ಮಂಗಳವಾರ, ನವೆಂಬರ್ 24, 2020
21 °C
ಸ್ನೇಹಿತರನ್ನು ನೋಡಲು ಕಾತರ– ಕೋವಿಡ್ ಪರೀಕ್ಷೆ ಮಾಡಿಸುವುದೇ ಬೇಸರ !

ಕಾಲೇಜು ಆರಂಭ: ಖುಷಿ ಕಳೆದ ಕೊರೊನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಎಂಟು ತಿಂಗಳ ಬಳಿಕ ಕಾಲೇಜು ಮೆಟ್ಟಿಲು ಹತ್ತಲು ಬಯಸಿದ್ದ ವಿದ್ಯಾರ್ಥಿಗಳಿಗೆ ಕೋವಿಡ್‌ ನೆಗೆಟಿವ್ ವರದಿ ತರಬೇಕು ಎಂಬ ಷರತ್ತು ನಿರಾಸೆ ಮೂಡಿಸಿತು. ಕೆಲವರಿಗೆ ಸಕಾಲಕ್ಕೆ ವರದಿ ಸಿಗದ ಚಿಂತೆಯಾದರೆ, ಕೋವಿಡ್ ಪರೀಕ್ಷೆ ಮಾಡಿಸಿ, ಪಾಸಿಟಿವ್ ವರದಿ ಬಂದರೆ ಏನು ಮಾಡುವುದು ಎಂಬ ಆತಂಕ ಹಲವರಿಗೆ. ವರದಿ ಸಮೇತ ಕಾಲೇಜಿಗೆ ಬಂದವರ ಮುಖದಲ್ಲಿ ಹೆಚ್ಚು ಲವಲವಿಕೆ ಇತ್ತು.

ಶೇಷಾದ್ರಿ ರಸ್ತೆಯ ಮಹಾರಾಣಿ ಮಹಿಳಾ ಕಲಾ ಮತ್ತು ವಾಣಿಜ್ಯ ನಿರ್ವಹಣಾ ಕಾಲೇಜು, ಸೆಂಟ್ರಲ್ ಕಾಲೇಜು, ಶೇಷಾದ್ರಿಪುರ ಕಾಲೇಜು, ವಿವಿಪುರದ ಜೈನ್ ಕಾಲೇಜು, ರೆಸಿಡೆನ್ಸಿ ರಸ್ತೆೆಯಲ್ಲಿರುವ ಸೆಂಟ್ ಜೋಸೆಫ್‌ ಕಾಲೇಜು, ರಾಜಾಜಿನಗರದ ವಿವೇಕಾನಂದ ಕಾಲೇಜು ಸೇರಿದಂತೆ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಕಲರವ ಕಂಡು ಬಂತು. ನೆಚ್ಚಿನ ಉಪನ್ಯಾಸಕರನ್ನು ಮತ್ತು ಗೆಳೆಯ, ಗೆಳತಿಯರನ್ನು ಹತ್ತಿರದಿಂದ ನೋಡಿದ ಸಂತಸವಿತ್ತು.

ನಗರದ ಸರ್ಕಾರಿ ಕಾಲೇಜುಗಳಲ್ಲಿ ಶೇ 30ರಿಂದ ಶೇ 40ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರೆ, ಖಾಸಗಿ ಕಾಲೇಜುಗಳಲ್ಲಿ ಈ ಪ್ರಮಾಣ ಶೇ 15ರಿಂದ ಶೇ 20ರಷ್ಟು ಇತ್ತು.

‘ಹಲವು ತಿಂಗಳ ಬಳಿಕ ಕಾಲೇಜು ಆರಂಭವಾಗಿದೆ. ಸ್ನೇಹಿತೆಯರನ್ನು ನೋಡದೆ ಬಹಳ ದಿನವಾಗಿತ್ತು. ಆನ್‌ಲೈನ್‌ ತರಗತಿಯನ್ನು ಕೇಳುವಾಗ ತಾಂತ್ರಿಕ ಸಮಸ್ಯೆಗಳು ಜಾಸ್ತಿ ಇದ್ದವು. ಈಗ ಗೆಳತಿಯರೊಂದಿಗೆ ಕಾಲೇಜಿನ ತರಗತಿಯೊಳಗೆ ಕುಳಿತುಕೊಳ್ಳಲು ಖುಷಿಯಾಗುತ್ತಿದೆ’ ಎಂದು ಮಹಾರಾಣಿ ಕಾಲೇಜಿನ ವೇದಾವತಿ ಸಂತಸಪಟ್ಟರು.

ಪರೀಕ್ಷೆಗೆ ಭಯ: ‘ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ಇದ್ದರೂ, ಕುತೂಹಲದಿಂದ ಪ್ರಥಮ ವರ್ಷದ ವಿದ್ಯಾರ್ಥಿಗಳೂ ಕಾಲೇಜಿಗೆ ಬಂದರು. ಆದರೆ, ಕೋವಿಡ್‌ ಪರೀಕ್ಷೆ ಮಾಡಿಸಿ, ಪಾಸಿಟಿವ್ ಎಂದು  ವರದಿ ಬಂದರೆ ಕ್ವಾರಂಟೈನ್ ಮಾಡಿಬಿಡುತ್ತಾರೆ ಎಂಬ ಆತಂಕದಿಂದ ಹಲವರು ಪರೀಕ್ಷೆ ಮಾಡಿಸಿಕೊಂಡಿರಲಿಲ್ಲ. ಅಂತಹ ವಿದ್ಯಾರ್ಥಿಗಳಿಗೆ ಪ್ರವೇಶಕ್ಕೆ ಅವಕಾಶ ನೀಡಲಿಲ್ಲ’ ಎಂದು ಸರ್ಕಾರಿ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಡಾ. ಟಿ. ಶಶಿಕಲಾ ಹೇಳಿದರು.

‘ಹೊರಗಡೆ ಲ್ಯಾಬ್‌ಗಳಲ್ಲಿ, ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲು ವಿದ್ಯಾರ್ಥಿಗಳು ಭಯ ಪಡುತ್ತಾರೆ. ಪ್ರಾಥಮಿಕ ಆರೋಗ್ಯ ಕೇಂದ್ರದವರನ್ನು ಕಾಲೇಜಿಗೇ ಕರೆಸಿ, ಇಲ್ಲಿಯೇ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಿಸಲು ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಎದುರು ನೋಡಿದೆವು: ‘ಕಾಲೇಜು ಪುನರಾರಂಭಿಸಲು ಬೋಧಕರೆಲ್ಲ ಉತ್ಸುಕರಾಗಿದ್ದರು. ಹಬ್ಬ ಇದ್ದರೂ, ಎರಡು–ಮೂರು ದಿನಗಳಿಂದ ಉಪನ್ಯಾಸಕರು, ಸಿಬ್ಬಂದಿ ಬಂದು ಎಲ್ಲ ಕೆಲಸ ಮಾಡಿದ್ದರು. ಕಾಲೇಜನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗಿತ್ತು. ಆದರೂ, ಒಟ್ಟು 150ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ ನಾಲ್ಕು ಜನ ಮಾತ್ರ ಬಂದಿದ್ದರು’ ಎಂದು ಉಳ್ಳಾಲ ಆಕ್ಸ್‌ಫರ್ಡ್‌ ಕಾಲೇಜಿನ ಪ್ರಾಚಾರ್ಯ ಡಾ.ಬಿ.ಎಆರ್. ಸುಪ್ರೀತ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಹುತೇಕ  ಕಾಲೇಜುಗಳ ಪ್ರವೇಶದ್ವಾರದಲ್ಲಿಯೇ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿ, ಒಳಬಿಡಲಾಗುತ್ತಿತ್ತು. ಕೈಗಳಿಗೆ ಸ್ಯಾನಿಟೈಸರ್‌ ಹಾಕಲಾಗುತ್ತಿತ್ತು. ದೈಹಿಕ ಅಂತರ ಕಾಪಾಡಿಕೊಳ್ಳಲು ಅನುಕೂಲವಾಗುವಂತೆ ಬೆಂಚ್‌ಗಳನ್ನು ನಿಗದಿತ ಅಂತರದಲ್ಲಿ ಹಾಕಲಾಗಿತ್ತು. ಆವರಣದಲ್ಲಿ ನಿರ್ದಿಷ್ಟ ಅಂತರದಲ್ಲಿ ಬಾಕ್ಸ್‌ ರೂಪದಲ್ಲಿ ಗೆರೆಗಳನ್ನು ಎಳೆಯಲಾಗಿತ್ತು.

 

‘ವಿದ್ಯಾರ್ಥಿಗಳ ಸಂಖ್ಯೆ 50ಕ್ಕೆ ಇಳಿಸಲಿ’

‘ವಿದ್ಯಾರ್ಥಿಗಳು ಮತ್ತು ಬೋಧಕರ ಆರೋಗ್ಯದ ದೃಷ್ಟಿಯಿಂದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕಾಗಿದೆ. ವಿದ್ಯಾರ್ಥಿಗಳ ತರಗತಿವಾರು ಸಂಖ್ಯೆಯನ್ನು 100 ರಿಂದ 50 ಕ್ಕೆ ಇಳಿಸುವ ಆದೇಶವನ್ನು ಕಾಲೇಜು ಶಿಕ್ಷಣ ಇಲಾಖೆಯು ತಕ್ಷಣದಿಂದಲೇ ಹೊರಡಿಸಬೇಕು. ಇಲ್ಲದಿದ್ದರೆ, ತರಗತಿಯೊಳಗೆ  ಅಂತರ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ’ ಎಂದು ಸರ್ಕಾರಿ ಪದವಿ ಕಾಲೇಜುಗಳ ಅಧ್ಯಾಪಕರ ಸಂಘದ ಅಧ್ಯಕ್ಷ ಡಾ. ಟಿ.ಎಂ. ಮಂಜುನಾಥ್ ಹೇಳಿದರು.

‘ಆನ್‌ಲೈನ್‌ ತರಗತಿಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವಂತೆ ಸರ್ಕಾರಿ ಕಾಲೇಜುಗಳಲ್ಲಿ ಅಂತರ್ಜಾಲ ವ್ಯವಸ್ಥೆಯನ್ನು ಬಲಗೊಳಿಸಬೇಕು. ರಾಜ್ಯದ ಬಹುಪಾಲು ಕಾಲೇಜುಗಳಲ್ಲಿ ಅಂತರ್ಜಾಲ ಸಮಸ್ಯೆ ಇದೆ. ನಗರದ ಹೃದಯ ಭಾಗದಲ್ಲಿರುವ ಕಾಲೇಜುಗಳ ಕ್ಯಾಂಪಸ್‌ಗಳಲ್ಲಿಯೂ ನೆಟ್‌ವರ್ಕ್ ಸಿಗುತ್ತಿಲ್ಲ’ ಎಂದರು. 

‘ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಸರ್ಕಾರವು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವ್ಯವಸ್ಥೆಯನ್ನು ಒದಗಿಸಿರುವುದರಿಂದ ಅನುಕೂಲವಾಗಿದೆ’ ಎಂದೂ ಅವರು ಹೇಳಿದರು.

‘20ರಿಂದ ಕಾಲೇಜು ಆರಂಭಿಸಿ’

‘ಹಬ್ಬದ ಕಾರಣ ಸಾಲು ರಜೆ ಇತ್ತು. ಕೋವಿಡ್‌ ಪರೀಕ್ಷೆಗೆ ಒಳಗಾಗಲು ಸಾಧ್ಯವಾಗಿಲ್ಲ. ಕೆಲವರು ಗಂಟಲು ದ್ರವದ ಮಾದರಿ ನೀಡಿದ್ದರೂ, ಇನ್ನೂ ವರದಿ ಬಂದಿಲ್ಲ. ಮೂರು ದಿನ ತಡವಾಗಿ ಅಂದರೆ, ನ.20ರಿಂದ ಕಾಲೇಜು ಆರಂಭಿಸುವಂತೆ ಹಲವು ವಿದ್ಯಾರ್ಥಿಗಳು ಮನವಿ ಸಲ್ಲಿಸಿದ್ದಾರೆ’ ಎಂದು ಮಹಾರಾಣಿ ಲಕ್ಷ್ಮಿ ಅಮ್ಮಣ್ಣಿ ಕಾಲೇಜಿನ ಪ್ರಾಚಾರ್ಯರಾದ ಶಶಿಕಲಾ ಹೇಳಿದರು.

‘ವಿದ್ಯಾರ್ಥಿಗಳು ಸಂಚಾರಕ್ಕೆೆ ಸಾರ್ವಜನಿಕ ಸಾರಿಗೆ ಬಳಸುವುದರಿಂದ ಆತಂಕ ಉಂಟಾಗಿದೆ. ಪೋಷಕರು ಒಪ್ಪಿಗೆ ಪತ್ರ ಕೊಟ್ಟಿದ್ದರೂ, ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದೆ. ಮೊದಲ ದಿನ ಶೇ.25ರಷ್ಟು ವಿದ್ಯಾಾರ್ಥಿಗಳು ಮಾತ್ರ ಕಾಲೇಜಿಗೆ ಬರಲು ಒಪ್ಪಿಗೆ ಸೂಚಿಸಿದ್ದಾರೆ. ಉಳಿದವರು ಆನ್‌ಲೈನ್‌ ತರಗತಿಗೆ ಹಾಜರಾಗುವುದಾಗಿ ಹೇಳಿದ್ದಾರೆ’ ಎಂದರು. 

ವಿದ್ಯಾರ್ಥಿಗಳಲ್ಲಿ ಸಂತಸ

‘ಕೋವಿಡ್‌ ನಡುವೆಯೂ ಸರ್ಕಾರ ಕಾಲೇಜು ಪ್ರಾರಂಭಿಸುವ ಧೈರ್ಯ ತೆಗೆದುಕೊಂಡಿದೆ. ಕಾಲೇಜು ಪ್ರಾರಂಭವಾಗಿದ್ದು ಸಂತಸ ತಂದಿದೆ’ ಎಂದು ಹಲವು ಉಪನ್ಯಾಸಕರು ಸಂತಸ ವ್ಯಕ್ತಪಡಿಸಿದರು.

‘ಮೊದಲ ದಿನವಾಗಿದ್ದರಿಂದ ಹೆಚ್ಚು ವಿದ್ಯಾರ್ಥಿಗಳು ಬಂದಿಲ್ಲ. ದಿನಕಳೆದಂತೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಲಿದೆ’ ಎಂದು ಮಹಾರಾಣಿ ಮಹಿಳಾ ಕಲಾ, ವಾಣಿಜ್ಯ ಕಾಲೇ
ಜಿನ ಪ್ರಾಚಾರ್ಯರಾದ ಡಾ. ಸಯ್ಯದ್ ವಾಸೀಂ ಅಪ್ರೋಸ್ ಹೇಳಿದರೆ, ‘ಹಲವು ತಿಂಗಳ ಬಳಿಕ ಕಾಲೇಜು ಪ್ರಾರಂಭವಾಗಿರುವುದು ಸಂತಸ ತಂದಿದೆ’ ಎಂದು ಸೇಂಟ್‌ ಜೋಸೆಫ್‌ ಕಾಲೇಜಿನ ಪ್ರಾಚಾರ್ಯ ವಿಕ್ಟರ್ ಲೋಬೊ ಹೇಳಿದರು. 

‘ಬಹಳಷ್ಟು ವಿದ್ಯಾರ್ಥಿಗಳಿಗೆ ಕಾಲೇಜಿಗೆ ಬರಲು ಮನಸಿದೆ. ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಿರುವುದು ಹಾಗೂ ಪೋಷ
ಕರ ಅನುಮತಿ ಪಡೆದು ಬರಬೇಕಾಗಿರುವುದರಿಂದ ಹಾಜರಾತಿ ಸ್ವಲ್ಪ ಕಡಿಮೆ ಇದೆ’ ಉಪನ್ಯಾಸಕ ಅನುರಾಧಾ ಹೇಳಿದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು