ಭಾನುವಾರ, ಅಕ್ಟೋಬರ್ 20, 2019
21 °C

ನೆರೆ ಪರಿಹಾರ: ಹೆಚ್ಚುವರಿ ಹಣ ಬಿಡುಗಡೆಗೆ ಸಿದ್ಧ -ಬಿ.ಎಸ್.ಯಡಿಯೂರಪ್ಪ ಭರವಸೆ

Published:
Updated:
Prajavani

ಆಲಮಟ್ಟಿ (ವಿಜಯಪುರ): ‘ರಾಜ್ಯದ ನೆರೆ ಸಂತ್ರಸ್ತರಿಗಾಗಿ ಕೇಂದ್ರ ಸರ್ಕಾರ ₹1,200 ಕೋಟಿ ಮುಂಗಡ ಪರಿಹಾರ ಬಿಡುಗಡೆ ಮಾಡಿದೆ. ಇನ್ನೂ ಹೆಚ್ಚಿನ ಪರಿಹಾರವನ್ನು ಕೇಳಲಾಗುವುದು. ಅಗತ್ಯ ಬಿದ್ದರೆ ರಾಜ್ಯ ಸರ್ಕಾರದಿಂದ ಹೆಚ್ಚುವರಿ ಹಣ ಬಿಡುಗಡೆ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಲ್ಲಿ ಭರವಸೆ ನೀಡಿದರು.

ಆಲಮಟ್ಟಿಯಲ್ಲಿ ಶನಿವಾರ ಕೃಷ್ಣಾ ನದಿಗೆ ಬಾಗಿನ ಅರ್ಪಿಸಿದ ಅವರು ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

‘ಪ್ರವಾಹ ಪರಿಹಾರ ಕಾಮಗಾರಿಗಳ ಕುರಿತು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿದ್ದೇನೆ. ಅವರ ಬಳಿ ಸಾಕಷ್ಟು ಹಣವಿದೆ. ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ ₹5 ಲಕ್ಷ ಪರಿಹಾರ ನೀಡುತ್ತಿರುವುದು ಇದೇ ಮೊದಲು. ನೆರೆ ಹಾನಿಯಿಂದ ₹34 ಸಾವಿರ ಕೋಟಿ ಹಾನಿಯಾಗಿರುವ ಬಗ್ಗೆ ಕೇಂದ್ರಕ್ಕೆ ವರದಿ ಸಲ್ಲಿಸಲಾಗಿತ್ತು. ನಾವು ಕಳುಹಿಸಿದ ವರದಿಯಲ್ಲಿ ವ್ಯತ್ಯಾಸವಾಗಿದೆ ಎಂದು ಕೇಂದ್ರ ಹೇಳಿದೆ. ಅದನ್ನು ಸರಿಪಡಿಸಿ ಹೆಚ್ಚಿನ ಪರಿಹಾರ ತರಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ... ಕೇಂದ್ರದಿಂದ ‘ಅರೆಕಾಸಿನ ಪ್ಯಾಕೇಜ್’: ಸಿದ್ದರಾಮಯ್ಯ ಟೀಕೆ

‘ಪ್ರಧಾನಿ ಭೇಟಿಯಾಗಲು ಈಗ ಅವರದ್ದೇ ಪಕ್ಷದ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಾಧ್ಯವಾಗುತ್ತಿಲ್ಲ ಏಕೆ’ ಎಂಬ ಎಚ್.ಡಿ.ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ‘ಪ್ರಧಾನಿ ನಮಗೆ ಭೇಟಿಗೆ ಅವಕಾಶ ಕೊಡುತ್ತಿಲ್ಲ ಎಂಬುದು ಊಹಾಪೋಹ. ಪ್ರಧಾನಿ ಭೇಟಿ ಮುಖ್ಯ ಅಲ್ಲ, ಮೊದಲು ಅಭಿವೃದ್ಧಿ ಕೆಲಸಗಳು ಆಗಬೇಕು. ಕುಮಾರಸ್ವಾಮಿ ಆಗಲಿ, ಸಿದ್ದರಾಮಯ್ಯ ಆಗಲಿ ಅವರ ಹೇಳಿಕೆಗಳಿಗೆ ಉತ್ತರ ಕೊಡಬೇಕಾದ ಅಗತ್ಯವಿಲ್ಲ’ ಎಂದರು.

₹20 ಸಾವಿರ ಕೋಟಿ ಮೀಸಲು: ‘ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ, ಪುನರ್ ನಿರ್ಮಾಣ ಹಾಗೂ ಬಾಧಿತ 20 ಗ್ರಾಮಗಳ ಸ್ಥಳಾಂತರಕ್ಕೆ ಮುಂದಿನ ಬಜೆಟ್‌ನಲ್ಲಿ ₹20 ಸಾವಿರ ಕೋಟಿ ಮೀಸಲಿಡಲಾಗುವುದು’ ಎಂದು ಭರವಸೆ ನೀಡಿದರು.

ಇದನ್ನೂ ಓದಿ... ಪ್ರವಾಹ | ಕೇಂದ್ರದಿಂದ ಮುಂಗಡ ಪರಿಹಾರ ಬಿಡುಗಡೆ, ರಾಜ್ಯಕ್ಕೆ ₹ 1,200 ಕೋಟಿ ನೆರವು

‘ಆಲಮಟ್ಟಿ ಜಲಾಶಯವನ್ನು 524.256 ಮೀ.ಗೆ ಎತ್ತರಿಸುವ ಸಂಬಂಧ ಮಹಾರಾಷ್ಟ್ರದ ಜೊತೆ ಚರ್ಚಿಸುವ ಅಗತ್ಯವಿದೆ. ಅಣೆಕಟ್ಟೆ ಎತ್ತರ ಹೆಚ್ಚಳ ಸಮಸ್ಯೆಯನ್ನು ಪರಿಹರಿಸುವಂತೆ ಪ್ರಧಾನಿಗೆ ಮನವಿ ಮಾಡಿದ್ದೇನೆ. ಕೃಷ್ಣಾ ಕೊಳ್ಳದ ನೀರು ಹಂಚಿಕೆಗೆ ಸಂಬಂಧಿಸಿದಂತೆ ರಾಜ್ಯದ ಪರ ನ್ಯಾಯಾಂಗ ಹೋರಾಟಕ್ಕೆ ಅಗತ್ಯ ನೆರವು ನೀಡಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ, ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ.ಪಾಟೀಲ, ಸಂಸದ ರಮೇಶ ಜಿಗಜಿಣಗಿ, ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಎ.ಎಸ್.ಪಾಟೀಲ ನಡಹಳ್ಳಿ ಇದ್ದರು.

ಇದನ್ನೂ ಓದಿ... ಮುನಿಸು ದೂರ: ಯಡಿಯೂರಪ್ಪರನ್ನು ಕೊಂಡಾಡಿದ ಕಟೀಲ್‌ 

Post Comments (+)