ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಂಬೆಗೆ ಬ್ಯಾಕ್ಟೀರಿಯಾ ಬ್ಲೈಟ್ ರೋಗ

ಅಪಾರ ನಷ್ಟ: ಪರಿಹಾರಕ್ಕೆ ರೈತ ಕುಟುಂಬ ಮೊರೆ
Last Updated 17 ಜೂನ್ 2021, 5:28 IST
ಅಕ್ಷರ ಗಾತ್ರ

ಧರ್ಮಪುರ: ಬೆನಕನಹಳ್ಳಿಯ ರೈತ ಮಹಿಳೆ ಗೋವಿಂದಮ್ಮ ಅವರು ಒಂದು ಎಕರೆಯ ದಾಳಿಂಬೆ ಬೆಳೆಯು ಬ್ಯಾಕ್ಟೀರಿಯಾ ಬ್ಲೈಟ್ ಹಾಗೂ ಅತಿ ಶೀತದಿಂದ ಹಾನಿಗೀಡಾಗಿದೆ. ತೋಟದ ಹಣ್ಣು ಸಂಪೂರ್ಣ ಉದುರುತ್ತಿವೆ.

‘ಎರಡು ವರ್ಷಗಳಿಂದ ಸಾವಯವ ಗೊಬ್ಬರ, ಔಷಧ ಸಿಂಪಡಣೆ, ಹನಿ ನೀರಾವರಿ ಸೇರಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದೇವೆ. ಗಿಡದಲ್ಲಿ ಹಣ್ಣು ಚೆನ್ನಾಗಿ ಬಂದಿತ್ತು. ಹಣ್ಣು ಕಟಾವಿಗೆ ಬರುವಷ್ಟರಲ್ಲಿ ಬರಸಿಡಿಲಿನಂತೆ ಈ ರೋಗ ಅಪ್ಪಳಿಸಿದೆ’ ಎಂದು ರೈತ ಮಹಿಳೆ ಗೋವಿಂದಮ್ಮ ಜಮೀನಿನಲ್ಲಿ ಗೋಳಾಡುತ್ತಿದ್ದರು.

ಎರಡು ವರ್ಷಗಳಿಂದ ಬೇರೆ ಬೆಳೆ ಬೆಳೆಯಲಾರದೇ ಇದನ್ನೇ ನಂಬಿಕೊಂಡಿದ್ದ ಅವರು ಉಳಿದಿರುವ ಸ್ವಲ್ಪ ಹಣ್ಣು ಕಿತ್ತು ಮಾರುಕಟ್ಟೆಗೆ ಸಾಗಿಸಲು ಶಕ್ತಿ ಇಲ್ಲದೇ ಕುಗ್ಗಿ ಹೋಗಿದ್ದಾರೆ. ಲಾಕ್‌ಡೌನ್ ಪರಿಸ್ಥಿತಿ, ಧಾರಣೆ ಕುಸಿತದಿಂದ ಕಂಗಾಲಾಗಿದ್ದಾರೆ.

‘ಎರಡು ವರ್ಷಗಳಿಂದ ದಾಳಿಂಬೆ ಬೆಳೆಯಲು ಮನೆ ಮಂದಿಯೆಲ್ಲ ಜಮೀನಿನಲ್ಲಿ ಆರೈಕೆ ಮಾಡಿದ್ದೆವು. ಆದರೆ, ರೋಗದಿಂದ ಬೆಳೆ ಸಂಪೂರ್ಣ ನಷ್ಟವಾಗಿದೆ. ಸುಮಾರು ನಾಲ್ಕೈದು ಲಕ್ಷ ರೂಪಾಯಿಗಳಷ್ಟು ನಷ್ಟವಾಗಿದೆ. ನಮಗೆ ದಿಕ್ಕು ತೋಚದಂತಾಗಿದೆ. ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸಂಬಂಧಪಟ್ಟ ಸಚಿವರ ಗಮನಕ್ಕೆ ತಂದು ನಮಗೆ ಪರಿಹಾರ ಕೊಡಿಸಬೇಕು’ ಎಂದು ಗೋವಿಂದಮ್ಮ ಅವರ ಪುತ್ರ ಶ್ರೀನಿವಾಸ್ ಮನವಿ
ಮಾಡಿದ್ದಾರೆ.

ವಿಜಯಪುರ ಜಿಲ್ಲೆ ಹೊರತು ಪಡಿಸಿದರೆ ಚಿತ್ರದುರ್ಗ ಜಿಲ್ಲೆ, ಹಿರಿಯೂರು ತಾಲ್ಲೂಕಿನ ಧರ್ಮಪುರ ಹೋಬಳಿ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಸೂಕ್ತ ವಾತಾವರಣ ಹೊಂದಿವೆ. 10 ವರ್ಷಗಳಿಂದ ಇಲ್ಲಿಯ ರೈತರು ಹೊಸ– ಹೊಸ ಪ್ರಯೋಗಗಳನ್ನು ಮಾಡುತ್ತ ದಾಳಿಂಬೆ, ಪಪ್ಪಾಯಿ, ಮೋಸಂಬಿ, ಸೀಬೆ, ಅಂಜೂರ, ಕಲ್ಲಂಗಡಿ ಬೆಳೆದು ಸಫಲತೆ ಗಳಿಸಿದ್ದಾರೆ. ಆದರೆ, ಈಚಿನ ದಿನಗಳಲ್ಲಿ ಹಣ್ಣಿನ ಬೆಳೆಗಳಿಗೆ ರೋಗ ಬಾಧೆ ಹೆಚ್ಚಾಗಿದೆ. ಇದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ.

ಉಳಿದಿರುವ ಹಣ್ಣುಗಳನ್ನು ಮಾರುಕಟ್ಟೆಗೆ ಒಯ್ಯಲು ವ್ಯವಸ್ಥೆ

ಯಾವುದೇ ತೋಟಗಾರಿಕಾ ಬೆಳೆ ಇರಲಿ, ರೋಗ ಕಾಣಿಸಿಕೊಂಡ ತಕ್ಷಣ ನಮ್ಮ ಗಮನಕ್ಕೆ ತರುವುದು ಸೂಕ್ತ. ಅದಕ್ಕೆ ಸಂಬಂಧಪಟ್ಟಂತೆ ಮಾರ್ಗದರ್ಶನ ನೀಡಲಾಗುವುದು. ಉಳಿದಿರುವ ಹಣ್ಣುಗಳನ್ನು ಮಾರುಕಟ್ಟೆಗೆ ಕಳುಹಿಸಿಕೊಡುವ ವ್ಯವಸ್ಥೆ ಬಗ್ಗೆ ನಿರ್ದೇಶನ ನೀಡಲಾಗುವುದು. ಎನ್‌ಆರ್‌ಇಜಿಯಲ್ಲಿ ಅಡಿಕೆ ಬಿಟ್ಟು ಬೇರೆ ತೋಟಗಾರಿಕಾ ಬೆಳೆ ಬೆಳೆಯಲು ಅನುದಾನ, ಹನಿ ನೀರಾವರಿಗೆ ಅನುದಾನ ಕಲ್ಪಿಸಿಕೊಡಲಾಗುವುದು. ಯಾವುದೇ ಕಾರಣಕ್ಕೂ ರೈತರು ಆತಂಕ ಪಡಬಾರದು.

– ಕೆ.ಲೋಕೇಶ್, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT