ನೀರು ಕೊಡಿ ನೀರು; ಪ್ರತಿಧ್ವನಿ

ಬುಧವಾರ, ಜೂನ್ 26, 2019
28 °C
ಜಲಮಂಡಳಿ ಅಧಿಕಾರಿಗಳಿಗೆ ಪಾಲಿಕೆ ಸದಸ್ಯರ ತರಾಟೆ

ನೀರು ಕೊಡಿ ನೀರು; ಪ್ರತಿಧ್ವನಿ

Published:
Updated:
Prajavani

ವಿಜಯಪುರ: ‘24X7 ನೀರು ಸರಬರಾಜು ಯೋಜನೆ ಎಷ್ಟು ವಾರ್ಡ್‌ಗಳಲ್ಲಿ ಪೂರ್ಣಗೊಂಡಿದೆ. ಕೆಲಸ ಸ್ಥಗಿತಗೊಂಡಿದ್ದು ಏಕೆ. ಗುತ್ತಿಗೆದಾರರಿಗೆ ಎಷ್ಟು ಹಣ ಪಾವತಿಸಲಾಗಿದೆ. ನಗರಕ್ಕೆ ಪೂರ್ಣ ಪ್ರಮಾಣದಲ್ಲಿ ಯಾವಾಗ ನೀರು ಕೊಡುತ್ತೀರಿ. ಈಗ 20–22 ದಿನಕ್ಕೊಮ್ಮೆ ನೀರು ಬರುತ್ತಿದೆ, ಹೀಗಾದರೆ ಜನರು ಬದುಕುವುದಾದರೂ ಹೇಗೆ?..

–ಇವು ಜಲಮಂಡಳಿ ಅಧಿಕಾರಿಗಳನ್ನು ಪಾಲಿಕೆ ಸದಸ್ಯರು ತರಾಟೆಗೆ ತೆಗೆದುಕೊಂಡ ಪರಿ.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಕುಡಿಯುವ ನೀರಿನ ಬಗ್ಗೆ ಕಾವೇರಿದ ಚರ್ಚೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಬಹುತೇಕ ಸದಸ್ಯರು ಜಲಮಂಡಳಿ ಅಧಿಕಾರಿಗಳಿಗೆ ಹಿಡಿಶಾಪ ಹಾಕಿದರು.

‘24X7 ಕಾಮಗಾರಿ ಕೈಗೆತ್ತಿಕೊಂಡಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಕಳೆದ ಸಭೆಯಲ್ಲೇ ಠರಾವು ಪಾಸ್ ಮಾಡಲಾಗಿತ್ತು. ಆದಾಗ್ಯೂ, ಇದುವರೆಗೆ ಕ್ರಮಕೈಗೊಂಡಿಲ್ಲ. ಹೀಗಾದರೆ ಹೇಗೆ’ ಎಂದು ಖಾರವಾಗಿ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, ‘₹2.75 ಕೋಟಿ ದಂಡ ವಿಧಿಸಿದ್ದೇವೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕರು, ಜೈನ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಜತೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ. ಅವರಿಗೆ ₹9.50 ಕೋಟಿ ಬಾಕಿ ಹಣವನ್ನು ನಾವು ಕೊಡಬೇಕಾಗಿದೆ. ಹೀಗಾಗಿ ವಿಳಂಬವಾಗಿದೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸಿ ನೀರು ಪೂರೈಕೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

‘ಪ್ರತಿಭಟನೆ ಮಾಡಿದರೆ ನೀರು ಬಿಡುತ್ತೀರಿ, ಯಾವಾಗ ಕೇಳಿದರೂ ವಾರ್ಡ್ ನಂ.22ರಲ್ಲಿ 24X7 ನೀರು ಪೂರೈಕೆ ಆಗುತ್ತಿದೆ ಎಂದು ಹೇಳುತ್ತೀರಿ, ಉಳಿದ ವಾರ್ಡ್‌ನವರು ಏನು ಮಾಡಬೇಕು. ಕಡೇ ಪಕ್ಷ 24X7 ನೀರು ಪೂರೈಕೆಯನ್ನು ಸದ್ಯಕ್ಕೆ ಕೈಬಿಟ್ಟು, ಎಲ್ಲಾ ವಾರ್ಡ್‌ಗಳಿಗೆ ವಾರದಲ್ಲಿ ಮೂರು ದಿನ, 2 ರಿಂದ 3 ಗಂಟೆ ನೀರು ಬಿಡಬೇಕು’ ಎಂದು ಒತ್ತಾಯಿಸಿದರು.

‘ಜಲಮಂಡಳಿ ಅಧಿಕಾರಿ ಚೌಗಲಾ ಎಂಬುವರು ಅಕ್ರಮದಲ್ಲಿ ತೊಡಗಿದ್ದಾರೆ. ಅವರ ಮೇಲೆ ₹43 ಲಕ್ಷ ಹಣ ದುರುಪಯೋಗ ಆರೋಪವಿದೆ. ಆದ್ದರಿಂದ ಅವರನ್ನು ವಜಾಗೊಳಿಸಬೇಕು’ ಎಂದು ಆಗ್ರಹಿಸಿದರು.

ವಿಧಾನ ಪರಿಷತ್ ಸದಸ್ಯ ಸುನಿಲಗೌಡ ಬಿ.ಪಾಟೀಲ ಮಾತನಾಡಿ, ‘ಎಲ್ಲರೂ ಪಕ್ಷ ಭೇದ ಮರೆತು ನಗರದ ಅಭಿವೃದ್ಧಿಗೆ ಕೆಲಸ ಮಾಡೋಣ. ಪಾಲಿಕೆಯಲ್ಲಿ ಮನೆ ನಿರ್ಮಾಣಕ್ಕೆ ಅನುಮತಿ ನೀಡಲು ಹಣ ಕೇಳಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ. ಅಂತಹವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು’ ಎಂದು ಆಯುಕ್ತರಿಗೆ ಸೂಚಿಸಿದರು.

ಮೇಯರ್ ಶ್ರೀದೇವಿ ಲೋಗಾಂವಿ, ಉಪ ಮೇಯರ್ ಗೋಪಾಲ ಘಟಕಾಂಬಳೆ, ಪಾಲಿಕೆ ಆಯುಕ್ತ ಔದ್ರಾಮ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಉಮೇಶ ವಂದಾಲ, ರಾಜಶೇಖರ ಮಗಿಮಠ, ಅಲ್ತಾಫ್ ಅಮೀರ್‌ಸಾಬ್ ಇಟಗಿ, ಅಬ್ದುಲ್ ರಜಾಕ್ ಅಬ್ದುಲ್ ಹಮೀದ್ ಇದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !