‘ಮಾರುಕಟ್ಟೆ ಮುಂಭಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ’

7
ಎಪಿಎಂಸಿ: ಸಭೆಯಲ್ಲಿ ರೈತ ಬಣಗಳ ನಡುವೆಯೇ ಕಿತ್ತಾಟ

‘ಮಾರುಕಟ್ಟೆ ಮುಂಭಾಗದಲ್ಲಿ ಪಾರ್ಕಿಂಗ್‌ ವ್ಯವಸ್ಥೆ’

Published:
Updated:
Deccan Herald

ರಾಮನಗರ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಮುಂಭಾಗದಲ್ಲಿಯೇ ವಾಹನ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲು ಬುಧವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು. ಇದೇ ವೇಳೆ ರೈತರ ಗುಂಪುಗಳ ನಡುವೆಯೇ ವಾಗ್ದಾದ ನಡೆದು ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿತ್ತು.

ಈಗಿರುವ ಸ್ಥಳದಲ್ಲಿ ಸೊಪ್ಪು ಮಾರಾಟ ಮಾಡುವುದನ್ನು ಮಾರುಕಟ್ಟೆಯ ಒಳಭಾಗದ ರೈತ ಅಂಗಳಕ್ಕೆ ಸ್ಥಳಾಂತರ ಮಾಡಬೇಕು. ಅಲ್ಲಿ ರೈತರಿಗೆ ಮತ್ತು ವ್ಯಾಪಾರಿಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ರೈತರು ಸಲಹೆ ನೀಡಿದರು.

‘ರೈತ ಸಂಘಟನೆಗಳು ರೈತರ ಸಮಸ್ಯೆಗಳಿಗೆ ಹೋರಾಟ ಮಾಡಿಕೊಂಡು ಬರುತ್ತಿವೆ. ಕೆಲವರು ಯಾವುದೇ ಸಂಘಟನೆಯಲ್ಲಿ ಇಲ್ಲದಿದ್ದರೂ ಹಸಿರು ಶಾಲು ಹಾಕಿಕೊಂಡು ರೈತರಿಗೆ ಮೋಸ ಮಾಡುವುದನ್ನೇ ಬಂಡವಾಳ ಮಾಡಿಕೊಂಡಿದ್ದಾರೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಉಪಾಧ್ಯಕ್ಷ ಎಂ. ರಾಮು ಆಕ್ರೋಶ ವ್ಯಕ್ತಪಡಿಸಿದರು.

‘ರೈತರು ಮಾರುಕಟ್ಟೆಗೆ ದೂರದೂರುಗಳಿಂದ ಸೊಪ್ಪು ತರುತ್ತಾರೆ. ಅವರು ಮಾರಾಟ ಮಾಡಲು ಸೂಕ್ತ ವ್ಯವಸ್ಥೆ ಮಾಡುವಂತೆ ಹೋರಾಟ ಮಾಡಿದರೆ ಅರ್ಥವಿರುತ್ತದೆ. ಆದರೆ ರೈತರ ಸೋಗಿನಲ್ಲಿ ದಲ್ಲಾಳಿಗಳು ಹೋರಾಟ ಮಾಡುವ ಮೂಲಕ ರೈತ ಮುಖಂಡರಿಗೆ ಕಳಂಕ ಹಚ್ಚುತ್ತಿರುವ ಡೋಂಗಿಗಳ ವಿರುದ್ಧ ಪೋಲಿಸರಿಗೆ ದೂರು ನೀಡಬೇಕು’ ಎಂದು ರೈತ ಸಂಘದ ಅಧ್ಯಕ್ಷ ತುಂಬೇನಹಳ್ಳಿ ಶಿವಕುಮಾರ್ ಒತ್ತಾಯಿಸಿದರು.

ಎಪಿಎಂಸಿ ಅಧ್ಯಕ್ಷ ಪುಟ್ಟರಾಮಯ್ಯ ಮಾತನಾಡಿ ‘ಎಪಿಎಂಸಿ ಆಡಳಿತ ಮಂಡಳಿ ಹೊಸದಾಗಿ ಅಧಿಕಾರಕ್ಕೆ ಬಂದ ನಂತರ ಮಾರುಕಟ್ಟೆಯಲ್ಲಿ ಬದಲಾವಣೆಗಳು ಆಗಿವೆ. ರೈತರು ಮತ್ತು ವರ್ತಕರ ನಡುವೆ ಉತ್ತಮ ಬಾಂಧವ್ಯವಿದೆ’ ಎಂದರು.
‘ಕೆಲವರು ರೈತ ಸಂಘಟನೆ ಹೆಸರು ಹೇಳಿಕೊಂಡು ತೊಂದರೆ ಕೊಡುತ್ತಿರುವುದು ಸರಿಯಲ್ಲ, ಆಡಳಿತ ಮಂಡಳಿಯ ಸದಸ್ಯರು ಕೂಡ ರೈತರ ಮಕ್ಕಳು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

‘ಮಾರುಕಟ್ಟೆಯ ಒಳ ಭಾಗದಲ್ಲಿ ಪಾರ್ಕಿಂಗ್ ನಿರ್ಮಿಸಿದರೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು. ಮಾರುಕಟ್ಟೆಯ ಮುಂಭಾಗದಲ್ಲಿ ಪಾರ್ಕಿಂಗ್ ನಿರ್ಮಾಣ ಮಾಡಿದರೆ, ವಾಹನವನ್ನು ಅಡ್ಡಾದಿಡ್ಡಿ ನಿಲ್ಲಿಸುವುದು ತಪ್ಪುತ್ತದೆ ಎಂದು ಆಡಳಿತ ಮಂಡಳಿಯ ಸಭೆಯಲ್ಲಿ ತೀರ್ಮಾನ ಮಾಡಲಾಗಿತ್ತು. ಅದರಂತೆ ಪಾರ್ಕಿಂಗ್ ನಿರ್ಮಿಸಲು ಮುಂದಾದಾಗ ರೈತ ಸಂಘದ ಹೆಸರಿನಲ್ಲಿ ಕೆಲವರು ಪ್ರತಿಭಟನೆ ನಡೆಸಿ ತೊಂದರೆ ಕೊಟ್ಟರು’ ಎಂದು ಆರೋಪಿಸಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಮಲ್ಲಯ್ಯ, ತಾಲ್ಲೂಕು ಘಟಕದ ಅಧ್ಯಕ್ಷ ಸಿ. ಕುಮಾರಸ್ವಾಮಿ, ಕೃಷ್ಣಪ್ಪ, ಎಪಿಎಂಸಿ ನಿರ್ದೇಶಕರಾದ ವಿ. ವೆಂಕಟರಂಗಯ್ಯ, ದೊರೆಸ್ವಾಮಿ, ಕುಮಾರ್, ಪ್ರಭಾರ ಕಾರ್ಯದರ್ಶಿ ಬಸವರಾಜು ಇದ್ದರು.

ಕೆಲವರು ಹಸಿರು ಶಾಲನ್ನು ದುರ್ಬಳಕೆ ಮಾಡಿಕೊಂಡು ಏಕ ವ್ಯಕ್ತಿಯೇ ಸಂಘಟನೆ ಎಂದು ಭ್ರಮಿಸಿ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು
- ಎಂ.ರಾಮು, ಉಪಾಧ್ಯಕ್ಷ, ರಾಜ್ಯ ರೈತ ಸಂಘ

ಒಳಗೆ–ಹೊರಗೂ ಜಗಳ
ಸಭೆಯಲ್ಲಿ ರೈತ ಸಂಘದ ವಿವಿಧ ಬಣದ ದ್ವಂದ್ವ ನಿಲುವುಗಳ ಕುರಿತು ಚರ್ಚೆ ನಡೆಯಿತು. ಈ ವೇಳೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಮಲ್ಲಯ್ಯ ಮಾತನಾಡಿ ‘ಇಲ್ಲಿ ತುಂಬೇನಹಳ್ಳಿ ಶಿವಕುಮಾರ್ ಬಣ, ಕೋಡಿಹಳ್ಳಿ ಬಣ, ಲಕ್ಷ್ಮಣ್ ಸ್ವಾಮಿ ಬಣದ ಮುಖಂಡರು ಇದ್ದಾರೆ. ಜಿಲ್ಲೆಯಲ್ಲಿ ಇಷ್ಟೊಂದು ಬಣಗಳು ಏಕೆ? ಉದ್ದೇಶ ಒಂದೇ ಆಗಿದ್ದರೂ ಭಿನ್ನಹಾದಿ ಏಕೆ? ಕೆಲ ವಸೂಲಿ ಮುಖಂಡರಿಂದ ಎಲ್ಲರಿಗೂ ಕೆಟ್ಟ ಹೆಸರು. ಈ ಬಗ್ಗೆ ಆತ್ಮಾವಲೋಕನ ಸಭೆ ನಡೆಯಬೇಕು. ಸಭೆಗೆ ನಾವು ಬರಲು ಸಿದ್ಧರಿದ್ದೇವೆ. ಎಲ್ಲ ಬಣದ ಮುಖಂಡರೂ ಬರಲಿ’ ಎಂದು ಹೇಳಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೆಲ ಮುಖಂಡರು ‘ಸಭೆ ಕರೆದಿರುವ ಉದ್ದೇಶದ ಬಗ್ಗೆ ಮಾತನಾಡಿ, ಬಣದ ವಿಷಯ ಏಕೆ?’ ಎಂದು ವಾಗ್ವಾದಕ್ಕೆ ಇಳಿದರು. ನಂತರ ಚರ್ಚೆ ಸಂಪೂರ್ಣ ಹಾದಿ ತಪ್ಪಿತು. ಪರಸ್ಪರ ಬೈದಾಡಿಕೊಂಡ ರೈತ ಸಂಘದ ವಿವಿಧ ಬಣದ ಸದಸ್ಯರು ಸಭೆಯಿಂದ ಎದ್ದು ಹೊರನಡೆದರು.

ಸಭಾಂಗಣದ ಹೊರಗೂ ರೈತ ಬಣಗಳ ನಡುವಿನ ಪರಸ್ಪರ ಆರೋಪ ಪ್ರತ್ಯಾರೋಪಗಳು ಮುಂದುವರೆಯಿತು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !