ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಪಿಆರ್‌ ಕೈಬಿಡಲು ಬ್ಲಾಕ್‌ ಕಾಂಗ್ರೆಸ್‌ ಮನವಿ

ಶರಾವತಿ ಹಿನ್ನೀರು ಬೆಂಗಳೂರಿಗೆ ಒಯ್ಯುವುದಕ್ಕೆ ವಿರೋಧ
Last Updated 26 ಜೂನ್ 2019, 18:39 IST
ಅಕ್ಷರ ಗಾತ್ರ

ಸಾಗರ: ಶರಾವತಿ ನದಿಯ ಲಿಂಗನಮಕ್ಕಿ ಅಣೆಕಟ್ಟೆಯಿಂದ ಬೆಂಗಳೂರಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ತಯಾರಿಸಲು ನೀಡಿರುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಉಪ ಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್ ಅವರಿಗೆ ಬ್ಲಾಕ್ ಕಾಂಗ್ರೆಸ್‌ನಿಂದ ಬೆಂಗಳೂರಿನಲ್ಲಿ ಬುಧವಾರ ಮನವಿ ಸಲ್ಲಿಸಲಾಯಿತು.

ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಬಿ.ಆರ್. ಜಯಂತ್, ‘ಕೆಲವು ವರ್ಷಗಳಿಂದ ಲಿಂಗನಮಕ್ಕಿ ಅಣೆಕಟ್ಟೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿಲ್ಲ. ಡ್ಯಾಂನಲ್ಲಿ ಶೇ 40ರಷ್ಟು ಹೂಳು ತುಂಬಿಕೊಂಡಿದೆ. ಮಲೆನಾಡು ಭಾಗದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಳೆ ಪ್ರಮಾಣ ತೀರಾ ಕುಸಿದಿದೆ. ಗ್ರಾಮೀಣ ಭಾಗದ ಜನ ಕುಡಿಯುವ ನೀರಿಗೂ ಹಾಹಾಕಾರ ಅನುಭವಿಸುವ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಹೊತ್ತಿನಲ್ಲಿ ಲಿಂಗನಮಕ್ಕಿ ನೀರನ್ನು ಬೆಂಗಳೂರಿಗೆ ಒಯ್ಯುವ ಯೋಜನೆ ಕಾರ್ಯಸಾಧುವಲ್ಲ. ಈ ಯೋಜನೆ ಅವೈಜ್ಞಾನಿಕವಾಗಿದೆ’ ಎಂದು ಮನವರಿಕೆ ಮಾಡಿಕೊಟ್ಟರು.

ಪ್ರಸ್ತುತ ಲಿಂಗನಮಕ್ಕಿ ಅಣೆಕಟ್ಟಿನ ನೀರು ಡೆಡ್ ಸ್ಟೋರೇಜ್ ತಲುಪಿದೆ. ಡೆಡ್ ಸ್ಟೋರೇಜ್‌ ಜೊತೆಗೆ ಹೂಳು ತುಂಬಿಕೊಂಡು ನೀರು ಮಣ್ಣಿನ ಬಣ್ಣಕ್ಕೆ ತಿರುಗಿದೆ. ಪ್ರತಿ ಬೇಸಿಗೆ ಸಂದರ್ಭದಲ್ಲೂ ಈ ಸ್ಥಿತಿ ಮಾಮೂಲಿಯಾಗಿದೆ. ಇಂತಹ ನೀರನ್ನು ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತೇವೆ ಎನ್ನುವುದು ಹಾಸ್ಯಾಸ್ಪದ ಸಂಗತಿ ಎಂದು ತಿಳಿಹೇಳಿದರು.

‘ಲಿಂಗನಮಕ್ಕಿಯಿಂದ ಬೆಂಗಳೂರಿಗೆ ನೀರು ಒಯ್ಯಲು ಮಲೆನಾಡು ಭಾಗದ ಜನ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಸಹ ಇದನ್ನು ತೀವ್ರವಾಗಿ ವಿರೋಧಿಸುತ್ತಿದೆ. ಯೋಜನಾ ವರದಿ ತಯಾರಿಸಲು ನೀಡಿರುವ ಆದೇಶವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಮಲೆನಾಡು ಭಾಗದ ಜನರ, ಕಾಂಗ್ರೆಸ್‌ ಪಕ್ಷದ ವಿರೋಧವನ್ನು ಪರಿಗಣಿಸಿ ಸರ್ಕಾರ ಯೋಜನೆ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಮಾಜಿ ಶಾಸಕರಾದಚಂದ್ರಶೇಖರಪ್ಪ, ಸಾಗರ ನಗರ ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ತಸ್ರೀಫ್ ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಮೈಕೆಲ್ ಡಿಸೋಜ, ಉಮೇಶ್ ಹಾಜರಿದ್ದರು.

‘ಜಿಲ್ಲಾ ಕಾಂಗ್ರೆಸ್, ಜೆಡಿಎಸ್ ನಿಲುವೇನು?’

ಹೊಸನಗರ: ಬೆಂಗಳೂರಿಗೆ ಶರಾವತಿ ನೀರು ಸರಬರಾಜು ಮಾಡುವ ಯೋಜನೆಗೆ ಮಾಜಿ ಶಾಸಕ ಬಿ.ಸ್ವಾಮಿರಾವ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಇದೊಂದು ತೀರಾ ಅವೈಜ್ಞಾನಿಕ ಯೋಜನೆಯಾಗಿದೆ. ಸುಮಾರು 400 ಕಿ.ಮೀ. ದೂರದ ಬೆಂಗಳೂರಿಗೆ ಇಲ್ಲಿಂದ ನೀರು ಹರಿಸುವುದು ಕಾರ್ಯಸಾಧುವಲ್ಲ’ ಎಂದು
ಅಭಿಪ್ರಾಯಪಟ್ಟಿದ್ದಾರೆ.

‘ಶರಾವತಿ ನೀರನ್ನು ಬೆಂಗಳೂರಿಗೆ ಸರಬರಾಜು ಮಾಡುವ ಯೋಜನೆಗೆ ಈಗಾಗಲೇ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ಪಕ್ಷಾತೀತ ಹೋರಾಟ ಅಗತ್ಯವಿದೆ. ಆದರೆ ಜಿಲ್ಲೆಯ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಈ ವಿಷಯದಲ್ಲಿ ಮೌನಕ್ಕೆ ಶರಣಾಗಿದ್ದಾರೆ. ಅವರು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು’ ಎಂದು ಸವಾಲು ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT