ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಕುಮ್ಮಕ್ಕಿನಿಂದ ಅಪರಾಧಿಗೆ ರಕ್ಷಣೆ: ಆರೋಪ

ಕೋಣಂದೂರು ಗ್ರಾಮ ಪಂಚಾಯಿತಿ ಸದಸ್ಯ ಪೂರ್ಣೇಶ್ ವಿರುದ್ಧ ಕ್ರಮಕ್ಕೆ ಆಗ್ರಹ
Last Updated 11 ಡಿಸೆಂಬರ್ 2019, 1:56 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ಕೋಣಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾ ಪ್ರಫುಲ್ಲಚಂದ್ರ ಅವರ ಮೇಲೆ ದೌರ್ಜನ್ಯ ಎಸಗಿದ ಪಂಚಾಯಿತಿ ಸದಸ್ಯ ಎ.ಸಿ.ಪೂರ್ಣೇಶ್ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿ ಕಾಂಗ್ರೆಸ್‌ ಮುಖಂಡ ಕಿಮ್ಮನೆ ರತ್ನಾಕರ ಅವರ ನೇತೃತ್ವದಲ್ಲಿ ಮಂಗಳವಾರ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು.

ಪಟ್ಟಣದ ಕಾಂಗ್ರೆಸ್ ಕಾರ್ಯಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆ ಪಟ್ಟಣದ ವಿವಿಧ ಬೀದಿಗಳಲ್ಲಿ ಸಾಗಿ ತಾಲ್ಲೂಕು ಪಂಚಾಯಿತಿ ಕಚೇರಿಯ ಎದುರು ಸಮಾವೇಶಗೊಂಡಿತು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಿಮ್ಮನೆ ರತ್ನಾಕರ, ‘ಶಾಸಕ ಆರಗ ಜ್ಞಾನೇಂದ್ರ ಅವರ ಕುಮ್ಮಕ್ಕಿನಿಂದ ಅಪರಾಧಿಗಳಿಗೆ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಸಿಗುವಂತಾಗಿದೆ. ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗಿ ದೂರು ನೀಡಲು ಠಾಣೆಗೆ ಹೋದರೆ ದೂರು ಸ್ವೀಕರಿಸದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಕೋಣಂದೂರು ಗ್ರಾಮ ಪಂಚಾಯಿತಿ ಸದಸ್ಯ ಎ.ಸಿ.ಪೂರ್ಣೇಶ್ ಪಂಚಾಯಿತಿ ಅಧ್ಯಕ್ಷೆ ವಿಶಾಲಾ ಪ್ರಫುಲ್ಲಚಂದ್ರ ಅವರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಅವರ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳಿದ್ದರೂ ಪೊಲೀಸರು ರಕ್ಷಣೆ ನೀಡಲು ಮುಂದಾಗಿರುವುದು ಇಲ್ಲಿಯ ಪೊಲೀಸ್ ವ್ಯವಸ್ಥೆ ಏನಾಗಿದೆ ಎಂಬುದನ್ನು ತಿಳಿಸುತ್ತದೆ. ಇಂಥ ಪ್ರವೃತ್ತಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಮಹಿಳೆಯರ ದೂರನ್ನು ವಿಶೇಷ ಆದ್ಯತೆಯ ಮೇಲೆ ಸ್ವೀಕರಿಸಬೇಕು. ಠಾಣೆಯಲ್ಲಿ ಮಹಿಳೆಯರಿಗೆ ರಕ್ಷಣೆ ಸಿಗದಿದ್ದರೆ ಇನ್ನೆಲ್ಲಿಗೆ ಹೋಗಬೇಕು. ಅಧಿಕಾರಿಗಳು ಬಿಜೆಪಿ ಪರವಾಗಿ ನಿಂತಿದ್ದಾರೆ. ಭಯದ ವಾತಾವರಣ ಮೂಡುವಂತಾಗಿದೆ. ದೂರು ನೀಡಲು ಭಯಪಡಬೇಕಾದ ಸ್ಥಿತಿ ಇದೆ ಎಂದಾದರೆ ಅಲ್ಲಿ ಪೊಲೀಸರು ಇಲ್ಲ ಎಂದೇ ಅರ್ಥ. ಅಪರಾಧಿಗಳನ್ನು ಬೆಂಬಲಿಸುವ ಬದಲು ಅವರಿಗೇ ನಿಮ್ಮ ಪೊಲೀಸ್ ಸಮವಸ್ತ್ರ ನೀಡಿ’ ಎಂದು ಕಿಡಿಕಾರಿದರು.

‘ತಾಲ್ಲೂಕಿನಲ್ಲಿ ಅಕ್ರಮಗಳಿಗೆ ಶಾಸಕ ಆರಗ ಜ್ಞಾನೇಂದ್ರ ಬೆಂಬಲವಾಗಿ ನಿಂತಿದ್ದಾರೆ. ಸರ್ಕಾರಿ ಕಾಮಗಾರಿಗಳಿಗಾಗಿ ಮೀಸಲಿಟ್ಟ ಮರಳು ಕ್ವಾರಿಗಳು ಬಿಜೆಪಿಯವರಿಗೆ ಬಳಕೆಯಾಗುತ್ತಿದೆ. ಮರಳು ಅಕ್ರಮ ಸಾಗಣೆ ನಡೆಯುತ್ತಿದ್ದರೂ ಯಾವುದೇ ಕ್ರಮ ಜರುಗುತ್ತಿಲ್ಲ. ನಾನು ಶಾಸಕ, ಸಚಿವನಾಗಿದ್ದ ಅವಧಿಯಲ್ಲಿ ಪಕ್ಷ, ಪಂಗಡ ನೋಡದೇ ಜನರ ಕೆಲಸ ಮಾಡಿದ್ದೇನೆ, ದ್ವೇಷ ರಾಜಕಾರಣಕ್ಕೆ ಅವಕಾಶ ನೀಡಲಿಲ್ಲ. ಸಮಾಜವನ್ನು ಹಾಳು ಮಾಡುವವರಿಗೆ ಬೆಂಬಲವಾಗಿ ನಿಲ್ಲುವ ಮೂಲಕ ಕ್ಷೇತ್ರದ ಘನತೆಯನ್ನು ಹಾಳು ಮಾಡಲಾಗುತ್ತಿದೆ. ಪೊಲೀಸರು ಬಿಜೆಪಿಯ ಒತ್ತಡಕ್ಕೆ ಮಣಿದು ಇತರರಿಗೆ ತೊಂದರೆ ನೀಡಿದರೆ ಅದನ್ನು ಸಹಿಸಲು ಸಾಧ್ಯವಿಲ್ಲ’ ಎಂದು
ಹೇಳಿದರು.

‘ಗ್ರಾಮ ಪಂಚಾಯಿತಿ ಆಡಳಿತದಲ್ಲಿ ನೇರ ಹಸ್ತಕ್ಷೇಪ ಮಾಡುತ್ತ, ಅಧಿಕಾರಿಗಳಿಗೆ, ಸದಸ್ಯರಿಗೆ ಜೀವ ಬೆದರಿಕೆ ಹಾಕುವ ಪೂರ್ಣೇಶ್ ಅವರ ಸದಸ್ಯತ್ವವನ್ನು ರದ್ದುಪಡಿಸಬೇಕು’ ಎಂದು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಶಾಲಾ ಮಾತನಾಡಿ, ‘ಪೂರ್ಣೇಶ್ ಅವರ ದುಂಡಾವರ್ತನೆಗೆ ಕಡಿವಾಣ ಹಾಕಬೇಕು. ಮಹಿಳೆಯರಿಗೆ ರಕ್ಷಣೆ ಸಿಗುತ್ತಿಲ್ಲ. ಪೊಲೀಸರು ಅಪರಾಧಿಗಳ ಪರ ನಿಂತಿದ್ದಾರೆ. ಅಧ್ಯಕ್ಷೆಯಾಗಿ ಪಂಚಾಯಿತಿ ಆಸ್ತಿ ರಕ್ಷಣೆ ಮಾಡಲು ಸಾಧ್ಯವಾಗದ ಸ್ಥಿತಿ ಇದೆ’ ಎಂದು ದೂರಿದರು.

ಪ್ರತಿಭಟನಾ ಸಭೆಯಲ್ಲಿ ಕೋಣಂದೂರು ಗ್ರಾಮ ಪಂಚಾಯಿತಿ ಸದಸ್ಯ ಕಂಪದಗದ್ದೆ ಸುರೇಶ್, ತ್ರಿಯಂಬಕಪುರ ಪಂಚಾಯಿತಿ ಮಾಜಿ ಸದಸ್ಯ ಹುಲ್ಲತ್ತಿ ದಿನೇಶ್, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಕುಮಾರಿ, ಜಿಲ್ಲಾ ಪಂಚಾಯಿತಿ ಸದಸ್ಯೆಯರಾದ ಶ್ವೇತಾ ಬಂಡಿ, ಭಾರತಿ ಬಾಳೇಹಳ್ಳಿ, ತಾಲ್ಲೂಕು ಪಂಚಾಯಿತಿ ಸದಸ್ಯ ಕೆಳಕೆರೆ ದಿವಾಕರ್, ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಶಾಮಣ್ಣ ಮಾತನಾಡಿದರು.

ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆಸ್ತೂರ್ ಮಂಜುನಾಥ್, ಕೋಣಂದೂರು ಬ್ಲಾಕ್ ಅಧ್ಯಕ್ಷ ಮುಡುಬ ರಾಘವೇಂದ್ರ, ಕೆಪಿಸಿಸಿ ಸದಸ್ಯ ಜಿ.ಎಸ್.ನಾರಾಯಣರಾವ್ ಪ್ರತಿಭಟನಾ ಸಭೆಯನ್ನು ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT