ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳರಿಗೆ ಮೂಲ ಸೌಕರ್ಯ ಕಲ್ಪಿಸಲು ಬದ್ಧ: ಬಿ.ಎಸ್. ಯಡಿಯೂರಪ್ಪ

ತಿರುವಳ್ಳುವರ್ ಸಂಘದ ಸ್ನೇಹ ಮಿಲನ
Last Updated 7 ಏಪ್ರಿಲ್ 2019, 11:58 IST
ಅಕ್ಷರ ಗಾತ್ರ

ಭದ್ರಾವತಿ: ‘ಒಂದೂವರೆ ದಶಕಗಳ ಕಾಲ ಬಟ್ಟೆ ಹಾಕಿ ಮುಚ್ಚಿಟ್ಟಿದ್ದ ತಿರುವಳ್ಳುವರ್ ಪ್ರತಿಮೆಯನ್ನು ಯಾವುದೇ ಗೊಂದಲ ಮಾಡಿಕೊಳ್ಳದೆ ನಿಮ್ಮೆಲ್ಲರ ಸಹಕಾರದಿಂದ ನನ್ನ ಅಧಿಕಾರಾವಧಿಯಲ್ಲಿ ಉದ್ಘಾಟಿಸಿದ್ದು, ಸಂತಸ ತಂದಿದೆ’ ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.

ಇಲ್ಲಿನ ತಿರುವಳ್ಳುವರ್ ಸೇವಾ ಸಂಘದಿಂದ ಭಾನುವಾರ ಏರ್ಪಡಿಸಿದ್ದ ಸ್ನೇಹಮಿಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ರಾಜಕೀಯ ಕಾರಣಕ್ಕೆ ನನೆಗುದಿಯಲ್ಲಿದ್ದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮೂಲಕ ನಾವೆಲ್ಲರೂ ಒಂದೇ ತಾಯಿ ಮಕ್ಕಳು’ ಎಂಬುದನ್ನು ಸಾರಿ ತೋರಿಸಿದ್ದೇವೆ. ಎಲ್ಲಾ ರೀತಿಯ ಕಷ್ಟದ ಕೆಲಸ ಮಾಡುವಲ್ಲಿ ಹೆಸರು ಮಾಡಿರುವ ತಮಿಳರಿಗೆ ಅಗತ್ಯ ಇರುವ ಮೂಲ ಸೌಕರ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲು ಸಿದ್ಧ’ ಎಂದರು.

‘ರಾಜಕೀಯವಾಗಿ ಈ ಸಮಾಜಕ್ಕೆ ಸ್ಥಾನಮಾನ ಸಿಕ್ಕಿಲ್ಲ ಎಂಬುದು ತಿಳಿದಿದ್ದು, ಬಿಜೆಪಿ ಅಧಿಕಾರಕ್ಕೆ ಬಂದರೆ ತಮಿಳರಿಗೆ ರಾಜ್ಯದ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಕೊಡುವ ಪ್ರಯತ್ನ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

‘ರಾಹುಲ್ ಸುಳ್ಳುಗಾರ, ಅಧಿಕಾರ ಇದ್ದಾಗ ಯಾವುದೇ ಭರವಸೆ ಈಡೇರಿಸದ ಅವರು ಈಗ ಸುಳ್ಳು ಭರವಸೆ ನೀಡುವ ಮೂಲಕ ದೇಶದ ಜನರನ್ನು ಹಾದಿ ತಪ್ಪಿಸುವ ಕೆಲಸ ಮಾಡಿದ್ದಾರೆ’ ಎಂದು ದೂರಿದರು.

ಸಮಾಜದ ಮುಖಂಡರಾದ ಶ್ರೀನಿವಾಸ್, ಕಣ್ಣಪ್ಪ, ಸುರೇಶಕುಮಾರ್, ಅಮುದ, ನೀಲಕಂಠ, ಬಿಜೆಪಿ ಮುಖಂಡರಾದ ವಿಜಯೇಂದ್ರ, ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್‌, ಎಸ್. ರುದ್ರೇಗೌಡ್ರು, ವಿ. ಕದಿರೇಶ್, ಪ್ರವೀಣ ಪಟೇಲ್, ಕೆ. ಮಂಜುನಾಥ್, ಮಂಗೋಟೆ ರುದ್ರೇಶ್, ಜಿ. ಆನಂದಕುಮಾರ್, ದತ್ತಾತ್ರಿ ಹಾಜರಿದ್ದರು.

ಅಗಮುಡಿ ಮೊದಲಿಯಾರ್, ವೆಣ್ಣಿ ಗೌಂಡರ್, ತಮಿಳು ಸಂಘ ಸೇರಿ ವಿವಿಧ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾಂಗ್ರೆಸ್‌ ಮುಖಂಡರೇ ಎಂದ ಮುಖಂಡ

ತಮಿಳು ಸಮಾಜದ ಮುಖಂಡ ಕಣ್ಣಪ್ಪ ಅವರು ಭಾಷಣ ಆರಂಭದಲ್ಲಿ ವೇದಿಕೆ ಮೇಲೆ ಇರುವ ನಗರ, ಗ್ರಾಮಾಂತರ ಕಾಂಗ್ರೆಸ್ ಮುಖಂಡರೇ ಎಂದು ಹೇಳಿದ್ದು ವೇದಿಕೆಯಲ್ಲಿದ್ದ ಗಣ್ಯರನ್ನು ಕಕ್ಕಾಬಿಕ್ಕಿಯಾಗುವಂತೆ ಮಾಡಿತು.

ನಂತರ ಕಣ್ಣಪ್ಪ ಅದನ್ನು ಸರಿಪಡಿಸಿಕೊಂಡು ಮಾತು ಮುಂದುವರಿಸಿದಾಗ ಯಡಿಯೂರಪ್ಪ ನಗುತ್ತಾ ಕೈ ಅಲ್ಲಾಡಿಸಿ ನಡೆಯುತ್ತೆ ಎಂಬ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT