ಭಾನುವಾರ, ಆಗಸ್ಟ್ 25, 2019
20 °C

ಸಿ.ಎಂ ತವರು ಜಿಲ್ಲೆ ಶಿವಮೊಗ್ಗಕ್ಕೆ ಉದಾರ ನೆರವು!

Published:
Updated:

ಶಿವಮೊಗ್ಗ: ಅತಿವೃಷ್ಟಿಯಿಂದ ಹಾನಿಗೊಳಗಾದ ಜಿಲ್ಲೆಯ ಹಲವು ಪ್ರದೇಶಗಳನ್ನು ಮಂಗಳವಾರ ವೀಕ್ಷಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಜಿಲ್ಲೆಯ ಯೋಜನೆಗಳಿಗೆ ಮತ್ತಷ್ಟು ಅನುದಾನ ಘೋಷಿಸಿದರು.

ಸೊರಬ ತಾಲ್ಲೂಕಿನ ಮೂಗೂರು ಏತ ನೀರಾವರಿಗೆ ₹ 105 ಕೋಟಿ, ಮೂಡಿ ಏತ ನೀರಾವರಿಗೆ ₹ 275 ಕೋಟಿ ನೀಡಲಾಗುವುದು. ಶಿಕಾರಿಪುರ, ಸೊರಬ ತಾಲ್ಲೂಕಿನ ವಿವಿಧ ನೀರಾವರಿ ಯೋಜನೆಗಳಿಗೆ ಈಗಾಗಲೇ ₹ 1,300 ಕೋಟಿ ಬಿಡುಗಡೆ ಮಾಡಲಾಗಿದೆ. ಮುಂದಿನ 15 ದಿನಗಳಲ್ಲಿ ಕಾಮಗಾರಿ ಆರಂಭಿಸಲಾಗುವುದು. ಶಿವಮೊಗ್ಗದಲ್ಲಿ ವಿಮಾನನಿಲ್ದಾಣ ಕಾಮಗಾರಿ ಆರಂಭಕ್ಕೆ ₹50 ಕೋಟಿ ನೀಡಲಾಗುವುದು. 4 ತಿಂಗಳಲ್ಲಿ ಜಿಲ್ಲೆಯ ಚಿತ್ರಣವೇ ಬದಲಾಗುವುದು ಎಂದರು.

ಪ್ರವಾಹದಿಂದ ಹಾನಿಗೆ ಒಳಗಾದ 5 ಸಾವಿರ ಕುಟುಂಬಗಳಿಗೆ ತಲಾ ₹ 10 ಸಾವಿರ ಪರಿಹಾರ, ಭಾಗಶಃ ಬಿದ್ದ ಮನೆಗಳ ದುರಸ್ತಿಗೆ ₹ 1 ಲಕ್ಷ, ಸಂಪೂರ್ಣ ಬಿದ್ದ ಮನೆ ನಿರ್ಮಾಣಕ್ಕೆ ₹ 5 ಲಕ್ಷ ಪರಿಹಾರ ನೀಡಲಾಗುವುದು. ಮಂಗಳೂರು ಮಾದರಿಯಲ್ಲಿ ಮನೆಗಳನ್ನು ನಿರ್ಮಿಸಲಾಗುವುದು. ರಸ್ತೆ, ಸೇತುವೆಗಳ ನಿರ್ಮಾಣಕ್ಕೆ ತುರ್ತು ₹ 50 ಕೋಟಿಯನ್ನು ಪಾಲಿಕೆಗೆ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದಲ್ಲಿ ಪ್ರವಾಹದಿಂದ ಸಂತ್ರಸ್ತರಾದ ಸುಮಾರು 40 ಸಾವಿರ ಕುಟುಂಬಗಳ ಪುವರ್ವಸತಿಗೆ ಸರ್ಕಾರ ಬದ್ಧವಾಗಿದೆ. ಅಧಿಕಾರಿಗಳು ಅತಿವೃಷ್ಟಿ ಹಾನಿಯ ಅಂದಾಜು ಸಿದ್ಧಪಡಿಸಿದ ತಕ್ಷಣ ಪರಿಹಾರದ ವಿಶೇಷ ಪ್ಯಾಕೇಜ್ ಘೋಷಿಸಲಾಗುವುದು. ತೀರ್ಥಹಳ್ಳಿ ತಾಲ್ಲೂಕಿನ ಹೆಗಲತ್ತಿಯಲ್ಲಿ ಗುಡ್ಡ ಜರುಗಿದ ಪ್ರಕರಣದಲ್ಲಿ ಅರಣ್ಯ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಜಂಟಿ ಸರ್ವೆ ನಡೆಸಿದ ನಂತರ ಪರಿಹಾರ ನೀಡಲಾಗುವುದು ಎಂದರು.

ಮುಖ್ಯಮಂತ್ರಿ ಎದುರೇ ಕುಸಿದು ಬಿದ್ದ ರೈತ

ತೀರ್ಥಹಳ್ಳಿ ತಾಲ್ಲೂಕಿನ ಹೆಗಲತ್ತಿ ಗ್ರಾಮದ ಸಮೀಪ ಮಹಾದೇಶ್ವರ ಗುಡ್ಡ ಜರುಗಿ ತೋಟ, ಗದ್ದೆಗಳು ನಾಶವಾದ ಸ್ಥಳವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ವೀಕ್ಷಿಸುವ ಸಮಯದಲ್ಲಿ ಸಂತ್ರಸ್ತ ಮಂಜುನಾಥ ಪೂಜಾರಿ ಕುಸಿದುಬಿದ್ದರು. ಪ್ರಜ್ಞೆ ತಪ್ಪಿದ ಅವರಿಗೆ ಮುಖ್ಯಮಂತ್ರಿ ಜತೆ ಬಂದಿದ್ದ ವೈದ್ಯರು ತಕ್ಷಣ ಚಿಕಿತ್ಸೆ ನೀಡಿದರು.

‘70 ವರ್ಷಗಳ ಹಿಂದೆ ಇಲ್ಲಿಗೆ ಬಂದು ನೆಲೆಸಿದ್ದೇವೆ. ಗುಡ್ಡ ಜರುಗಿದ ಪರಿಣಾಮ ತೋಟ, ಗದ್ದೆಗಳು ನಾಶವಾಗಿವೆ. ಹಲವು ಕುಟುಂಬಗಳ ಬದುಕು ನಾಶವಾಗಿದೆ. ಮುಖ್ಯಮಂತ್ರಿ ತರಾತುರಿಯಲ್ಲಿ ಬಂದು ಹೋದರು. ಸಂತ್ರಸ್ತರ ಅಳಲು ಕೇಳಲೇ ಇಲ್ಲ’ ಎಂದು ಶಂಕರ ಪೂಜಾರಿ ನೋವು ತೋಡಿಕೊಂಡರು.

Post Comments (+)