ಬುಧವಾರ, ಸೆಪ್ಟೆಂಬರ್ 22, 2021
25 °C
ಇಂಡಿ: 1910ರಲ್ಲೇ ವೃತ್ತ ಸ್ಥಾಪನೆಗೆ ಜಾಗ ನಿಗದಿ

ಇಂಡಿಯಲ್ಲಿ ಸಂತ ಸೇವಾಲಾಲರ ವೃತ್ತ

ಎ.ಸಿ.ಪಾಟೀಲ Updated:

ಅಕ್ಷರ ಗಾತ್ರ : | |

Prajavani

ಇಂಡಿ: ಪಟ್ಟಣದ ವಿಜಯಪುರ ರಸ್ತೆಯ ಬಳಿ ಸಂತ ಸೇವಾಲಾಲ ವೃತ್ತ ಇತ್ತೀಚೆಗೆ ಸುಣ್ಣ, ಬಣ್ಣಗಳಿಂದ ಅಲಂಕೃತಗೊಂಡು ಸಾರ್ವಜನಿಕರ ಗಮನ ಸೆಳೆಯುತ್ತಿದೆ.

ಈ ವೃತ್ತ ಇಂಡಿ–ವಿಜಯಪುರ ರಸ್ತೆ ಮಧ್ಯದಲ್ಲಿದ್ದರೂ ವಾಹನಗಳ ಸಂಚಾರಕ್ಕೆ ತೊಂದರೆ ಆಗದಂತೆ ನಿರ್ಮಿಸಲಾಗಿದೆ. 1910ರಲ್ಲಿ ಬಂಜಾರಾ ಸಮಾಜದ ಲಿಂಬಾಜಿ ರಾಠೋಡ ಮತ್ತು ತಂಡದವರು ಪಟ್ಟಣದ ಗೋರಿಪಟ್ಟಿ ತಾಂಡಾ ಪಕ್ಕದಲ್ಲಿರುವ ವಿಜಯಪುರ ರಸ್ತೆಯಲ್ಲಿ ಸಂತ ಸೇವಾಲಾಲರ ವೃತ್ತ ಸ್ಥಾಪಿಸಬೇಕು ಎಂದು ಸ್ಥಳ ಗುರುತಿಸಿದ್ದರು. ಅಲ್ಲಿ ಸಂತ ಸೇವಾಲಾಲರ ಮೂರ್ತಿಯನ್ನು ಇರಿಸಲಾಗಿತ್ತು.

2013ರಲ್ಲಿ ರಸ್ತೆ ವಿಸ್ತರಣೆ ವೇಳೆಯಲ್ಲಿ ಸೇವಾಲಾಲರ ವೃತ್ತಕ್ಕಾಗಿ ಗುರುತಿಸಿದ್ದ ಸ್ಥಳವನ್ನು ನೆಲಸಮ ಮಾಡಲಾಗಿತ್ತು. ಆಗ ಬಂಜಾರಾ ಸಮಾಜದ ಪದಾಧಿಕಾರಿಗಳಾದ ಲಿಂಬಾಜಿ ರಾಠೋಡ, ಕಾಶೀನಾಥ ಪವಾರ, ಮಹಾದೇವ ರಾಠೋಡ, ರಾಜು ರಾಠೋಡ, ಕೆ.ಡಿ.ರಾಠೋಡ, ವಿಜಯಕುಮಾರ ನಾಯಕ, ಗೋವಿಂದ ರಾಠೋಡ, ಧರ್ಮು ರಾಠೋಡ, ಗುಲಾಬ ಚವ್ಹಾಣ, ಉಮೇಶ ಚವ್ಹಾಣ, ಜಗದೀಶ ರಾಠೋಡ, ಗಂಗಾರಾಮ ಪವಾರ, ಜಯರಾಮ ರಾಠೋಡ, ರಮೇಶ ನಾಯಕ, ನಾಮದೇವ ರಾಠೋಡ, ವಿಶ್ವನಾಥ ಚವ್ಹಾಣ, ರಾಮಚಂದ್ರ ರಾಠೋಡ, ವಿಜಯಕುಮಾರ ರಾಠೋಡ, ಸಂಜು ಚವ್ಹಾಣ, ಭೀಮು ಪವಾರ, ದೇವೇಂದ್ರ ಕುಂಬಾರ ಸೇರಿದಂತೆ ಲಂಬಾಣಿ ಸಮುದಾಯದ ನೂರಾರು ಜನ ಮಹಿಳೆಯರು ವೃತ್ತ ನೆಲಸಮ ಮಾಡಿರುವುದನ್ನು ಖಂಡಿಸಿ, ದಿಢೀರ್‌ ಸತ್ಯಾಗ್ರಹ ಮಾಡಿದ್ದರು.

ಸುದ್ದಿ ತಿಳಿಯುತ್ತಿದ್ದಂತೆಯೇ ಅಂದಿನ ಶಾಸಕ ಡಾ.ಸಾರ್ವಭೌಮ ಬಗಲಿ ಅವರು ಸ್ಥಳಕ್ಕೆ ಭೇಟಿ ನೀಡಿ ಬಂಜಾರಾ ಸಮಾಜದ ಮುಖಂಡರ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ, ಮೊದಲಿದ್ದ ಸ್ಥಳದಲ್ಲಿಯೇ ಸಂತ ಸೇವಾಲಾಲರ ಪ್ರತಿಮೆ ಸ್ಥಾಪನೆಗೆ ಅಡಿಪಾಯ ಹಾಕಿ ಸತ್ಯಾಗ್ರಹಕ್ಕೆ ತೆರೆ ಎಳೆದಿದ್ದರು.

ಇತ್ತೀಚೆಗೆ ಶಾಸಕ ಯಶವಂತರಾಯಗೌಡ ಪಾಟೀಲ ಅವರು ಸಂತ ಸೇವಾಲಾಲ ವೃತ್ತ ಅಭಿವೃದ್ಧಿಗೆ ₹2 ಲಕ್ಷ ಮತ್ತು ಶಾಸಕ ದೇವಾನಂದ ಚವ್ಹಾಣ ₹1 ಲಕ್ಷ ನೀಡಿದ್ದಲ್ಲದೇ, ಜಿಲ್ಲಾ ಪಂಚಾಯಿತಿ ಸದಸ್ಯ ರಾಮು ರಾಠೋಡ, ವಿಜಯಕುಮಾರ ನಾಯಕ ಹೀಗೆ ಬಂಜಾರಾ ಸಮಾಜದ ವಿವಿಧ ಪ್ರಮುಖರು ವೃತ್ತಕ್ಕಾಗಿ ನೀಡಿದ ಅನುದಾನದಲ್ಲಿ ಸಂತ ಸೇವಾಲಾಲರ ವೃತ್ತ ತಲೆ ಎತ್ತಿದೆ.

ಸೇವಾಲಾಲರ ಪುತ್ಥಳಿಯ ಪಕ್ಕದಲ್ಲಿಯೇ ಇರುವ ಗೋರಿಪಟ್ಟಿ ತಾಂಡಾದಲ್ಲಿ ಸೇವಾಲಾಲರ ಮಂದಿರ ನಿರ್ಮಾಣವಾಗಿದ್ದು, ಪ್ರತೀ ವರ್ಷ ಸೇವಾಲಾಲರ ಜಯಂತಿಯಂದು ಜಾತ್ರೆ ಆಯೋಜಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಸೇವಾಲಾರ ಪುತ್ಥಳಿಗೆ ವಿಶೇಷ ಪೂಜೆ ನಡೆಯುತ್ತದೆ.

ಸಂತ ಸೇವಾಲಾಲರು ಬಂಜಾರಾ ಸಮಾಜದವರನ್ನು ಅಧ್ಯಾತ್ಮದ ಮೂಲಕ ಸನ್ಮಾರ್ಗಕ್ಕೆ ನಡೆಸಿ, ಅವರಲ್ಲಿ ಧೈರ್ಯ, ಸಾಹಸ, ಆತ್ಮಾಭಿಮಾನ ಮೂಡಿಸಿದ ಮಹಾ ಸಂತರ ವೃತ್ತ ಅನೇಕ ಚಿಂತನೆಗಳಿಗೆ ಮಾರ್ಗಸೂಚಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು