ಯಡಿಯೂರಪ್ಪ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

7

ಯಡಿಯೂರಪ್ಪ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಆಗ್ರಹ

Published:
Updated:
Prajavani

ಶಿವಮೊಗ್ಗ: ಸಂವಿಧಾನ ವಿರೋಧಿ ನಡೆಯ ಮೂಲಕ ಅಧಿಕಾರ ಹಿಡಿಯಲು ಯತ್ನಿಸುತ್ತಿರುವ ಬಿ.ಎಸ್. ಯಡಿಯೂರಪ್ಪ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆಯಲಿಲ್ಲ. ಅಗತ್ಯ ಬಹುಮತ ಇಲ್ಲದಿದ್ದರೂ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ನಂತರ ಬಹುಮತ ಯಾಚಿಸದೆ ವಿಧಾನಸೌಧದಿಂದ ಹೊರನಡೆದರು. ಸ್ಥಾನ ಕಳೆದುಕೊಂಡು ಹತಾಶರಾದ ಅವರು ಈಗ ಕಾಂಗ್ರೆಸ್‌, ಜೆಡಿಎಸ್ ಶಾಸಕರ ಖರೀದಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯ ಸಮ್ಮಿಶ್ರ ಸರ್ಕಾರ ಉರುಳಿಸುವ ಪ್ರಯತ್ನ ನಿರಂತರವಾಗಿ ಮಾಡುತ್ತಾ, ಜನರ ದಿಕ್ಕುತಪ್ಪಿಸುತ್ತಿದ್ದಾರೆ. ಅವರಿಗೆ ಅಧಿಕಾರವೇ ಮುಖ್ಯವಾಗಿದೆ. ರಾಜ್ಯದಲ್ಲಿ ಹಲವು ಸಮಸ್ಯೆಗಳಿದ್ದರೂ ವಿರೋಧ ಪಕ್ಷದ ನಾಯಕರಾಗಿ ಸರ್ಕಾರಕ್ಕೆ ಸಹಕಾರ ನೀಡದೆ ಬರಿ ಟೀಕಿಸುವುದರಲ್ಲೇ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.

ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದು 8 ತಿಂಗಳಾಗಿವೆ. ಕಾಂಗ್ರೆಸ್, ಜೆಡಿಎಸ್‌ ಮುಖಂಡರಲ್ಲಿ ಯಾವುದೇ ಗೊಂದಲಗಳಿಲ್ಲ. ಕೆಲವು ಶಾಸಕರನ್ನು ಕೂಡಿಟ್ಟುಕೊಂಡು ಅವರಿಗೆ ಹಣದ ಆಮಿಷ ಒಡ್ಡುತ್ತಿದ್ದಾರೆ. ರಾಜೀನಾಮೆ ನೀಡಲು ಪ್ರಚೋದಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಜೆಡಿಎಸ್‌ ಶಾಸಕ ನಾಗನಗೌಡ ಅವರ ಪುತ್ರ ಶರಣಗೌಡ ಅವರನ್ನು ಸಂಪರ್ಕಿಸಿ, ಆಮಿಷ ಒಡ್ಡಿರುವುದು ಜಗಜ್ಜಾಹೀರವಾಗಿದೆ. ‘ಮೋದಿ ಹಾಗೂ ಅಮಿತ್ ಶಾಗೆ ಹೇಳಿ ಎಲ್ಲಾ ವ್ಯವಸ್ಥೆ ಮಾಡಿದ್ದೇವೆ. ನಿನಗೆ ಸಚಿವ ಖಾತೆ ಕೊಡ್ತೀವಿ. ಎಷ್ಟು ಬೇಕಾದರೂ ದುಡ್ಡು ಮಾಡಿಕೊ’ ಎಂದು ಹೇಳುವ ಜತೆಗೆ, ಸಾಂವಿಧಾನಿಕ ಹುದ್ದೆಯಲ್ಲಿರುವ ವಿಧಾನ ಸಭಾಧ್ಯಕ್ಷರ ಹೆಸರಿಗೂ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ದೂರಿದರು.

ಯಡಿಯೂರಪ್ಪ ಹಾಗೂ ಅವರ ಬೆಂಬಲಿಗರ ಮೇಲೆ ರಾಜ್ಯಪಾಲರು ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಶಾಸಕ ಸ್ಥಾನ ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್‌ ಮುಖಂಡರಾದ ಪಂಡಿತ್‌ ವಿಶ್ವನಾಥ್ (ಕಾಶಿ), ನಾಗರಾಜ್, ವಿ.ಎ.ರಮೇಶ್‌ ಹೆಗ್ಡೆ, ಮಧುಸೂದನ್, ಚೇತನ್, ಬಾಲಾಜಿ ಎಸ್.ಪಿ.ದಿನೇಶ್, ಚಂದ್ರಶೇಖರ್ ಭೂಪಾಲ್, ವಿಜಯಲಕ್ಷ್ಮಿ ಪಾಟೀಲ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !