ಕಾರ್ಮಿಕ ಹಕ್ಕುಗಳ ದಮನ: ಸಿಐಟಿಯು ಕಳವಳ

ಶುಕ್ರವಾರ, ಜೂಲೈ 19, 2019
22 °C

ಕಾರ್ಮಿಕ ಹಕ್ಕುಗಳ ದಮನ: ಸಿಐಟಿಯು ಕಳವಳ

Published:
Updated:
Prajavani

ಶಿವಮೊಗ್ಗ: ಸಾರಿಗೆ ನಿಗಮಗಳು ಕಾರ್ಮಿಕರಿಗೆ ಕಾನೂನು ಬದ್ಧವಾಗಿ ನೀಡಬೇಕಾದ ಹಕ್ಕುಗಳನ್ನು ದಮನಿಸುತ್ತಿವೆ ಎಂದು ಸಾರಿಗೆ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಚ್.ಎಸ್. ಮಂಜುನಾಥ್ ದೂರಿದರು.

ಕರ್ನಾಟಕ ಸಂಘದ ಸಭಾಂಗಣದಲ್ಲಿ ಸಿಐಟಿಯು, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ನೌಕರರ ಸಂಘ ಆಯೋಜಿಸಿದ್ದ ಶಿವಮೊಗ್ಗ ವಿಭಾಗದ ನೌಕರರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಕಾರ್ಮಿಕ ಸಂಘಟನೆಗಳ ಚುನಾವಣೆ 1992ರ ಬಳಿಕ ನಡೆದಿಲ್ಲ. ಹಲವು ನೌಕರರು ಆಡಳಿತ ಶಾಹಿ ಕಿರಿಕುಳದಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ದುಸ್ಥಿತಿಗಳ ಕುರಿತು ಸರ್ಕಾರದ ಗಮನಕ್ಕೆ ತಂದರೂ ಅವರಿಗೆ ನೀಡಬೇಕಾದ ಕಾನೂನು ಬದ್ಧ ಸೌಲಭ್ಯ ನೀಡಿಲ್ಲ ಎಂದು ದೂರಿದರು.

ಜಾಗತೀಕರಣದ ಪರಿಣಾಮ ಕಡಿಮೆ ವೇತನ ಹೆಚ್ಚಿನ ದುಡಿಮೆ ನೀತಿ ಜಾರಿಯಲ್ಲಿದೆ. 1996ರ ನಂತರ ಸಾರಿಗೆ ನಿಗಮದ ಅಧಿಕಾರಿಗಳು, ನೌಕರರ ಒಕ್ಕೂಟದ ಪದಾಧಿಕಾರಿಗಳ ನಡುವೆ ದ್ವಿಪಕ್ಷೀಯ ಒಪ್ಪಂದಕ್ಕೆ ತಿಲಾಂಜಲಿ ನೀಡಲಾಗಿದೆ. ಕಾರ್ಮಿಕ ಹಕ್ಕುಗಳಿಂದ ನೌಕರರನ್ನು ವಂಚಿಸಲಾಗಿದೆ ಎಂದು ಆರೋಪಿಸಿದರು.

ನೌಕರರ ಸಂಘದ ಚುನಾವಣೆ ನಡೆಯಲು ವೇದಿಕೆ ನಿರ್ಮಾಣ ಮಾಡಬೇಕು. ಬಳಿಕ ಎಲ್ಲರೂ ಒಗ್ಗಟ್ಟಾಗಿ ಬೇಡಿಕೆ ಈಡೇರಿಸಲು ಒತ್ತಡ ಹೇರಬೇಕು ಎಂದು ಕೋರಿದರು.

ಸಿಐಟಿಯು ಮುಖಂಡ ಶಿವಶಂಕರ್ ಮಾತನಾಡಿ, ಹಿಂದಿನಿಂದಲೂ ಬಂಡವಾಳಶಾಹಿಗಳು, ಅಧಿಕಾರಿ ವರ್ಗ ಕಾರ್ಮಿಕರ ಶೋಷಣೆ ಮಾಡುತ್ತಾ ಬಂದಿದ್ದಾರೆ. ಕಾರ್ಮಿಕರು ಒಗ್ಗಟ್ಟಾಗಿ ನ್ಯಾಯಯುತ ಬೇಡಿಕೆಗಳಿಗೆ ಹೋರಾಟ ನಡೆಸುವವರೆಗೂ ಶೋಷಣೆ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.

ಸರ್ಕಾರ ಬಜೆಟ್‌ನಲ್ಲಿ ಸಾರಿಗೆ ನಿಗಮಗಳಿಗೆ ಸಾಕಷ್ಟು ಅನುದಾನ ನೀಡಬೇಕು. ಅನಧಿಕೃತ ಖಾಸಗಿ ವಾಹನಗಳಿಗೆ ಕಡಿವಾಣ ಹಾಕಿ, ಸಾರಿಗೆ ನಿಗಮಗಳ ಆದಾಯ ಹೆಚ್ಚಿಸಬೇಕು. ಹೆಚ್ಚುವರಿ ಅವಧಿ ಕಡಿತ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಬೇಕು. ಕ್ಯಾಂಟಿನ್, ವಿಶ್ರಾಂತಿ ಗೃಹಗಳ ಸೌಲಭ್ಯ, ಜೀವವಿಮೆ, ಇಎಸ್ಐ ಸೌಲಭ್ಯ ಸೌಲಭ್ಯ ಎಲ್ಲರಿಗೂ ನೀಡಬೇಕು. ಮಾನ್ಯತೆಗಾಗಿ ತಕ್ಷಣ ಕಾರ್ಮಿಕ ಸಂಘದ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಮಿತಿ ಮುಖಂಡರಾದ ಡಾ.ಪ್ರಕಾಶ್, ರಾಜು, ಚಿನ್ನಸ್ವಾಮಿ, ಹರೀಶ್ , ಪ್ರಭಾಕರ್, ಕರಿಬಸಪ್ಪ, ಎಸ್.ರವಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !