ಕೇಂದ್ರ ಸರ್ಕಾರ ಬಡವರ ಶತ್ರು: ತೀ.ನಾ. ಶ್ರೀನಿವಾಸ್

7
ತೈಲ ಬೆಲೆ ಏರಿಕೆ ಖಂಡಿಸಿ ಸೆ. 10ರಂದು ಶಿವಮೊಗ್ಗ ಜಿಲ್ಲೆಯೂ ಬಂದ್

ಕೇಂದ್ರ ಸರ್ಕಾರ ಬಡವರ ಶತ್ರು: ತೀ.ನಾ. ಶ್ರೀನಿವಾಸ್

Published:
Updated:

ಶಿವಮೊಗ್ಗ: ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಡವರ ಪಾಲಿಗೆ ಶಾಪ. ಬೆಲೆ ಏರಿಕೆಯ ನೆಪದಲ್ಲಿ ಬಡ ಜನರ ಕತ್ತುಹಿಸುಕಲು ಹೊರಟಿದೆ ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತೀ.ನಾ. ಶ್ರೀನಿವಾಸ್ ದೂರಿದರು.

ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದು ಬಡ, ಮಧ್ಯಮ ವರ್ಗ, ಕಾರ್ಮಿಕರು, ದಲಿತರು, ರೈತರು ಸೇರಿದಂತೆ ಜನಸಾಮಾನ್ಯರ ಬದುಕಿಗೆ ಮಾರಕ. ಉದ್ಯಮಿಗಳ ತೆರಿಗೆ ಬಾಕಿ ಸುಮಾರು ₹ 4.5 ಲಕ್ಷ ಕೋಟಿ ಮನ್ನಾ ಮಾಡಿರುವ ಈ ಸರ್ಕಾರ ಬಡವರ ವಿಷಯದಲ್ಲಿ ಕಠಿಣವಾಗಿ ನಡೆದುಕೊಳ್ಳುತ್ತಿದೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಕಿಡಿ ಕಾರಿದರು.

ಕೇಂದ್ರ ಸರ್ಕಾರ ತೈಲ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಎಐಸಿಸಿ ದೇಶಾದ್ಯಂತ ಸೆ. 10ರಂದು ಭಾರತ್ ಬಂದ್‌ಗೆ ಕರೆ ನೀಡಿದೆ. ಜಿಲ್ಲೆಯಲ್ಲೂ ಅಂದು ಬಂದ್‌ ಯಶಸ್ವಿಗೊಳಿಸಲಾಗುವುದು. ಅಂದು ಬೆಳಿಗ್ಗೆ 6ರಿಂದ ಮಧ್ಯಾಹ್ನ 3ರವರೆಗೆ ಬಂದ್ ಆಚರಿಸಲಾಗುವುದು. ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರತಿಭಟನೆ ನಡೆಯುತ್ತದೆ. ಬೆಳಿಗ್ಗೆ 10ರಿಂದ ರಾಮಣ್ಣ ಶ್ರೇಷ್ಟಿ ಪಾರ್ಕ್‌ನಿಂದ ಶಾಂತಿಯುತ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್, ಅಡುಗೆ ಸಿಲಿಂಡರ್, ದಿನಸಿ ವಸ್ತುಗಳ ಬೆಲೆಗಳು ದುಬಾರಿಯಾಗಿವೆ. ಸುಮಾರು ₹ 11 ಲಕ್ಷ ಕೋಟಿ ತೆರಿಗೆ ಬಡ ಜನರ ಮೇಲೆ ವಿಧಿಸಲಾಗಿದೆ. ಬೆಲೆ ಏರಿಕೆಯಿಂದ ಮಧ್ಯಮ ವರ್ಗ ಸೇರಿದಂತೆ ಬಡವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಜೇಬಿಗೆ ಕತ್ತರಿ ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪೆಟ್ರೋಲ್, ಡೀಸೆಲ್ ಬೆಲೆಯಂತೂ ದಿನದಿನಕ್ಕೆ ಏರುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬ್ಯಾರಲ್ ಬೆಲೆ ಕಡಿಮೆಯಾಗಿದ್ದರೂ ಮೋದಿ ಸರ್ಕಾರ  ಏರಿಸುತ್ತಾ ಬಂದಿದೆ .2014ರಲ್ಲಿ ಒಂದು ಬ್ಯಾರಲ್‌ 107.09 ಡಾಲರ್ ಇತ್ತು. ಆಗ ಬೆಲೆ ₹65 ಇತ್ತು. ಆದರೆ ಇಂದು ಒಂದು ಬ್ಯಾರಲ್‌ ₹ 73 ಇದೆ. ಹಾಗೆ ನೋಡಿದರೆ ಪೆಟ್ರೋಲ್ ದರ ಇಳಿಯಬೇಕಿತ್ತು. ಆದರೆ ಶೇ 40ರಷ್ಟು ಹೆಚ್ಚಿಗೆ ಮಾಡಲಾಗಿದೆ ಎಂದು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ. ಪ್ರಸನ್ನಕುಮಾರ್, ಮುಖಂಡರಾದ ಎನ್. ರಮೇಶ್, ಇಸ್ಮಾಯಿಲ್ ಖಾನ್, ವಿಜಯಲಕ್ಷ್ಮಿ ಪಾಟೀಲ್, ಎಚ್.ಎಸ್. ಸುಂದರೇಶ್, ಪಿ.ವಿ. ವಿಶ್ವನಾಥ್ (ಕಾಶಿ) ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !