ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರ ದುರ್ಬಳಕೆ: ಲೋಕಾಯುಕ್ತರಿಗೆ ದೂರು

Last Updated 28 ಮಾರ್ಚ್ 2018, 11:39 IST
ಅಕ್ಷರ ಗಾತ್ರ

ಯಳಂದೂರು: ಪಟ್ಟಣ ಪಂಚಾಯಿತಿಯಲ್ಲಿ ಹಿಂದೆ ಅಧ್ಯಕ್ಷರಾಗಿದ್ದ ಮೀನಾಕ್ಷಿ ಮಹದೇವಸ್ವಾಮಿ ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಬಡವರ ಖಾಲಿ ನಿವೇಶನವನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಲೋಕಾಯುಕ್ತ ಡಿವೈಎಸ್ಪಿ ಬಿ.ಜಿ. ಕುಮಾರ್ ಅವರಿಗೆ ನೀಲಮ್ಮ ಎಂಬುವವರು ದೂರು ನೀಡಿದ್ದಾರೆ.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಅವರು ಲೋಕಾಯುಕ್ತರಿಗೆ ದೂರು ಸಲ್ಲಿಸಿದರು. ‘ಪಟ್ಟಣ ಪಂಚಾಯಿತಿ ವತಿಯಿಂದ ಆಶ್ರಯ ಮನೆ ಯೋಜನೆಯಡಿ ಬಡವರಿಗೆ ಖಾಲಿ ನಿವೇಶನ ವಿತರಣೆ ಮಾಡಲಾಗಿತ್ತು. ಅದರಲ್ಲಿ ವಿಧವೆಯಾದ ನನಗೂ ಸಂಖ್ಯೆ 196ರ ನಿವೇಶನವನ್ನು ಮಂಜೂರು ಮಾಡಲಾಗಿತ್ತು. ಆದರೆ, ಹಿಂದೆ ಅಧ್ಯಕ್ಷೆಯಾಗಿದ್ದ ಮೀನಾಕ್ಷಿ ಅವರು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದಾರೆ. ನನ್ನ ಹೆಸರಿಗೆ ಸಂಬಂಧಿಸಿದ ಹಕ್ಕುಪತ್ರ ಹಾಗೂ ಖಾತೆ ದಾಖಲೆಗಳು ನನ್ನ ಬಳಿ ಇವೆ. ಈ ವರ್ಷ ಅಂಬೇಡ್ಕರ್ ನಿವಾಸ್ ವಸತಿ ಯೋಜನೆಯಡಿ ಮನೆ ನಿರ್ಮಿಸಲು ಹಣವೂ ಬಿಡುಗಡೆಯಾಗಿದೆ. ಈ ಬಗ್ಗೆ ಪಟ್ಟಣ ಪಂಚಾಯಿತಿಗೆ ನಿವೇಶನ ಗುರುತಿಸಿಕೊಡುವಂತೆ ಅರ್ಜಿ ಸಲ್ಲಿಸಿದ್ದೆ. ಇದಕ್ಕೆ ಮೀನಾಕ್ಷಿ ಅವರು ತಕರಾರು ಎತ್ತಿದ್ದರು. ಈ ಬಗ್ಗೆ ಪಂಚಾಯಿತಿಗೆ ದೂರು ಸಲ್ಲಿಸಿದ್ದರೂ ಕ್ರಮವಹಿಸಿಲ್ಲ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಮಾತನಾಡಿ, ‘ಈ ಬಗ್ಗೆ ಇಲಾಖೆಯ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಬೇಕು. ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಇಲ್ಲವಾದಲ್ಲಿಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಪಟ್ಟಣ ಪಂಚಾಯಿತಿ ಅಧಿಕಾರಿಗೆ ಎಚ್ಚರಿಕೆ ನೀಡಿದರು.

ಬಿಳಿಗಿರಿರಂಗನಬೆಟ್ಟದ ಮಾಜಿ ಧರ್ಮದರ್ಶಿ ಎನ್. ದೊರೆಸ್ವಾಮಿ, ಬೆಟ್ಟದ ದೊಡ್ಡ ತೇರಿಗೆ ₹ 99.95 ಲಕ್ಷ ಹಣ ಬಿಡುಗಡೆಯಾಗಿದೆ. ಚಾಮರಾಜನಗರದ ಚಾಮರಾಜೇಶ್ವರ ರಥಕ್ಕೂ ಹಣ ಬಿಡುಗಡೆಯಾಗಿದೆ. ಆದರೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ರಥನಿರ್ಮಾಣಕ್ಕೆ ಆಸ್ಥೆ ವಹಿಸುತ್ತಿಲ್ಲ. ಹಾಗಾಗಿ ಮುಂದಿನ ವರ್ಷವೂ ದೊಡ್ಡ ತೇರಿನ ಉತ್ಸವ ನಡೆಯುವುದು ಅನುಮಾನವಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಕಾಮಗಾರಿ ಆರಂಭಿಸುವಂತೆ ಸೂಚಿಸಬೇಕು’ ಎಂದು ಮನವಿ ಸಲ್ಲಿಸಿದರು.

ನಿವೃತ್ತ ತಹಶೀಲ್ದಾರ್ ನಿಂಗಯ್ಯ ಅವರು, ‘ಮದ್ದೂರಿನಲ್ಲಿರುವ ನಮ್ಮ ಜಮೀನಿನ ಖಾತೆ ಮಾಡಿಕೊಡುವಂತೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಲಾಗಿದೆ. ಆದರೂ ಇಲಾಖೆ ಅಧಿಕಾರಿಗಳು ಈ ಬಗ್ಗೆ ವಿಳಂಬ ಧೋರಣೆ ಮಾಡುತ್ತಿದ್ದಾರೆ’ ಎಂದು ದೂರಿದರು.

ವಿವಿಧ ದೂರುಗಳು ದಾಖಲಾದವು. ಇಲಾಖೆಯ ಮನೋರಂಜನ್, ಗೌತಮ್, ಕೃಷ್ಣೇಗೌಡ ಹಾಗೂ ಮುಖಂಡರಾದ ಪಿ.ಮಾದೇಶ್, ಅಪ್ಸರ್‌ಖಾನ್‌, ಕಪ್ಪಣ್ಣ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT