7
ಭೈರಗೊಂಡನಿಗೆ ಬಿ.ಎಲ್‌.ಡಿ.ಇ.ಯಲ್ಲಿ ಚಿಕಿತ್ಸೆ ಕೊಡಿಸಿದ್ದಕ್ಕೆ ಆಕ್ಷೇಪ; ಬಂಧನದ ಬಳಿಕ ಬಿಪಿ, ಶುಗರ್‌ ಹೆಚ್ಚಾಯ್ತಾ..?

ಸಂಚಲನ ಸೃಷ್ಟಿಸಿದ ಸಿಐಡಿ ತನಿಖೆ..!

Published:
Updated:

ವಿಜಯಪುರ:  ಭೀಮಾ ತೀರದ ರೌಡಿ ಗಂಗಾಧರ ಚಡಚಣನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ, ಮಂಗಳವಾರ ಸಿಐಡಿ ತಂಡ ತನಿಖೆ ತೀವ್ರಗೊಳಿಸಿದ್ದು ಮಿಂಚಿನ ಸಂಚಲನ ಮೂಡಿಸಿದೆ.

ಸಿಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಚರಣ್‌ರೆಡ್ಡಿ ಎರಡು ದಿನ ವಿಜಯಪುರದಲ್ಲಿ ಬೀಡು ಬಿಟ್ಟು, ತನಿಖೆಯ ನೇತೃತ್ವ ವಹಿಸುವ ಜತೆ, ತಮ್ಮ ಸಮಕ್ಷಮದಲ್ಲೇ ಪೊಲೀಸ್‌ ಇಲಾಖೆಯ ಹಿರಿಯ ಅಧಿಕಾರಿಗಳನ್ನು ವಿಚಾರಣೆಗೊಳಪಡಿಸಿದ್ದು ತೀವ್ರ ಕುತೂಹಲ ಕೆರಳಿಸಿದೆ.

ಧರ್ಮರಾಜ ಚಡಚಣನ ಎನ್‌ಕೌಂಟರ್‌ (2017, ಅ 30) ನಡೆದ ದಿನವೇ ಗಂಗಾಧರನನ್ನು ಹತ್ಯೆಗೈಯಲಾಗಿದೆ ಎಂದು ಆರೋಪಿಗಳು ಈಗಾಗಲೇ ತಪ್ಪೊಪ್ಪಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಚಡಚಣ ಠಾಣೆಯ ಪೊಲೀಸರು ಭಾಗಿಯಾಗಿ, ಬಂಧನಕ್ಕೀಡಾಗಿದ್ದಾರೆ.

‘ಇದೀಗ ಗಂಗಾಧರನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಡಚಣದ ನೆರೆಯ ಪೊಲೀಸ್‌ ಠಾಣೆ ಝಳಕಿಯ ಪಿಎಸ್‌ಐ ಆಗಿದ್ದ ಸುರೇಶ ಗಡ್ಡಿ, ಇಂಡಿ ಡಿವೈಎಸ್‌ಪಿ ರವೀಂದ್ರ ಶಿರೂರ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರಿ ಹಾಗೂ ಚಡಚಣ ವೃತ್ತದ ಈಗಿನ ಸಿಪಿಐ ಜಾಕೀರ್‌ಹುಸೇನ್‌ ಇನಾಂದಾರ ಅವರನ್ನು ವಿಚಾರಣೆಗೊಳಪಡಿಸಿ ಸಮಗ್ರ ಮಾಹಿತಿ ಕಲೆ ಹಾಕಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಸಿಐಡಿ ಈ ಪ್ರಕರಣದ ತನಿಖೆ ಆರಂಭಿಸಿದ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳ ವಿಚಾರಣೆ ನಡೆಸಿರುವುದು ಭೀಮಾ ತೀರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಮಿಂಚಿನ ಸಂಚಲನ ಮೂಡಿಸಿದೆ. ತನಿಖೆಯಲ್ಲಿ ಮತ್ಯಾವ ರಹಸ್ಯ ಹೊರ ಬಿದ್ದಿದೆ ಎಂಬ ಕುತೂಹಲ ವ್ಯಕ್ತವಾಗಿದೆ.

ಐವರು ಆರೋಪಿಗಳ ವಿಚಾರಣೆ; ನ್ಯಾಯಾಂಗ ಬಂಧನ

‘ನ್ಯಾಯಾಂಗ ಬಂಧನದಲ್ಲಿದ್ದ ಸಿದ್ಧಗೊಂಡಪ್ಪ ಮುಡವೆ, ಭೀಮು ಪೂಜಾರಿ, ಚಾಂದ್‌ ಹುಸೇನಿ ಚಡಚಣ ಅವರನ್ನು ಹೆಚ್ಚಿನ ತನಿಖೆಗಾಗಿ ಸಿಐಡಿ ವಶಕ್ಕೆ ಪಡೆಯಲಾಗಿತ್ತು. ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಭೈರಗೊಂಡ, ಭೀಮು ಬಿರಾದಾರನನ್ನು ಒಟ್ಟಿಗೆ ತನಿಖೆಗೊಳಪಡಿಸಲಾಗಿತ್ತು.

ಇದರ ಜತೆಗೆ ಹತ್ಯೆಗೀಡಾಗಿರುವ ಗಂಗಾಧರ ಚಡಚಣನ ತಾಯಿ ವಿಮಲಾಬಾಯಿ ಸೇರಿದಂತೆ ಪ್ರಮುಖ 7–8 ಸಾಕ್ಷಿದಾರರಿಂದಲೂ ಈ ಎರಡೂ ದಿನ ಮಾಹಿತಿ ಪಡೆಯಲಾಗಿದೆ’ ಎಂದು ಸಿಐಡಿ ಎಸ್ಪಿ ಎಚ್‌.ಡಿ.ಆನಂದಕುಮಾರ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಪ್ರಕರಣಕ್ಕೆ ಸಂಬಂಧಿಸಿದಂತೆ 13 ಜನರ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ಈಗಾಗಲೇ 10 ಜನರನ್ನು ಬಂಧಿಸಿದ್ದೇವೆ. ಉಳಿದ ಮೂವರನ್ನು ಬಂಧಿಸಲಾಗುವುದು. ಈಗಾಗಲೇ ಒಂದು ತಿಂಗಳು ಮುಗಿದಿದೆ. ಎರಡು ತಿಂಗಳೊಳಗಾಗಿ ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುತ್ತೇವೆ’ ಎಂದು ಚರಣ್‌ ರೆಡ್ಡಿ ಹೇಳಿದರು.

ಸಿಐಡಿ ಕಸ್ಟಡಿಯಲ್ಲಿರುವ ಐವರು ಆರೋಪಿಗಳನ್ನು ಮಂಗಳವಾರ ಸಹ ಚಡಚಣ, ಕೆರೂರಿಗೆ ಕರೆದೊಯ್ದಿದ್ದ ಅಧಿಕಾರಿಗಳ ತಂಡ ತೀವ್ರ ವಿಚಾರಣೆಗೊಳಪಡಿಸಿದೆ. ಕೊಲೆಗೆ ಸಂಬಂಧಿಸಿದಂತೆ ಸಾಕಷ್ಟು ಮಾಹಿತಿ ಕಲೆ ಹಾಕಿದೆ ಎನ್ನಲಾಗಿದೆ.

ಮಹಾದೇವ ಭೈರಗೊಂಡನ ಕಸ್ಟಡಿ ಅವಧಿ ಇದೇ 12ರವರೆಗಿದ್ದರೂ; ಸಿಐಡಿ ತಂಡ ಎರಡು ದಿನ ಮೊದಲೇ ಇಂಡಿ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಇದರ ಜತೆ ಉಳಿದ ಆರೋಪಿಗಳು ಇದ್ದರು. ಐವರು ಆರೋಪಿಗಳನ್ನು ನ್ಯಾಯಾಧೀಶರು ಇದೇ 24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ. ಭೈರಗೊಂಡ ಇದೀಗ ವಿಜಯಪುರದ ದರ್ಗಾ ಜೈಲಿನಲ್ಲಿದ್ದಾನೆ.

ಸಿಪಿಐ ಅಸೋಡೆ ಬಂಧಿಸಿ: ವಿಮಲಾಬಾಯಿ

‘ನನ್ನ ಮಕ್ಕಳು ಸತ್ತಿದ್ದಾರೆ. ಅವರು ಮತ್ತೆ ಬರಲ್ಲ. ಆದರೆ ನನಗೆ ನ್ಯಾಯ ಬೇಕಿದೆ. ಪ್ರಕರಣದಲ್ಲಿ ಆಗಿನ ಸಿಪಿಐ ಎಂ.ಬಿ.ಅಸೋಡೆ ಪಾತ್ರ ಪ್ರಮುಖವಾಗಿದೆ. ಮೊದಲು ಆತನನ್ನು ಬಂಧಿಸಿ ತನಿಖೆಗೊಳಪಡಿಸಬೇಕು’ ಎಂದು ಹತ್ಯೆಗೀಡಾಗಿರುವ ಗಂಗಾಧರ ಚಡಚಣನ ತಾಯಿ ವಿಮಲಾಬಾಯಿ ಮಂಗಳವಾರ ಆಗ್ರಹಿಸಿದರು.

‘ಅಸೋಡೆ ತಪ್ಪಿತಸ್ಥನಿದ್ದಾನೆ. ಅದಕ್ಕಾಗಿಯೇ ನಾಪತ್ತೆಯಾಗಿದ್ದಾನೆ. ಮಹಾದೇವ ಭೈರಗೊಂಡ ಈತನಿಗೆ, ಪಿಎಸ್‌ಐ ಗೋಪಾಲ ಹಳ್ಳೂರನಿಗೆ ಸಾಕಷ್ಟು ಭೂಮಿಯನ್ನು ಉಡುಗೊರೆ ನೀಡಿದ್ದಾನೆ. ಪ್ರತಿ ತಿಂಗಳು ₨ 20 ಲಕ್ಷ ಮಾಮೂಲಿ ನೀಡುತ್ತಿದ್ದ ಎನ್ನಲಾಗಿದೆ. ಈ ಇಬ್ಬರೂ ಪೊಲೀಸ್ ಅಧಿಕಾರಿಗಳ ಬೇನಾಮಿ ಆಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಇದೇ ಸಂದರ್ಭ ಒತ್ತಾಯಿಸಿದರು.

‘ಕೊಲೆ ಆರೋಪಿಗಳಿಗೆ ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದನ್ನು ಕೇಳಿದ್ದೆವು. ಆದರೆ ಇಲ್ಲಿ ಮಹಾದೇವ ಭೈರಗೊಂಡನಿಗೆ ಬಿಎಲ್‌ಡಿಇ ಸಂಸ್ಥೆಯ ಬಿ.ಎಂ.ಪಾಟೀಲ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವ ಮೂಲಕ ರಾಜಾತಿಥ್ಯ ನೀಡಲಾಗುತ್ತಿದೆ’ ಎಂದು ವಿಮಲಾಬಾಯಿ ಆಕ್ರೋಶ ವ್ಯಕ್ತಪಡಿಸಿದರು.

‘25 ದಿನ ತಲೆಮರೆಸಿಕೊಂಡಿದ್ದಾಗ ಮಹಾದೇವನಿಗೆ ಬಿಪಿ, ಶುಗರ್‌ ಹೆಚ್ಚಾಗಿರಲಿಲ್ಲವಾ ? ಬಂಧಿಸುತ್ತಿದ್ದಂತೆ ಎಲ್ಲವೂ ಏಕಾಏಕಿ ಹೆಚ್ಚಾದವಾ. ಭೈರಗೊಂಡನ ಬಳಿಯಿರುವ ಮೂಟೆ ಮೂಟೆ ರೊಕ್ಕ ಈ ರೀತಿ ಆಡಿಸಲಾರಂಭಿಸಿದೆ’ ಎಂದು ದೂರಿದರು.

ಎಲ್ಲರೂ ಸೇರಿಕೊಂಡೇ ನನ್ನ ಮಗ ಧರ್ಮರಾಜನ ಕೊಲೆ ಮಾಡಿದ್ದಾರೆ. ಎನ್‌ಕೌಂಟರ್‌ ಎಂಬ ಕತೆ ಕಟ್ಟಿದ್ದಾರೆ. ಈ ಕುರಿತ ಮರು ತನಿಖೆಗೆ ಆಗ್ರಹಿಸಿ ಎಲ್ಲರಿಗೂ ಮನವಿ ಮಾಡಿರುವೆ
– ವಿಮಲಾಬಾಯಿ ಚಡಚಣ, ಮೃತನ ತಾಯಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !