ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸುಪ್ರೀಂ’ ನ್ಯಾಯಮೂರ್ತಿಗಳ ಬಂಧನ

ಮಾಲ್ಡೀವ್ಸ್‌ನಲ್ಲಿ ತುರ್ತು ಪರಿಸ್ಥಿತಿ: ಅಧ್ಯಕ್ಷ ಯಮೀನ್‌ರಿಂದ ಕಠಿಣ ಕ್ರಮ
Last Updated 6 ಫೆಬ್ರುವರಿ 2018, 19:42 IST
ಅಕ್ಷರ ಗಾತ್ರ

ಮಾಲೆ (ಎಪಿ): ಮಾಲ್ಡೀವ್ಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಬಳಿಕ ಸೋಮವಾರ ಮಧ್ಯರಾತ್ರಿ ಸುಪ್ರೀಂ ಕೋರ್ಟ್‌ನ ಇಬ್ಬರು ನ್ಯಾಯಮೂರ್ತಿ
ಗಳು ಹಾಗೂ ಮಾಜಿ ಅಧ್ಯಕ್ಷ ಮಾಮೂನ್ ಅಬ್ದುಲ್ ಗಯೂಮ್‌ ಅವರನ್ನು ಬಂಧಿಸಲಾಗಿದೆ.

ಜೈಲಿನಲ್ಲಿರುವ ವಿರೋಧ ಪಕ್ಷದ ಹಲವು ನಾಯಕರನ್ನು ಬಿಡುಗಡೆಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಕಳೆದ ವಾರ ಆದೇಶ ನೀಡಿತ್ತು. ಇದಾದ ಬಳಿಕ  ಅಧ್ಯಕ್ಷ ಯಮೀನ್ ಅಬ್ದುಲ್ ಗಯೂಮ್ ಅವರು ರಾಜಕೀಯ ವಿರೋಧಿಗಳಿಂದ ತಮ್ಮ ಸರ್ಕಾರ ಉಳಿಸಿಕೊಳ್ಳಲು ಮುಂದಾಗಿದ್ದಾರೆ. ಹೀಗಾಗಿ, ಸರ್ಕಾರ ಸೋಮವಾರ ತಡರಾತ್ರಿ, 15 ದಿನಗಳ ತುರ್ತು ಪರಿಸ್ಥಿತಿ ಘೋಷಿಸಿದೆ. ಇದರಿಂದಾಗಿ ಯಾರನ್ನಾದರೂ ಬಂಧಿಸಲು, ಶೋಧ ಕಾರ್ಯ ನಡೆಸಲು, ಸ್ವತ್ತುಗಳನ್ನು ವಶಪಡಿಸಿಕೊಳ್ಳಲು ಹಾಗೂ ಸಾರ್ವಜನಿಕರು ಗುಂಪಾಗಿ ಸೇರುವುದನ್ನು ತಡೆಯುವ ಅಧಿಕಾರ ಸರ್ಕಾರಕ್ಕೆಇರುತ್ತದೆ.

ತುರ್ತು ಪರಿಸ್ಥಿತಿ ಘೋಷಿಸಿದ ಕೆಲವೇ ತಾಸುಗಳಲ್ಲಿ ಭದ್ರತಾ ಸಿಬ್ಬಂದಿ ಸುಪ್ರೀಂ ಕೋರ್ಟ್ ಕಟ್ಟಡಕ್ಕೆ ನುಗ್ಗಿ, ಮುಖ್ಯ ನ್ಯಾಯಮೂರ್ತಿ ಅಬ್ದುಲ್ಲಾ ಸಯೀದ್ ಹಾಗೂ ನ್ಯಾಯಮೂರ್ತಿ ಅಲಿ ಹಮೀದ್ ಅವರನ್ನು ಬಂಧಿಸಿದ್ದಾರೆ. ಆದರೆ, ಇವರ ವಿರುದ್ಧ ಹೊರಿಸಿರುವ ಆರೋಪಗಳ ಬಗ್ಗೆ ತಿಳಿಸಿಲ್ಲ. ಇನ್ನಿಬ್ಬರು ನ್ಯಾಯಮೂರ್ತಿಗಳು ಎಲ್ಲಿದ್ದಾರೆ ಎನ್ನುವುದು ಸ್ಪಷ್ಟವಾಗಿಲ್ಲ.

ವಿರೋಧ ಪಕ್ಷದ ನಾಯಕರೂ ಆಗಿರುವ ಮಾಮೂನ್ ಅಬ್ದುಲ್ ಗಯೂಮ್‌ ಅವರನ್ನು ಅವರ ಮನೆಯಿಂದ ಭದ್ರತಾ ಸಿಬ್ಬಂದಿ ಬಂಧಿಸಿ ಕರೆದೊಯ್ದಿದ್ದಾರೆ. ಈ ವೇಳೆ ಮಾಮೂನ್ ಅವರು ಸ್ನೇಹಿತರು, ಕುಟುಂಬ ಸದಸ್ಯರನ್ನು ಆಲಂಗಿಸಿ, ಬೆಂಬಲಿಗರ ಕಡೆಗೆ ಕೈ ಬೀಸಿ, ಭದ್ರತಾ ಸಿಬ್ಬಂದಿ ಜತೆಗೆ ತೆರಳಿದ್ದು, ಇದನ್ನು ಅವರ ಪುತ್ರಿ ಮೊಬೈಲ್‌ನಲ್ಲಿ ವಿಡಿಯೊ ಮಾಡಿದ್ದಾರೆ.

ಬಂಧನಕ್ಕೂ ಸ್ವಲ್ಪ ಸಮಯ ಮೊದಲು ಮಾಮೂನ್ ತಮ್ಮ ಮನೆ ಸುತ್ತಲೂ ಭಾರಿ ಸಂಖ್ಯೆಯಲ್ಲಿ ಪೊಲೀಸರು ನೆರೆದಿರುವ ಬಗ್ಗೆ ಟ್ವೀಟ್‌ ಮಾಡಿದ್ದರು.

‘ನನ್ನನ್ನು ರಕ್ಷಿಸಲು ಅಥವಾ ಬಂಧಿಸಲು ಇಲ್ಲಿ ಪೊಲೀಸರು ಸೇರಿದ್ದಾರೆಯೇ ಎನ್ನುವುದು ತಿಳಿಯುತ್ತಿಲ್ಲ’ ಎಂದು ಟ್ವೀಟ್ ಮಾಡಿದ್ದರು.

ಮಾಮೂನ್ ಅವರು ಭ್ರಷ್ಟಾಚಾರದ ಹಾಗೂ ಸರ್ಕಾರವನ್ನು ಪದಚ್ಯುತಗೊಳಿಸಲು ಪ್ರಯತ್ನಿಸಿದ ಆರೋಪ ಎದುರಿಸುತ್ತಿದ್ದಾರೆ ಎಂದು ಅವರ ವಕೀಲ ಮಾಮೂನ್ ಹಮೀದ್ ಹೇಳಿದ್ದಾರೆ.

ಮಾಲ್ಡೀವ್ಸ್ ಬಹುಪಕ್ಷಗಳ ಪ್ರಜಾಪ್ರಭುತ್ವ ರಾಷ್ಟ್ರವಾದ ಬಳಿಕ 1978ರಿಂದ 2008ರ ಅವಧಿಗೆ ಮಾಮೂನ್ ಗಯೂಮ್ ಅವರು ಅಧ್ಯಕ್ಷರಾಗಿದ್ದರು.‌

ಮಾಜಿ ಅಧ್ಯಕ್ಷ ಗಯೂಮ್ ಅವರು ಅಧ್ಯಕ್ಷ ಯಮೀನ್ ಅವರ ಸೋದರ ಸಂಬಂಧಿಯೂ ಆಗಿದ್ದಾರೆ.

2013ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದಲೂ ಯಮೀನ್ ಅವರು ನಾಗರಿಕ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುತ್ತಿದ್ದು, ತಮಗೆ ವಿರೋಧ ವ್ಯಕ್ತಪಡಿಸಿದ ಬಹುತೇಕ ಎಲ್ಲ ರಾಜಕೀಯ ನಾಯಕರನ್ನೂ ಜೈಲಿಗೆ ಕಳುಹಿಸಿದ್ದಾರೆ ಅಥವಾ ಗಡಿಪಾರು ಮಾಡಿದ್ದಾರೆ.

(ಯಮೀನ್ ಅಬ್ದುಲ್ ಗಯೂಮ್)

ಖಂಡನೆ: ಅಧ್ಯಕ್ಷ ಯಮೀನ್ ಅವರ ಪ್ರಮುಖ ವಿರೋಧಿಯಾಗಿರುವ ಮತ್ತೊಬ್ಬ ಮಾಜಿ ಅಧ್ಯಕ್ಷ ಮೊಹಮ್ಮದ್ ನಷೀದ್ ಅವರು ಈ ತುರ್ತು ಪರಿಸ್ಥಿತಿಯನ್ನು ಖಂಡಿಸಿದ್ದಾರೆ. ತುರ್ತು ಪರಿಸ್ಥಿತಿಯನ್ನು ಕಾನೂನು ವಿರೋಧಿ ಆದೇಶ ಎಂದು ಟೀಕಿಸಿರುವ ಅವರು, ಜನರು ಇದನ್ನು ತಿರಸ್ಕರಿಸಬೇಕು ಎಂದು ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ನೀಡಿದ ಆದೇಶದ ಪ್ರಕಾರ ಬಿಡುಗಡೆಗೊಳ್ಳಬೇಕಾದ ವಿರೋಧ ಪಕ್ಷದ ನಾಯಕರ ಪಟ್ಟಿಯಲ್ಲಿ, ಗಡಿಪಾರಾಗಿರುವ ನಷೀದ್ ಸಹ ಇದ್ದಾರೆ.

ಅಮೆರಿಕ ಸೂಚನೆ: ಮಾಲ್ಡೀವ್ಸ್‌ನಲ್ಲಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅಮೆರಿಕ, ಯಮೀನ್ ಕಾನೂನು ಪಾಲಿಸಬೇಕು ಹಾಗೂ ಸುಪ್ರೀಂ ಕೋರ್ಟ್ ಆದೇಶವನ್ನು ಜಾರಿಗೆ ತರಬೇಕು ಎಂದು ಸೂಚಿಸಿದೆ.

**

ಭಾರತದ ನೆರವಿಗೆ ಮನವಿ

ಮಾಲ್ಡೀವ್ಸ್‌ನಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟು ಪರಿಹರಿಸಲು ಭಾರತ ರಾಜತಾಂತ್ರಿಕ ಹಾಗೂ ಸೇನಾಪಡೆಯ ನೆರವು ನೀಡಬೇಕು ಎಂದು ಮಾಜಿ ಅಧ್ಯಕ್ಷ ಮೊಹಮದ್ ನಷೀದ್ ಮನವಿ ಮಾಡಿದ್ದಾರೆ.

ನಷೀದ್ ತಮ್ಮ ನೇತೃತ್ವದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿ (ಎಂಡಿಪಿ) ಮೂಲಕ ನೀಡಿರುವ ಹೇಳಿಕೆಯಲ್ಲಿ, ‘ಯಮೀನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕು. ಮಾಲ್ಡೀವ್ಸ್ ಜನತೆ ಎಲ್ಲ ರಾಷ್ಟ್ರಗಳಿಗೂ ಈ ನ್ಯಾಯಬದ್ಧ ಮನವಿ ಮಾಡುತ್ತಾರೆ. ಅಮೆರಿಕದ ಎಲ್ಲ ಆರ್ಥಿಕ ಸಂಸ್ಥೆಗಳು ಯಮೀನ್ ಸರ್ಕಾರದ ನಾಯಕರ ಹಣಕಾಸು ವ್ಯವಹಾರಗಳನ್ನು ತಡೆಹಿಡಿಯಬೇಕು ಎಂದು ಮನವಿ ಮಾಡುತ್ತೇನೆ’ ಎಂದು ಹೇಳಿದ್ದಾರೆ.

**

ಬಿಕ್ಕಟ್ಟು ಉಲ್ಬಣ

ಬಂಧನದಲ್ಲಿರುವ ವಿರೋಧ ಪಕ್ಷದ ನಾಯಕರನ್ನು ಬಿಡುಗಡೆಗೊಳಿಸಬೇಕು ಎನ್ನುವ ಸುಪ್ರೀಂ ಕೋರ್ಟ್ ಆದೇಶದಿಂದಾಗಿ ದೇಶದಲ್ಲಿ ಬಿಕ್ಕಟ್ಟು ಹೆಚ್ಚಾಗಿದೆ. ಯಮೀನ್ ಅವರು ಸುಪ್ರೀಂ ಕೋರ್ಟ್ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ವಿರೋಧ ಪಕ್ಷಗಳು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿವೆ.

ತುರ್ತು ಪರಿಸ್ಥಿತಿ ಘೋಷಣೆಯಾದ ಬಳಿಕ ಮಾತನಾಡಿದ ಅಧ್ಯಕ್ಷ ಯಮೀನ್ ಅವರು ‘ಕೆಲವು ಹಕ್ಕುಗಳನ್ನು ನಿರ್ಬಂಧಿಸಲಾಗಿದೆ. ಸಾಮಾನ್ಯ ಸೇವೆಗಳು, ಚಟುವಟಿಕೆಗಳು ಹಾಗೂ ಉದ್ಯಮಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ’ ಎಂದು ಹೇಳಿದ್ದಾರೆ.

**

ಆತಂಕದ ವಿಷಯ

ನವದೆಹಲಿ: ಮಾಲ್ಡೀವ್ಸ್‌ನಲ್ಲಿನ ಬೆಳವಣಿಗೆಗಳು ಆತಂಕ ಮೂಡಿಸಿವೆ ಎಂದು ಭಾರತ ಪ್ರತಿಕ್ರಿಯಿಸಿದೆ.

‘ಫೆಬ್ರುವರಿ 1ರಂದು ಸುಪ್ರೀಂಕೋರ್ಟ್‌ ನೀಡಿರುವ ಆದೇಶ ಪಾಲಿಸಲು ನಿರಾಕರಿಸಿ ತುರ್ತು ಪರಿಸ್ಥಿತಿ ಘೋಷಿಸಿರುವುದು ಭಾರತಕ್ಕೂ ಚಿಂತೆಗೀಡು ಮಾಡಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ತಿಳಿಸಿದೆ.

**

ರಾಜಕೀಯ ನಾಯಕರನ್ನು ಬಿಡುಗಡೆಗೊಳಿಸಲು ಭಾರತ ರಾಜತಾಂತ್ರಿಕ ಅಧಿಕಾರಿಯನ್ನು ಕಳುಹಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ.

–ಮೊಹಮ್ಮದ್ ನಷೀದ್, ಮಾಜಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT