ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಂಕು ನಿವಾರಕ ಮಾರ್ಗಕ್ಕೆ ಚಾಲನೆ

ನಾಗರಿಕರ ಸುರಕ್ಷತೆಗಾಗಿ ಅಳವಡಿಕೆ; ಶಾಸಕ ಜಿ.ಎಚ್. ತಿಪ್ಪಾರೆಡ್ಡಿ
Last Updated 4 ಏಪ್ರಿಲ್ 2020, 13:58 IST
ಅಕ್ಷರ ಗಾತ್ರ

ಚಿತ್ರದುರ್ಗ: ಕೊರೊನಾ ವೈರಸ್ ಹರಡದಂತೆ ಸಾರ್ವಜನಿಕರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದ ಪ್ರವೇಶ ದ್ವಾರದಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆಯಿಂದ ಸಿದ್ಧಪಡಿಸಿರುವ ಸೋಂಕು ನಿವಾರಕ ಮಾರ್ಗಕ್ಕೆ ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಶನಿವಾರ ಚಾಲನೆ ನೀಡಿದರು.

₹ 80 ಸಾವಿರ ವೆಚ್ಚದಲ್ಲಿ ನಿರ್ಮಾಣ: ಸೋಂಕು ನಿವಾರಕ ಮಾರ್ಗವನ್ನು ಸ್ಟೈನ್‍ಲೆಸ್ ಸ್ಟೀಲ್‍ನಲ್ಲಿ ನಿರ್ಮಾಣ ಮಾಡಲಾಗಿದ್ದು, ₹ 80 ಸಾವಿರ ವೆಚ್ಚದಲ್ಲಿ ಸ್ಥಳೀಯವಾಗಿ ತಯಾರಿಸಲಾಗಿದೆ. ಈ ಸೋಂಕು ನಿವಾರಕ ಮಾರ್ಗವು ತಲಾ 10 ಅಡಿ ಉದ್ದ, ಎತ್ತರ ಹಾಗೂ 5 ಅಡಿ ಅಗಲವಿದೆ.

ಮಾರುಕಟ್ಟೆ ಪ್ರವೇಶಿಸುವ ವ್ಯಾಪಾರಿಗಳು, ಗ್ರಾಹಕರು ಸೇರಿ ಪ್ರತಿಯೊಬ್ಬರಿಗೂ ಕೊರೊನಾ ವೈರಸ್ ಹರಡದಂತೆ ತಡೆಯಲು ಸೋಡಿಯಂ ಹೈಪೋಕ್ಲೋರೈಡ್ ದ್ರಾವಣ ಸಿಂಪಡಿಸುವ ವ್ಯವಸ್ಥೆ ಇದಾಗಿದೆ ಎಂದು ನಗರಸಭೆ ಮಾಹಿತಿ ನೀಡಿದೆ.

ಪ್ರತಿಯೊಬ್ಬರು ಕೈಗಳನ್ನು ಮೇಲೆತ್ತಿಕೊಂಡು ಸೋಂಕು ನಿವಾರಕ ಮಾರ್ಗದಲ್ಲಿ ಹಾದು ಹೋಗಬೇಕು. ಮುಂಜಾನೆ 3ರಿಂದ ಬೆಳಿಗ್ಗೆ 8ರ ವರೆಗೆ ಇದು ಕಾರ್ಯನಿರ್ವಹಿಸಲಿದೆ.

‘ಈ ಮೈದಾನದಲ್ಲಿ ಕೆಲ ದಿನಗಳಿಂದ ತರಕಾರಿ ಸಂತೆ ನಡೆಸಲಾಗುತ್ತಿದೆ. ಹಾಗಾಗಿ ಇಲ್ಲಿಗೆ ನಿತ್ಯ ವ್ಯಾಪಾರಿಗಳು, ಗ್ರಾಹಕರು ಸೇರಿ ಸಾವಿರಾರೂ ಜನ ಬರುತ್ತಾರೆ. ಈ ಕಾರಣಕ್ಕಾಗಿ ಮುನ್ನಚ್ಚರಿಕೆ ವಹಿಸಿರುವುದು ಸ್ವಾಗತಾರ್ಹ’ ಎಂದು ತಿಪ್ಪಾರೆಡ್ಡಿ ತಿಳಿಸಿದರು.

‘ಸೋಂಕು ನಿವಾರಕ ಅಳವಡಿಕೆ ವಿನೂತನ ಪ್ರಯೋಗವಾಗಿದೆ. ನಗರದ ವಿವಿಧೆಡೆ ಇಂತಹ ಸೋಂಕು ನಿವಾರಕ ಮಾರ್ಗಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಕೋವಿಡ್-19 ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರ ಸಹಕಾರವೂ ಅಗತ್ಯ’ ಎಂದು ಅವರು ಮನವಿ ಮಾಡಿದರು.

ಜಿಲ್ಲಾಧಿಕಾರಿ ಆರ್. ವಿನೋತ್ ಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ರಾಧಿಕಾ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ಪ್ರಕಾಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೊನ್ನಾಂಬ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ ರಾಜಶೇಖರ್, ತಹಶೀಲ್ದಾರ್ ಜೆ.ಸಿ. ವೆಂಕಟೇಶಯ್ಯ, ಪೌರಾಯುಕ್ತ ಜೆ.ಟಿ. ಹನುಮಂತರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಲಾಕ್ಷ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಜೆ. ಬಸವರಾಜ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT