ಭಾನುವಾರ, ನವೆಂಬರ್ 17, 2019
29 °C
ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಎಸ್.ಸುಂದರೇಶ್ ಟೀಕೆ

ವಿಐಎಸ್‌ಎಲ್‌ ಉಳಿಸಲು ಅಪ್ಪ, ಮಕ್ಕಳು ವಿಫಲ

Published:
Updated:
Prajavani

ಶಿವಮೊಗ್ಗ: ಸಂಸತ್‌ನಲ್ಲಿ 10 ವರ್ಷಗಳಿಂದ ಜಿಲ್ಲೆ ಪ್ರತಿನಿಧಿಸುತ್ತಿರುವ ಬಿ.ಎಸ್‌.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ರಾಘವೇಂದ್ರ ಪ್ರತಿಷ್ಠಿತ ವಿಐಎಸ್‌ಎಲ್‌ ಉಳಿಸಿಕೊಳ್ಳಲು ವಿಫಲರಾಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್‌.ಎಸ್.ಸುಂದರೇಶ್ ಟೀಕಿಸಿದರು.

ಅಷ್ಟು ವರ್ಷಗಳೂ ಚುನಾವಣಾ ಸಮಯದಲ್ಲಿ ಸುಳ್ಳು ಭರವಸೆ ನೀಡಿ ಜನರನ್ನು ಯಾಮಾರಿಸಿದ್ದಾರೆ. ವಿಐಎಸ್ಎಲ್ ಉಳಿಸಲು ಕಾಂಗ್ರೆಸ್ ದೊಡ್ಡಮಟ್ಟದ ಹೋರಾಟಕ್ಕೆ ಸಿದ್ಧವಾಗಿದೆ. ಖಾಸಗೀಕರಣಕ್ಕೆ ಅವಕಾಶ ನೀಡುವುದಿಲ್ಲ. ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಶರಾವತಿ ನದಿ ನೀರು ಬೆಂಗಳೂರಿಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಬಾರದು ಎಂದು ಪಕ್ಷದ ಮುಖಂಡರು, ಪದಾಧಿಕಾರಿಗಳ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಯೋಜನೆ ಜಾರಿಯಾದರೆ ಶರಾವತಿ ಪಾತ್ರದ ನಿವಾಸಿಗಳಿಗೆ, ಜಿಲ್ಲೆಯ ಜನರಿಗೆ ಅನ್ಯಾಯವಾಗುತ್ತದೆ. ಜುಲೈ 10ರಂದು ಕರೆದಿರುವ ಬಂದ್‌ಗೆ ಜಿಲ್ಲಾ ಕಾಂಗ್ರೆಸ್‌ ಸಂಪೂರ್ಣ ಬೆಂಬಲ ನೀಡುತ್ತದೆ ಎಂದು ವಿವರ ನೀಡಿದರು.

ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ. 2014ರ ಚುನಾವಣೆಯಲ್ಲಿ ಸುಳ್ಳು ಭರವಸೆ ನೀಡಿ ಅಧಿಕಾರಕ್ಕೆ ಬಂದರೂ ಜನರು ವಿಶ್ವಾಸ ಇಟ್ಟಿದ್ದರು. ಈಗ ಮೋದಿ ಸರ್ಕಾರದ ನಿಜ ಬಣ್ಣ ಬಯಲಾಗಿದೆ. ಈಗಲಾದರೂ ಮತದಾರರು ಎಚ್ಚೆತ್ತುಕೊಳ್ಳಬೇಕು ಎಂದು ಕೋರಿದರು.

ಪಕ್ಷ ಸಂಘಟನೆಗೆ ಒತ್ತು ನೀಡಿದ್ದೇವೆ. ಜಿಲ್ಲೆಯಲ್ಲಿ ಯುವಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಸೇರುತ್ತಿದ್ದಾರೆ. ಪ್ರತಿ ಬ್ಲಾಕ್‌ಮಟ್ಟದಲ್ಲೂ ಪಕ್ಷ ಸಂಘಟಿಸಲಾಗುವುದು. ಹೊಸ ಸದಸ್ಯತ್ವ ನೋಂಂದಣಿಗೆ ಚಾಲನೆ ನೀಡಲಾಗುವುದು. ಪಕ್ಷಕ್ಕೆ ಮುಜುಗರ ತರುವ ಯಾರಿಗೂ ಪಕ್ಷದಲ್ಲಿ ಜಾಗವಿಲ್ಲ. ಗುಂಪುಗಾರಿಕೆಗೆ ಅವಕಾಶವಿಲ್ಲ. ಅಂಥವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ರಾಜೀನಾಮೆ ಅಂಗೀಕರಿಸಬಾರದು. ಅವರೇ ಅಧ್ಯಕ್ಷರಾಗಿ ಮುಂದುವರಿಯಬೇಕು. ರಾಜೀನಾಮೆ ವಾಪಸ್ ಪಡೆಯಬೇಕು ಎಂಬ ನಿರ್ಣಯ ಎಐಸಿಸಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕರಾದ ಕೆ.ಬಿ.ಪ್ರಸನ್ನಕುಮಾರ್, ಬೇಳೂರು ಗೋಪಾಲಕೃಷ್ಣ, ಮುಖಂಡರಾದ ಇಸ್ಮಾಯಿಲ್ ಖಾನ್, ಎಸ್.ಪಿ.ದಿನೇಶ್, ಎಚ್.ಎಂ.ಚಂದ್ರಶೇಖರಪ್ಪ, ರಾಮೇಗೌಡ, ವೇದ ವಿಜಯಕುಮಾರ್, ಎಸ್.ಪಿ.ಶೇಷಾದ್ರಿ , ಬಲ್ಕಿಷ್ ಬಾನು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)