ಸ್ವಯಂಪ್ರೇರಿತ ಬಂದ್‌ಗೆ ಕಾಂಗ್ರೆಸ್ಸಿಗರ ಮನವಿ

7

ಸ್ವಯಂಪ್ರೇರಿತ ಬಂದ್‌ಗೆ ಕಾಂಗ್ರೆಸ್ಸಿಗರ ಮನವಿ

Published:
Updated:

ವಿಜಯಪುರ: ‘ಪೆಟ್ರೋಲ್, ಡೀಸೆಲ್‌ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗುತ್ತಿರುವುದನ್ನು ಖಂಡಿಸಿ ಇದೇ 10ರ ಸೋಮವಾರ ಕರೆ ನೀಡಿರುವ ಬಂದ್‌ಗೆ, ವಿಜಯಪುರಿಗರು ಸ್ವಯಂಪ್ರೇರಿತರಾಗಿ ಬೆಂಬಲ ನೀಡಬೇಕು’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರವಿಗೌಡ ಪಾಟೀಲ ಧೂಳಖೇಡ ಮನವಿ ಮಾಡಿದರು.

‘ಅವಶ್ಯಕ ವಸ್ತುಗಳು ಪ್ರಸ್ತುತ ಗಗನಚುಂಬಿಯಾಗಿವೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾತೈಲ ಬೆಲೆ ಇಳಿಕೆಯಾದರೂ ಸಹ ಪೆಟ್ರೋಲ್, ಡೀಸೆಲ್‌ ಬೆಲೆ ಇಳಿಸದೆ, ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಬೆಲೆ ಏರಿಕೆಯ ಬಿಸಿಯಿಂದಾಗಿ ಜನ ಸಾಮಾನ್ಯರು ಪರದಾಡುವಂತಾಗಿದೆ’ ಎಂದು ಶನಿವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಪೆಟ್ರೋಲ್, ಡೀಸೆಲ್‌ ಜೀವನಾವಶ್ಯಕ ವಸ್ತುಗಳು. ಇದನ್ನು ಆಧರಿಸಿ ಲಕ್ಷಾಂತರ ಆಟೊ ಚಾಲಕರು, ಟ್ರಕ್ ಚಾಲಕರು ಜೀವನ ನಿರ್ವಹಣೆ ಮಾಡುತ್ತಾರೆ, ಪೆಟ್ರೋಲ್ ಬೆಲೆ ಏರಿಕೆಯಾದರೆ ಸಾರಿಗೆ ವೆಚ್ಚ ಅಧಿಕವಾಗಿ ಈಗಾಗಲೇ ಗಗನಚುಂಬಿಯಾಗಿರುವ ತರಕಾರಿ, ಹಾಲು ಮೊದಲಾದ ಬೆಲೆಗಳು ಮತ್ತಷ್ಟು ದುಬಾರಿಯಾಗಿ ಶ್ರೀಸಾಮಾನ್ಯನಿಗೆ ಹೊಡೆತ ಬೀಳುತ್ತದೆ. ಈ ಜನವಿರೋಧಿ ನೀತಿ ವಿರೋಧಿಸಿ ಬಂದ್‌ಗೆ ಕರೆ ನೀಡಲಾಗಿದ್ದು, ಯಾವುದೇ ರೀತಿಯಾಗಿ ಬಲವಂತದಿಂದ ಬಂದ್ ಮಾಡುವುದಿಲ್ಲ’ ಎಂದು ಇದೇ ಸಂದರ್ಭ ಹೇಳಿದರು.

ಕೊತ್ತಂಬರಿ ಸೊಪ್ಪು ಖರೀದಿಯೂ ಕಷ್ಟ

‘ಧಾರಣೆ ಗಗನಮುಖಿಯಾಗಿರುವ ಕಾಲದಲ್ಲಿ ಕೊತ್ತಂಬರಿ ಸೊಪ್ಪು ಸಹ ಖರೀದಿಸಲು ಸಾಧ್ಯವಾಗುತ್ತಿಲ್ಲ’ ಎಂದು ಮಾಜಿ ಶಾಸಕ ವಿಠ್ಠಲ ಕಟಕದೊಂಡ ವ್ಯಂಗ್ಯವಾಡಿದರು.

‘ಕೊತ್ತಂಬರಿ ಸೊಪ್ಪಿನ ಕಂತೆ ಇದೀಗ ₹ 10ಕ್ಕೆ ಏರಿಕೆಯಾಗಿದೆ. ಸಾಮಾನ್ಯ ಜನರು ಕೊತ್ತಂಬರಿ ಸೊಪ್ಪು ಖರೀದಿಸಲು ಹಿಂದೆ–ಮುಂದೆ ನೋಡುವಂತಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರ ಸೃಷ್ಟಿಸಿದೆ’ ಎಂದು ಕಟಕದೊಂಡ ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಅಬ್ದುಲ್‌ ಹಮೀದ್ ಮುಶ್ರೀಫ್, ಜಿಲ್ಲಾ ವಕ್ತಾರ ವೈಜನಾಥ ಕರ್ಪೂರಮಠ, ವಿಡಿಎ ಮಾಜಿ ಅಧ್ಯಕ್ಷ ಆಜಾದ್ ಪಟೇಲ್, ಅಫ್ತಾಬ್‌ ಖಾದ್ರಿ ಇನಾಮದಾರ, ಮಂಜುಳಾ ಗಾಯಕವಾಡ, ಜಮೀರ ಬಕ್ಷಿ, ವಸಂತ ಹೊನಮೊಡೆ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !