ನಗರಸಭೆ: ಹೊಸ ಅಧ್ಯಕ್ಷರ ಆಯ್ಕೆಗೆ ಕಸರತ್ತು,ಕಾಂಗ್ರೆಸ್‌ ಸದಸ್ಯರಿಗೆ ಪ್ರವಾಸ ಭಾಗ್ಯ

7
17ಕ್ಕೆ ಚುನಾವಣೆ ನಿಗದಿ

ನಗರಸಭೆ: ಹೊಸ ಅಧ್ಯಕ್ಷರ ಆಯ್ಕೆಗೆ ಕಸರತ್ತು,ಕಾಂಗ್ರೆಸ್‌ ಸದಸ್ಯರಿಗೆ ಪ್ರವಾಸ ಭಾಗ್ಯ

Published:
Updated:

ರಾಮನಗರ: ನಗರಸಭೆಗೆ ಹೊಸ ಪುರಪಿತೃವಿನ ಆಯ್ಕೆ ಚುನಾವಣೆಯು ಇದೇ 17ರಂದು ನಡೆಯಲಿದೆ. ಇದರ ಬೆನ್ನಲ್ಲೇ ಕಾಂಗ್ರೆಸ್ ಹಾಗೂ ಪಕ್ಷೇತರ ಸದಸ್ಯರು ಪ್ರವಾಸಕ್ಕೆ ತೆರಳಿದ್ದಾರೆ.

ನಗರಸಭೆ ಅಧ್ಯಕ್ಷ ಹುದ್ದೆಯ ಎರಡನೇ ಅವಧಿಯು ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿದೆ. ಪಿ. ರವಿಕುಮಾರ್ ಪದಚ್ಯುತಿಯಿಂದ ತೆರವಾದ ಈ ಹುದ್ದೆಗೆ ಕಾಂಗ್ರೆಸ್‌ನಿಂದ ಈಗಾಗಲೇ ಐದನೇ ವಾರ್ಡ್ ಸದಸ್ಯೆ ರತ್ನಮ್ಮ ಹೆಸರು ಒಮ್ಮತದಿಂದ ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದಾರೆ. ಜೆಡಿಎಸ್ ಪಾಳಯದಲ್ಲಿ ಆರಂಭದಲ್ಲಿ ಎ. ರವಿ ಅವರ ಹೆಸರು ಕೇಳಿಬಂದಿತ್ತು. ಇದೀಗ ಅವರ ಬದಲಾಗಿ ಮೂರನೇ ವಾರ್ಡಿನ ಸದಸ್ಯೆ ಸುಜಾತ ಹೆಸರು ಚಾಲ್ತಿಗೆ ಬಂದಿದೆ.

ಔಪಚಾರಿಕ ಸ್ಪರ್ಧೆ: ಅಧ್ಯಕ್ಷರ ಪದಚ್ಯುತಿಗೆ ಕಾಂಗ್ರೆಸ್ ಜೊತೆ ಕೈಜೋಡಿಸಿದ್ದ ಜೆಡಿಎಸ್‌ ಹೊಸ ಅಧ್ಯಕ್ಷರ ಆಯ್ಕೆಗೆ ಸ್ಪರ್ಧೆ ಒಡ್ಡಲು ತೀರ್ಮಾನಿಸಿದೆ. ಪಕ್ಷದ ಹಿತದೃಷ್ಟಿಯಿಂದ ಇದು ಅನಿವಾರ್ಯವೂ ಆಗಿದೆ.

ಕೇವಲ ಆರು ತಿಂಗಳ ಅಧಿಕಾರಾವಧಿ ಮಾತ್ರ ಬಾಕಿ ಉಳಿದಿರುವ ಕಾರಣ ಅಧ್ಯಕ್ಷ ಗಾದಿಯ ಮೇಲೆ ಜೆಡಿಎಸ್ ಹೆಚ್ಚು ಆಸಕ್ತಿ ಹೊಂದಿಲ್ಲ ಎಂಬ ಮಾತುಗಳು ಕೇಳಿ ಬಂದಿವೆ.

ಕೈ’ ಬಲ: ಒಟ್ಟು 31 ಸದಸ್ಯರನ್ನು ಹೊಂದಿರುವ ನಗರಸಭೆಯಲ್ಲಿ ಸದ್ಯ ಕಾಂಗ್ರೆಸ್‌ನ 14 ಸದಸ್ಯರು, ಬಿಜೆಪಿಯಿಂದ ಆಯ್ಕೆಯಾದ ಇಬ್ಬರು, ಇಬ್ಬರು ಪಕ್ಷೇತರರು ಇದ್ದಾರೆ. ಜೆಡಿಎಸ್‌ ಪರವಾಗಿ 12 ಸದಸ್ಯರಿದ್ದಾರೆ.

ಸಂಸದರಿಗೂ ಮತದಾನದ ಹಕ್ಕು ಇದ್ದು, ಒಟ್ಟು 32 ಮತಗಳಿವೆ. ಇದರ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಬಲ ತುಸು ಹೆಚ್ಚಾಗಿದೆ. ಅವಿಶ್ವಾಸ ಗೊತ್ತುವಳಿ ಮಂಡನೆ ಸಂದರ್ಭ ರವಿಕುಮಾರ್ ಪಕ್ಷದ ವಿಪ್‌ ಉಲ್ಲಂಘನೆ ಮಾಡಿದ ಆರೋಪ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಮತದಾನದ ಅವಕಾಶ ಸಿಗಲಿದೆಯೇ ಎಂಬ ಅನುಮಾನವಿದೆ.

ಐದನೇ ಅಧ್ಯಕ್ಷರು: ನಗರಸಭೆಯ ಪ್ರಸ್ತುತ ಸದಸ್ಯರಲ್ಲಿ ಈಗಾಗಲೇ ಒಟ್ಟು ನಾಲ್ಕು ಮಂದಿ ಅಧ್ಯಕ್ಷ ಹುದ್ದೆ ಏರಿ ಇಳಿದಿದ್ದಾರೆ. ಇದೀಗ ಐದನೇ ಅಧ್ಯಕ್ಷರ ಆಯ್ಕೆ ಆಗಬೇಕಿದೆ.

ಚುನಾವಣೆ ನಡೆದು ಹೊಸ ಸದಸ್ಯರು ಆಯ್ಕೆಯಾದ ಬಳಿಕ ಮೊದಲ 30 ತಿಂಗಳ ಅವಧಿಗೆ ತಲಾ 10 ತಿಂಗಳ ಕಾಲ ಅಧ್ಯಕ್ಷರಾಗಿ ಆರಿಫ್ ಖುರೇಷಿ, ಎ.ಬಿ. ಚೇತನ್‌ಕುಮಾರ್ ಹಾಗೂ ಎಚ್.ಎಸ್. ಲೋಹಿತ್‌ ಆಡಳಿತ ನಡೆಸಿದ್ದಾರೆ. ಕಡೆಯ 30 ತಿಂಗಳ ಅವಧಿಯಲ್ಲಿ ರವಿಕುಮಾರ್ 24 ತಿಂಗಳ ಆಡಳಿತ ಪೂರೈಸಿದ್ದಾರೆ. ಉಳಿದ ಕೆಲವೇ ತಿಂಗಳ ಅವಧಿಗೆ ಹೊಸ ಅಧ್ಯಕ್ಷರ ಆಯ್ಕೆ ಆಗಲಿದೆ.

ಅಧ್ಯಕ್ಷರ ಜೊತೆಜೊತೆಗೆ ಉಪಾಧ್ಯಕ್ಷರು, ಸ್ಥಾಯಿ ಸಮಿತಿ ಅಧ್ಯಕ್ಷರನ್ನೂ ಕಾಂಗ್ರೆಸ್ ವರ್ಷಕ್ಕೆ ಒಮ್ಮೆ ಬದಲಿಸುತ್ತಾ ಬಂದಿದೆ. ಹೀಗಾಗಿ ಐದು ವರ್ಷದಲ್ಲಿ ಕಾಂಗ್ರೆಸ್‌ನಿಂದ ಆಯ್ಕೆಯಾದ ಬಹುತೇಕ ಸದಸ್ಯರು ಒಂದಲ್ಲ ಒಂದು ಹುದ್ದೆ ಏರಿ ಅಧಿಕಾರ ಅನುಭವಿಸಿದ್ದಾರೆ.

ಪ್ರವಾಸ ಭಾಗ್ಯ: ಸದಸ್ಯರಲ್ಲಿ ಒಗ್ಗಟ್ಟು ಕಾಯ್ದುಕೊಳ್ಳಲು ಮುಂದಾಗಿರುವ ಕಾಂಗ್ರೆಸ್ ಮುಖಂಡರು ತಮ್ಮ ಪರ ಇರುವ ಎಲ್ಲ 18 ಸದಸ್ಯರನ್ನೂ ಶುಕ್ರವಾರ ಸಂಜೆಯೇ ಗೋವಾದತ್ತ ಕರೆದೊಯ್ದಿದ್ದಾರೆ. ಮಹಿಳಾ ಸದಸ್ಯೆಯರ ಜೊತೆಗೆ ಅವರ ಗಂಡಂದಿರಿಗೂ ಪ್ರವಾಸ ಭಾಗ್ಯ ಲಭಿಸಿದೆ. ಭಾನುವಾರ ತಡರಾತ್ರಿ ಅಥವಾ ಸೋಮವಾರ ಮುಂಜಾನೆ ಈ ತಂಡವು ರಾಮನಗರಕ್ಕೆ ವಾಪಸ್‌ ಆಗಲಿದೆ.

ತಾ.ಪಂ. ಅಧ್ಯಕ್ಷರ ಆಯ್ಕೆ: ಜೆಡಿಎಸ್‌ನಿಂದ ವಿಪ್‌ ಜಾರಿ?
ರಾಮನಗರ ತಾಲ್ಲೂಕು ಪಂಚಾಯಿತಿಯ ನೂತನ ಅಧ್ಯಕ್ಷರ ಆಯ್ಕೆಗೆ ಇದೇ 19ರಂದು ಚುನಾವಣೆಯು ನಿಗದಿಯಾಗಿದೆ.

ಜೆಡಿಎಸ್‌ ತನ್ನ ಸದಸ್ಯರಿಗೆ ವಿಪ್‌ ಜಾರಿ ಮಾಡುತ್ತಿದ್ದು, ಅಧ್ಯಕ್ಷರ ಆಯ್ಕೆ ಸಂಗತಿಯು ಪ್ರತಿಷ್ಠೆಯಾಗಿ ಪರಿಣಮಿಸಿದೆ. ಈ ಹಿಂದೆ ಆದ ಒಪ್ಪಂದದಂತೆ ಎರಡನೇ ಅವಧಿಯನ್ನು ತನಗೇ ಬಿಟ್ಟುಕೊಡಬೇಕು ಎನ್ನುವುದು ಕಾಂಗ್ರೆಸ್ ಆಗ್ರಹವಾಗಿದೆ.

ಒಟ್ಟು 14 ಸದಸ್ಯ ಬಲದ ತಾ.ಪಂ.ನಲ್ಲಿ ಜೆಡಿಎಸ್‌ನಿಂದ 8 ಹಾಗೂ ಕಾಂಗ್ರೆಸ್‌ನಿಂದ 6 ಸದಸ್ಯರು ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನಿಂದ ಬನ್ನಿಕುಪ್ಪೆ (ಬಿ) ಕ್ಷೇತ್ರದ ಸದಸ್ಯ ಗಾಣಕಲ್ ನಟರಾಜು ಹೆಸರು ಪ್ರಮುಖವಾಗಿ ಕೇಳಿಬಂದಿದೆ. ಸದ್ಯ ಜೆಡಿಎಸ್‌ನ ಒಂದಿಬ್ಬರು ಸದಸ್ಯರು ಕಾಂಗ್ರೆಸ್ ಪರವಾಗಿ ಗುರುತಿಸಿಕೊಂಡಿದ್ದು, ಅವರೂ ಬೆಂಬಲ ನೀಡುವ ಸಾಧ್ಯತೆ ಇದೆ. ಇದನ್ನು ತಪ್ಪಿಸುವ ಸಲುವಾಗಿ ಜೆಡಿಎಸ್‌ ವಿಪ್‌ ಜಾರಿ ಮಾಡಿದೆ ಎನ್ನಲಾಗಿದೆ.

ಜೆಡಿಎಸ್‌ನಿಂದ ಹುಣಸನಹಳ್ಳಿ ಕ್ಷೇತ್ರದ ಎಚ್.ಎನ್. ಲಕ್ಷ್ಮೀಕಾಂತ್, ಕೂಟಗಲ್ ಕ್ಷೇತ್ರದ ಎಸ್.ಪಿ. ಜಗದೀಶ್, ಚನ್ನಮಾನಹಳ್ಳಿ ಕ್ಷೇತ್ರದ ಭದ್ರಯ್ಯ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !