ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈತ್ರಿಕೂಟದ ಅಭ್ಯರ್ಥಿ ಗೆಲುವಿಗೆ ಶ್ರಮ : ಎಸ್. ಗಂಗಾಧರ್‌

ಅನಿತಾ ಕುಮಾರಸ್ವಾಮಿ ಬೆಂಬಲಿಸಿ ಕಾಂಗ್ರೆಸ್ ಮುಖಂಡರಿಂದ ಪತ್ರಿಕಾಗೋಷ್ಠಿ
Last Updated 17 ಅಕ್ಟೋಬರ್ 2018, 12:49 IST
ಅಕ್ಷರ ಗಾತ್ರ

ರಾಮನಗರ: ಪಕ್ಷದ ವರಿಷ್ಠರ ಸೂಚನೆಯ ಮೇರೆಗೆ ಈ ಬಾರಿಯ ಉಪ ಚುನಾವಣೆಯಲ್ಲಿ ಮೈತ್ರಿ ಸರ್ಕಾರದ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರನ್ನು ಬೆಂಬಲಿಸುತ್ತಿದ್ದೇವೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಗಂಗಾಧರ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲಿ ರಾಮನಗರದಲ್ಲಿ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ. ಪಕ್ಷದ ಸೂಚನೆಯ ಹಿನ್ನೆಲೆಯಲ್ಲಿ ಅನಿತಾ ಅವರನ್ನು ಬೆಂಬಲಿಸಲಿದ್ದೇವೆ. ಇದನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಿದ್ದೇವೆ’ ಎಂದರು.

ಆಹ್ವಾನ ಇರಲಿಲ್ಲ: ‘ನಾಮಪತ್ರ ಸಲ್ಲಿಕೆ ವೇಳೆ ಜಿಲ್ಲಾಮಟ್ಟದ ಕಾಂಗ್ರೆಸ್ ಮುಖಂಡರನ್ನು ಆಹ್ವಾನಿಸಿರಲಿಲ್ಲ. ನಮ್ಮನ್ನು ಅವರ ಕರೆದಿದ್ದರೆ ಖಂಡಿತಾ ಹೋಗುತ್ತಿದ್ದೆವು’ ಎಂದು ಗಂಗಾಧರ್‌ ಸಮರ್ಥನೆ ನೀಡಿದರು.

ಸಂಸದರನ್ನು ಈ ಚುನಾವಣೆಯ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ. ನಾವೆಲ್ಲರೂ ಒಟ್ಟಾಗಿ ಪ್ರಚಾರ ಕೈಗೊಳ್ಳುತ್ತೇವೆ ಎಂದರು.

‘ಸಿ.ಎಂ.ಲಿಂಗಪ್ಪ ಈಗಲೂ ನಮ್ಮ ಜತೆಗೆ ಇದ್ದಾರೆ. ಅನಿವಾರ್ಯ ಕಾರಣಗಳಿಂದ ಅವರು ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿಲ್ಲ’ ಎಂಬ ಸ್ಪಷ್ಟನೆಯನ್ನು ನೀಡಿದರು.

ಕಳೆದ ಚುನಾವಣೆಯ ಪರಾಜಿತ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಮಾತನಾಡಿ, ‘ಉಪ ಚುನಾವಣೆಯಲ್ಲಿ ಹೊಂದಾಣಿಕೆಯ ತೀರ್ಮಾನವು ಪಕ್ಷದ ವರಿಷ್ಠರ ನಿರ್ಧಾರವಾಗಿದೆ. ಹೀಗಾಗಿ ಅದನ್ನು ಪಾಲಿಸುವುದು ಅನಿವಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಬೇರೆ ಮಾರ್ಗಗಳಲ್ಲಿ ಪಕ್ಷ ಬಲವರ್ಧನೆಗೆ ಶ್ರಮಿಸಲಾಗುವುದು. ಕಾರ್ಯಕರ್ತರೂ ಅನಿತಾ ಅವರನ್ನು ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ಗೌರವದಿಂದ ಕಾಣಿ: ‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿ ಇದ್ದರೂ ಕಾಂಗ್ರೆಸ್ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪ ಕಾರ್ಯಕರ್ತರದ್ದು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕಾಂಗ್ರೆಸ್ ಕಾರ್ಯಕರ್ತರಿಗೂ ಗೌರವ ನೀಡಬೇಕು, ಯಾವುದೇ ವಿಚಾರದಲ್ಲೂ ತಾರತಮ್ಯ ಮಾಡದೆ ಕಾರ್ಯ ನಿರ್ವಹಿಸಬೇಕು’ ಎಂದು ಮುಖಂಡರು ಒಕ್ಕೊರಲ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಯ್ಯದ್‌ ಜಿಯಾವುಲ್ಲ, ಮುಖಂಡರಾದ ಸಿಎನ್‍ಆರ್ ವೆಂಕಟೇಶ್, ಕೆ.ರಮೇಶ್, ನರಸಿಂಹ ಮೂರ್ತಿ ಇದ್ದರು.

**

ಮೈತ್ರಿಕೂಟದ ಅಭ್ಯರ್ಥಿಯನ್ನು ಬೆಂಬಲಿಸುವ ಪಕ್ಷದ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಇದನ್ನು ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಾಗುವುದು
ಅಧ್ಯಕ್ಷ, ಕಾಂಗ್ರೆಸ್ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT