದರಿಂದ ಎಂತಹ ಕಷ್ಟ ಬಂದರೂ ಧೈರ್ಯವಾಗಿ ಎದುರಿಸುವುದನ್ನು ಕೃಷಿ, ಕೃಷಿಕರಿಂದ ಕಲಿಯಲು ಸಾಧ್ಯವಿದೆ’ ಎಂದರು.

ಬಬ್ಬೂರು ಕೃಷಿ ವಿಜ್ಞಾನ‌ ಕೇಂದ್ರದ ವಿಜ್ಞಾನಿ ಓಂಕಾರಪ್ಪ, ಜಿಲ್ಲಾ ಪಂ‌ಚಾಯಿತಿ ಸದಸ್ಯರಾದ ಪ್ರಕಾಶ್‌ಮೂರ್ತಿ, ನರಸಿಂಹ, ರೈತ‌ ಮುಖಂಡರಾದ ನುಲೇನೂರು‌ ಶಂಕರಪ್ಪ, ಸುರೇಶ್‌ಬಾಬು, ಡಿಡಿಪಿಐ ರವಿಶಂಕರ್ ರೆಡ್ಡಿ, ಬಿಇಒ ಸಿದ್ದಪ್ಪ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT