ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಿ ಉಳುಮೆ ತಪ್ಪದೆ ಮಾಡಿ: ರೈತ ಸಮುದಾಯಕ್ಕೆ ಕೃಷಿ ಇಲಾಖೆ ಸಲಹೆ

Last Updated 30 ಏಪ್ರಿಲ್ 2019, 12:24 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಹೊಲದ ಮಣ್ಣಿನ ಸವಕಳಿ ತಡೆದು, ಅದರ ಫಲವತ್ತತೆ ಹೆಚ್ಚಳವಾಗಲು ರೈತರು ಹೊಲಗಳಲ್ಲಿ ತಪ್ಪದೇ ಮಾಗಿ ಉಳುಮೆ ಮಾಡಬೇಕು’ ಎಂದು ಕೃಷಿ ಇಲಾಖೆ ರೈತರಿಗೆ ಸಲಹೆ ನೀಡಿದೆ.

‘ಖುಷ್ಕಿ ಭೂಮಿಯಲ್ಲಿ ಅತ್ಯಂತ ಸಹಜವಾಗಿ ನೀರು ಇಂಗಿಸುವ ವಿಧಾನವೆಂದರೆ ಮಾಗಿ ಉಳುಮೆ. ಹದವಾಗಿ ಉಳುಮೆ ಮಾಡುವುದರಿಂದ ಹೆಂಟೆಗಳು ಒಡೆಯುತ್ತವೆ. ಮಣ್ಣಿನ ಕಣಗಳ ರಚನೆಯು ಸುಧಾರಿಸುತ್ತದೆ’ ಎಂದು ತಿಳಿಸಿದೆ.

‘ಈ ವಿಧಾನದಿಂದ ಮಣ್ಣು ಸಡಿಲವಾಗುವ ಕಾರಣ ಬಿದ್ದ ಮಳೆ ನೀರು ಭೂಮಿಯ ಹೊರಪದರದಲ್ಲಿ ಹರಿದು ಹೋಗದೇ ಒಳಗೆ ಇಳಿಯುತ್ತದೆ. ಇದರಿಂದ ಜಮೀನು ತೇವಾಂಶದಿಂದ ಕೂಡಿರುತ್ತದೆ. ಜತೆಗೆ ಅದರ ಪ್ರಯೋಜನ ಸುಲಭವಾಗಿ ಬೆಳೆಗಳಿಗೆ ದಕ್ಕುತ್ತದೆ’ ಎಂದು ತಿಳಿಸಿದೆ.

‘ಇಳಿ ಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದರಿಂದ ಮಣ್ಣಿನ ಸವಕಳಿ ತಡೆದು ಅದರ ಫಲವತ್ತತೆ ಉಳಿಸಬಹುದು. ಆಳವಾದ ಉಳುಮೆ ಮಾಡಲು ಅವಶ್ಯಕವಾದ ಬಲರಾಂ ನೇಗಿಲು, ಎಂಬಿಫ್ಲೋ, ಕಲ್ಟಿವೇಟರ್ ಮುಂತಾದ ಕೃಷಿ ಯಂತ್ರೋಪಕರಣ ಬಳಸಿ’ ಎಂದು ಮನವಿ ಮಾಡಿದೆ.

‘ಒಂದು ಅಡಿಗಿಂತ ಆಳವಾದ ಇಳಿಜಾರಿಗೆ ಅಡ್ಡಲಾಗಿ ಉಳುಮೆ ಮಾಡುವುದರಿಂದ ಮಣ್ಣಿನಲ್ಲಿ ಗಾಳಿಯಾಡುವಿಕೆ ಅಧಿಕಗೊಳ್ಳುತ್ತದೆ. ಜತೆಗೆ ಬೆಳೆಯ ತ್ಯಾಜ್ಯ ವಸ್ತುಗಳಾದ ಬೇರು, ಕಾಂಡ, ಇತರೆ ಕೊಳೆಯುವಿಕೆ ಹೆಚ್ಚಾಗಿ ಪೋಷಕಾಂಶಗಳ ಲಭ್ಯತೆ ಅಧಿಕಗೊಳಿಸುತ್ತದೆ’ ಎಂದು ತಿಳಿಸಿದೆ.

‘ಬಹುತೇಕ ರೈತರು ಮಾಗಿ ಉಳುಮೆ ಮಾಡುವುದನ್ನು ಮರೆತಿರುವುದರಿಂದ ಅನೇಕ ರೀತಿಯ ಸಸ್ಯರೋಗ, ಕೀಟರೋಗ ಭಾದೆ ಹೆಚ್ಚಾಗಲು ಕಾರಣವಾಗಿದೆ. ಏಪ್ರಿಲ್‌ ತಿಂಗಳಿಂದ ಜೂನ್ 15ರವರೆಗೂ ಬಿಸಿಲಿನ ಪ್ರಖರತೆ ಹೆಚ್ಚುತ್ತಲೇ ಇರುತ್ತದೆ. ಮಾಗಿ ಉಳುಮೆ ಮಾಡಿದರೆ ಮಣ್ಣಿನ ಕೆಳ ಪದರದಲ್ಲಿ ಇರುವ ರೋಗಾಣುಗಳ ಶಿಲೀಂದ್ರಗಳು ನಾಶವಾಗುತ್ತವೆ’ ಎಂದು ಮಾಹಿತಿ ನೀಡಿದೆ.

‘ಉಳುಮೆ ಮಾಡುವಾಗ ಮಣ್ಣು ಮುಗುಚುವುದರಿಂದ ಕೀಟಗಳು ಮೇಲ್ಪದರಕ್ಕೆ ಬರುತ್ತವೆ. ಅವುಗಳು ಬಿಸಿಲಿನಿಂದ ನಾಶವಾಗುವುದರ ಜೊತೆಗೆ ಹಕ್ಕಿಗಳಿಗೆ ಆಹಾರವಾಗುತ್ತವೆ. ಇದರಿಂದ ಬೆಳೆಯ ಬೆಳವಣಿಗೆ ಹೆಚ್ಚುವ ಸಂದರ್ಭದಲ್ಲಿ ಉಂಟಾಗುವ ಕೀಟ ಭಾದೆ ನಿಯಂತ್ರಿತವಾಗುತ್ತದೆ’ ಎಂದು ತಿಳಿಸಿದೆ.

‘ಬಿರುಸಾದ ಬೇಸಿಗೆ ಮಳೆ ಬರುವುದಕ್ಕೆ ಮುಂಚೆ ಜಮೀನನ್ನು ಚೆನ್ನಾಗಿ ಉಳುಮೆ ಮಾಡುವುದು ಸೂಕ್ತ. ರಭಸದ ಮಳೆ ಬೀಳುವುದಕ್ಕೆ ಮುಂಚೆ ಹೊಲವನ್ನು ಉತ್ತಿ ಹದ ಮಾಡಿದರೆ, ಮುಂದಿನ ಹಂಗಾಮಿನಲ್ಲಿ ಬೆಳೆ ಇಳುವರಿ ಸಮೃದ್ಧವಾಗಿ ಬರುತ್ತದೆ. ಅತೀ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದು’ ಎಂದು ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ಸಮೀಪದ ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT