ಸಮ್ಮಿಶ್ರ ಸರ್ಕಾರ–ಯತ್ನಾಳಗೆ ಪ್ರತಿಷ್ಠೆಯ ಪಣ..!

7
ಬಿಜಾಪುರ ದ್ವಿಸದಸ್ಯ ವಿಧಾನ ಪರಿಷತ್‌ ಕ್ಷೇತ್ರ; ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಚುನಾವಣೆ

ಸಮ್ಮಿಶ್ರ ಸರ್ಕಾರ–ಯತ್ನಾಳಗೆ ಪ್ರತಿಷ್ಠೆಯ ಪಣ..!

Published:
Updated:

ವಿಜಯಪುರ:  ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಾಜೀನಾಮೆಯಿಂದ ತೆರವಾಗಿದ್ದ, ಬಿಜಾಪುರ ದ್ವಿಸದಸ್ಯ ವಿಧಾನ ಪರಿಷತ್‌ ಕ್ಷೇತ್ರದ ಒಂದು ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ.

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಕಾವಿನ ನಡುವೆಯೇ, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ ಸದಸ್ಯತ್ವಕ್ಕೆ ಚುನಾವಣೆ ಘೋಷಣೆಯಾಗಿರುವುದು, ರಾಜಕೀಯ ಪಕ್ಷಗಳಲ್ಲಿನ ಚಟುವಟಿಕೆ ಹೆಚ್ಚಿಸಿದೆ.

ವಿಜಯಪುರ–ಬಾಗಲಕೋಟೆ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ 2015ರ ಡಿಸೆಂಬರ್‌ನಲ್ಲಿ ನಡೆದಿದ್ದ ಬಿಜಾಪುರ ದ್ವಿಸದಸ್ಯ ವಿಧಾನ ಪರಿಷತ್‌ನ ಚುನಾವಣೆಯಲ್ಲಿ ಎಸ್‌.ಆರ್‌.ಪಾಟೀಲ, ಬಸನಗೌಡ ಪಾಟೀಲ ಯತ್ನಾಳ ಕ್ರಮವಾಗಿ ಕಾಂಗ್ರೆಸ್‌, ಪಕ್ಷೇತರ ಅಭ್ಯರ್ಥಿಯಾಗಿ ವಿಜಯಿಯಾಗಿದ್ದರು.

ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಮುನ್ನಾ, ಬಸನಗೌಡ ಪಾಟೀಲ 2018ರ ಏ.18ರಂದು ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಚುನಾವಣಾ ಆಯೋಗ ದಿನ ನಿಗದಿಪಡಿಸಿ ವೇಳಾಪಟ್ಟಿ ಪ್ರಕಟಿಸಿದೆ.

ಬಿಜೆಪಿಗೆ ಬಿಸಿತುಪ್ಪ ?

ಈ ಹಿಂದಿನ ಚುನಾವಣೆಯಲ್ಲೇ ಬಿಜೆಪಿ ಹಾಲಿ ಸದಸ್ಯ ಜಿ.ಎಸ್‌.ನ್ಯಾಮಗೌಡ ಅಖಾಡಕ್ಕಿಳಿಸಿ ಮುಖಭಂಗಕ್ಕೀಡಾಗಿತ್ತು. ಪಕ್ಷ ಬಿ ಫಾರ್ಮ್‌ ಕೊಡದಿದ್ದರಿಂದ ಬಂಡಾಯವಾಗಿ ಕಣಕ್ಕಿಳಿದಿದ್ದ ಬಸನಗೌಡ ಪಾಟೀಲ ಯತ್ನಾಳ ಪಕ್ಷೇತರರಾಗಿ ವಿಜಯಿಯಾಗಿದ್ದರು. ಇದೀಗ ಬಿಜೆಪಿ ಶಾಸಕರಾಗಿದ್ದು, ತಮ್ಮ ಸಾಮರ್ಥ್ಯ ಉಳಿಸಿಕೊಳ್ಳುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ತೆರವಾದ ಸ್ಥಾನಕ್ಕೆ ವಿಜಯಪುರ ಜಿಲ್ಲೆಯಿಂದ ಸಂಘ ಪರಿವಾರ ಮೂಲದ ಮುಖಂಡ ಸಿಂದಗಿಯ ಶಂಭು ಕಕ್ಕಳಮೇಲಿ, ಕಾಂಗ್ರೆಸ್‌ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದ ಮಹಾನಗರ ಪಾಲಿಕೆ ಸದಸ್ಯ ಗೂಳಪ್ಪ ಶಟಗಾರ, ಬಾಗಲಕೋಟೆ ಜಿಲ್ಲೆಯಿಂದ ಮಾಜಿ ಶಾಸಕ ಪಿ.ಎಚ್‌.ಪೂಜಾರ, ಕ್ಷೇತ್ರದ ಮಾಜಿ ಪ್ರತಿನಿಧಿ ಜಿ.ಎಸ್‌.ನ್ಯಾಮಗೌಡ, ಬಸವೇಶ್ವರ ಸಹಕಾರಿ ಬ್ಯಾಂಕ್‌ ಅಧ್ಯಕ್ಷ ಪ್ರಕಾಶ ತಪಶೆಟ್ಟಿ ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

ಶಂಭು ಕಕ್ಕಳಮೇಲಿ ಉಳಿದ ಆಕಾಂಕ್ಷಿಗಳಿಗಿಂತ ಒಂದು ಹೆಜ್ಜೆ ಮುಂದಿಟ್ಟಿದ್ದು, ಈಗಾಗಲೇ ಗ್ರಾ.ಪಂ. ಸದಸ್ಯರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾರಂಭಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

‘ಬಿಜೆಪಿ ವರಿಷ್ಠರ ಲೆಕ್ಕಾಚಾರದ ತಂತ್ರಗಾರಿಕೆಯೇ ಭಿನ್ನವಾಗಿದೆ. ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲರನ್ನು ಚುನಾವಣಾ ರಾಜಕಾರಣದಲ್ಲಿ ಕಟ್ಟಿ ಹಾಕಲಿಕ್ಕಾಗಿಯೇ; ಅವರ ಸಹೋದರ ವಿಜುಗೌಡ ಪಾಟೀಲರನ್ನು ಕಣಕ್ಕಿಳಿಸುವ ಚಿಂತನೆ ನಡೆಸಿದ್ದಾರೆ. ಈ ಕುರಿತಂತೆ ವಿಜುಗೌಡ ಮೇಲೆ ಒತ್ತಡವನ್ನು ಹಾಕಲು ಆರಂಭಿಸಿದ್ದಾರೆ’ ಎಂಬುದು ತಿಳಿದು ಬಂದಿದೆ.

ಕಾಂಗ್ರೆಸ್‌ಗೆ ಪ್ರತಿಷ್ಠೆ:

ವಿಧಾನ ಪರಿಷತ್‌ ಚುನಾವಣೆ ಕಾಂಗ್ರೆಸ್‌ಗೆ ಪ್ರತಿಷ್ಠೆಯ ಕಣವಾಗಿದೆ. ಬಾದಾಮಿ ವಿಧಾನಸಭಾ ಕ್ಷೇತ್ರವನ್ನು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಪ್ರತಿನಿಧಿಸುತ್ತಿದ್ದು, ಶತಾಯ–ಗತಾಯ ಕ್ಷೇತ್ರದಲ್ಲಿ ಗೆಲುವು ಸಾಧಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಆದರೆ ಕಾಂಗ್ರೆಸ್‌ ವಲಯದಲ್ಲಿ ಇನ್ನೂ ಯಾರನ್ನೂ ಅಖಾಡಕ್ಕಿಳಿಸಬೇಕು ಎಂಬ ಚರ್ಚೆಯೇ ಆರಂಭಗೊಂಡಿಲ್ಲ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಹುನಗುಂದ ವಿಧಾನಸಭಾ ಕ್ಷೇತ್ರದಲ್ಲಿ ಸೋತಿರುವ ವಿಜಯಾನಂದ ಕಾಶಪ್ಪನವರ, ಬಬಲೇಶ್ವರ ಶಾಸಕ ಎಂ.ಬಿ.ಪಾಟೀಲ ಸಹೋದರ ಸುನೀಲಗೌಡ ಪಾಟೀಲ ಹೆಸರು ಪ್ರಬಲವಾಗಿ ಕೇಳಿ ಬಂದಿವೆ. ಮಾಜಿ ಸಚಿವ ಸಿ.ಎಸ್‌.ನಾಡಗೌಡ ಸ್ಪರ್ಧೆಗೆ ನಿರಾಸಕ್ತಿ ಹೊಂದಿದ್ದಾರೆ ಎನ್ನಲಾಗಿದೆ. ಚುನಾವಣೆ ಘೋಷಣೆಯಾದ ಬೆನ್ನಿಗೆ ನಾನೂ ಆಕಾಂಕ್ಷಿ ಎನ್ನುವವರ ಸಂಖ್ಯೆಯೂ ಹೆಚ್ಚುತ್ತಿದೆ.

ಬಾಗಲಕೋಟೆ ಜಿಲ್ಲಾ ಜೆಡಿಎಸ್‌ ಘಟಕದ ಅಧ್ಯಕ್ಷ ಎಸ್.ಆರ್‌.ನವಲಿ ಹಿರೇಮಠ ಸ್ಪರ್ಧಾಕಾಂಕ್ಷಿಯಾಗಿದ್ದು, ಕಾಂಗ್ರೆಸ್–ಜೆಡಿಎಸ್‌ ದೋಸ್ತಿಯಾಗುವ ಸಾಧ್ಯತೆಯೇ ಹೆಚ್ಚಿದೆ ಎಂಬುದು ಗೊತ್ತಾಗಿದೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !