ಮಂಗಳವಾರ, ನವೆಂಬರ್ 19, 2019
26 °C
ಕಾಂಗ್ರೆಸ್‌ ಚೈತನ್ಯ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕೆ

ಬಿಜೆಪಿ ಪೂರ್ಣ ಬಹಮತ ರಾಜ್ಯದಲ್ಲಿ ಎಂದೂ ಪಡೆದಿಲ್ಲ

Published:
Updated:
Prajavani

ಶಿವಮೊಗ್ಗ: ರಾಜ್ಯದಲ್ಲಿ ಜನಾಶೀರ್ವಾದದ ಮೂಲಕ ಬಿಜೆಪಿ ಎಂದೂ ಅಧಿಕಾರ ಪಡೆದಿಲ್ಲ. 2008, 2018ರಲ್ಲೂ ಬಿಜೆಪಿ ಪೂರ್ಣ ಬಹುಮತ ಪಡೆದಿರಲಿಲ್ಲ. ಹಿಂಬಾಗಿಲ ರಾಜಕಾರಣದ ಮೂಲಕವೇ ಅಧಿಕಾರದ ಗುದ್ದುಗೆ ಏರಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದರು.

ಗಾಯಿತ್ರಿ ಮಾಂಗಲ್ಯ ಮಂದಿರದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕ ಮಂಗಳವಾರ ಆಯೋಜಿಸಿದ್ದ ಚೈತನ್ಯ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಬಿಜೆಪಿ ಪಕ್ಷೇತರ ಶಾಸಕರ ಸಹಕಾರ, ಆಪರೇಷನ್ ಕಮಲದ ಮೂಲಕ ಆಡಳಿತಕ್ಕೆ ಬಂದಿದೆ. ಜೆಡಿಎಸ್, ಕಾಂಗ್ರೆಸ್ ಶಾಸಕರಿಗೆ ಮಂತ್ರಿ ಸ್ಥಾನ, ಹಣದ ಆಮಿಷ ಒಡ್ಡಿ ಸೆಳೆಯುವ ಮೂಲಕ ದೋಸ್ತಿ ಸರ್ಕಾರ ಕೆಡವಿದರು. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಭೆಯಲ್ಲಿ ಮಾತನಾಡಿರುವ ಆಡಿಯೊ, ವಿಡಿಯೊ ಲೀಕ್‌ ಆಗಿವೆ. ಅಮಿತ್ ಶಾ ಅವರು ಕುತಂತ್ರ ಮಾಡಿ ಪಕ್ಷಾಂತರಕ್ಕೆ ಕುಮ್ಮಕ್ಕು ನೀಡಿದ್ದಾರೆ.  ಸಂವಿಧಾನ ದುರ್ಬಲಗೊಳಿಸಿದ್ದಾರೆ. ಪಕ್ಷ ದ್ರೋಹ ಮಾಡಿದವರಿಗೆ ತಕ್ಕ ‍ಪಾಠ ಕಲಿಸಬೇಕು ಎಂದರು. ಎಂದು ವಾಗ್ದಾಳಿ ನಡೆಸಿದರು. 

ಯಡಿಯೂರಪ್ಪ ಕೆಜೆಪಿ ಕಟ್ಟಿದಾಗ ಟಿಪ್ಪು ವೇಷ ಹಾಕಿಕೊಂಡು ಸನ್ಮಾನ ಮಾಡಿಸಿಕೊಂಡುದ್ದರು. ಟಿಪ್ಪು ದೇಶಾಭಿಮಾನಿ ಎಂದು ಹೊಗಳಿದ್ದರು. ಬಹುಶಃ ಅವರು ಅದನ್ನು ಮರೆತು ಹೋಗಿರಬೇಕು. ಈಗ ಟಿಪ್ಪು ದೇಶ ದ್ರೋಹಿ, ಮತಾಂಧ ಎಂದು ಹೇಳಿ ಟಿಪ್ಪು ಸುಲ್ತಾನ್‌ ಜಯಂತಿ ರದ್ದುಗೊಳಿಸಿರುವ ಯಡಿಯೂರಪ್ಪಗೆ ಎರಡು ನಾಲಿಗೆ ಇದೆ ಎಂದು ಟೀಕಿಸಿದರು. 

ಯಡಿಯೂರಪ್ಪ ನಾನು ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಹಲವು ಜನಪರ ಯೋಜನೆಗಳನ್ನು ದುರ್ಬಲಗೊಳಿಸಲು ಹೊರಟಿದ್ದಾರೆ. ಆ ಮೂಲಕ 100 ದಿನಗಳ ಆಡಳಿತದಲ್ಲಿ ಬರೀ ದ್ವೇಷದ ರಾಜಕಾರಣ ಮಾಡಿದ್ದಾರೆ. ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ಕೇವಲ ಅಧಿಕಾರಿಗಳ ವರ್ಗಾವಣೆ ಮಾಡುವುದರಲ್ಲೇ ನಿರತರಾಗಿದ್ದಾರೆ ಎಂದು ಕುಟುಕಿದರು. 

ಕಾಂಗ್ರೆಸ್‌ ಸರ್ಕಾರದ ಸಾಧನೆ ಹಿಂದಕ್ಕಿ, ಭಾವನಾತ್ಮಕ ನೆಲೆಗಟ್ಟಿನಲ್ಲಿ ಪ್ರಚಾರ ಮಾಡಿದ ಪರಿಣಾಮ ಜನರು ಬಿಜೆಪಿಗೆ ಮತ ನೀಡಿದ್ದರು. ಮತ ನೀಡಿದವರು ಇಂದು ಪುನರ್‌ ವಿಮರ್ಶೆ ಮಾಡಿಕೊಳ್ಳುತ್ತಿದ್ದಾರೆ. ಎಲ್ಲೆಡೆ ಜನರು ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು ಎಂದು ಬಯಸುತ್ತಿದ್ದಾರೆ ಎಂದರು. 

ದೇಶದಲ್ಲಿ ಹಸಿದವರ ಅಂಕಿ ಅಂಶದ ಮೇಲೆ ಸಮೀಕ್ಷೆ ನಡೆಲಾಗುತ್ತದೆ. ಅದರಲ್ಲಿ ಭಾರತ 102ನೇ ಸ್ಥಾನ ಪಡೆದಿದೆ. 2015ರಲ್ಲಿ ಭಾರತದ ಸ್ಥಾನ 93 ಇತ್ತು. ಈಗ ದೇಶದ ಆರ್ಥಿಕ ಸ್ಥಿತಿ ಅದೋಗತಿಗೆ ಹೋಗಿದೆ. ತಪ್ಪು ಆರ್ಥಿಕ ನೀತಿ, ಜಿಎಸ್‌ಟಿ ಹೊಡೆತಕ್ಕೆ ಕೈಗಾರಿಕೆಗಳು ಮುಚ್ಚುತ್ತಿವೆ. ವ್ಯವಹಾರ ಕುಂಠಿತವಾಗುತ್ತಿವೆ. ಇದು ಪ್ರಧಾನಿ ಮೋದಿ ಅವರ ಕೈಯಲ್ಲಿ ಭಾರತದ ಪರಿಸ್ಥಿತಿಯ ಚಿತ್ರಣ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಮಾತನಾಡಿ, ನೆರೆ ಸಂತ್ರಸ್ತರಿಗೆ ಪರಿಹಾರ ವಿತರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಪ್ರಧಾನಿ ನರೇಂದ್ರ ಮೋದಿ ಆಡಳಿತ ನೀತಿಗಳಿಂದ ದೇಶದ ಜನರು ತತ್ತರಿಸಿ ಹೋಗಿದ್ದಾರೆ. ಐದು ವರ್ಷಗಳಲ್ಲಿ ಯಾವುದೇ ಭರವಸೆಗಳನ್ನೂ ಈಡೇರಿಸಿಲ್ಲ. ದೇಶದ ದೊಡ್ಡ ಸಂಸ್ಥೆಗಳ ಖಾಸಗೀಕರಣ ಮಾಡಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಶಾಸಕ ಬಿ.ಕೆ.ಸಂಗಮೇಶ್ವರ್, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಎಸ್.ಆರ್.ಪಾಟೀಲ್, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕರಾದ ಎಚ್.ಎಂ. ಚಂದ್ರಶೇಖರಪ್ಪ, ಕೆ.ಬಿ.ಪ್ರಸನ್ನಕುಮಾರ್, ಎಐಸಿಸಿ ಸದಸ್ಯ ಮಂಜುನಾಥ ಭಂಡಾರಿ, ತೀ.ನ.ಶ್ರೀನಿವಾಸ್, ಎನ್‌.ರಮೇಶ್, ಇಸ್ಮಾಯಿಲ್ ಖಾನ್, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯ್‌ಕುಮಾರ್, ರಾಜು ತಲ್ಲೂರು, ಎಸ್.ಪಿ.ದಿನೇಶ್, ರವಿಕುಮಾರ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)