ಭಾನುವಾರ, ನವೆಂಬರ್ 17, 2019
21 °C

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಸರಪಳಿ

Published:
Updated:
Prajavani

ಶಿವಮೊಗ್ಗ: ಕೇಂದ್ರ ಸರ್ಕಾರ ನೋಟು ರದ್ದು ಮಾಡಿದ ಪ್ರಮಾದದ ನಂತರ ದೇಶದ ಆರ್ಥಿಕ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಕಪ್ಪುಪಟ್ಟಿ ಧರಿಸಿ ಕಾಂಗ್ರೆಸ್ ಭವನದಿಂದ ಪ್ರತಿಭಟನೆ ಮೆರವಣಿಗೆ ಹೊರಟು ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ರಚಿಸಿ, ಆಕ್ರೋಶ ವ್ಯಕ್ತಪಡಿಸಿದರು.

ನೋಟ್‌ ರದ್ದತಿ ನಂತರ ಹಲವು ಕ್ಷೇತ್ರಗಳು ತೀವ್ರ ಸ್ವರೂಪದ ಸಮಸ್ಯೆ ಎದುರಿಸುತ್ತಿವೆ. ದಿನದಿಂದ ದಿನಕ್ಕೆ ದೇಶದ ಆರ್ಥಿಕ ಸ್ಥಿತಿ ಕುಸಿಯುತ್ತಿದೆ ನೋಟುಗಳ ಅಮಾನ್ಯದಿಂದ ಮಧ್ಯಮ ವರ್ಗದವರು, ಬಡವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೀವನ ನಡೆಸುವುದೇ ದುಸ್ತರವಾಗಿದೆ ಎಂದು ಆರೋಪಿಸಿದರು.

ಹೆಚ್ಚಿನ ಮೌಲ್ಯದ ನೋಟುಗಳ ರದ್ದತಿಯಿಂದ ದೇಶದಲ್ಲಿ ಕೂಲಿ ಕಾರ್ಮಿಕರಿಗೆ, ಸಣ್ಣ ಉದ್ದಿಮೆದಾರರಿಗೆ  ಬಾರಿ ತೊಂದರೆಯಾಗಿದೆ. ವ್ಯಾಪಾರ ವಹಿವಾಟು ಕುಂಠಿತಗೊಂಡಿದೆ. ದಿನದ ದುಡಿಮೆಯನ್ನೇ ನಂಬಿ ಬದುಕುತ್ತಿರುವ ಜನಸಾಮಾನ್ಯರು ಸಂಕಷ್ಟಕ್ಕಿಡಾಗಿದ್ದಾರೆ. ಚಿಲ್ಲರೆ ಸಮಸ್ಯೆ ತಲೆದೋರಿದೆ. ಈ ಎಲ್ಲ ಸಂಕಷ್ಟಗಳಿಗೆ ಕೇಂದ್ರ ಸರ್ಕಾರದ ತಪ್ಪು ಆರ್ಥಿಕ ನೀತಿಗಳೇ ಕಾರಣ ಎಂದು  ದೂರಿದರು.

ನೋಟುಗಳ ರದ್ದು ನಿರ್ಧಾರ ಪ್ರಧಾನಿ ಮೋದಿ ಅವರ ಏಕಪಕ್ಷೀಯ ಕ್ರಮ. ಯಾವುದೇ ಪೂರ್ವ ಸಿದ್ಧತೆ ಇಲ್ಲದೆ ಇಂತಹ ನಿರ್ಧಾರ ಕೈಗೊಂಡ ಪರಿಣಾಮ ದೇಶದ ಆರ್ಥಿಕ ವ್ಯವಸ್ಥೆಗೆ ದೊಡ್ಡ ಹೊಡೆತ ಬಿದ್ದಿದೆ. ಎರಡು ವರ್ಷಗಳಾದರೂ ದೇಶದ ಆರ್ಥಿಕ ಸ್ಥಿತಿ ಚೇತರಿಕೆ ಕಂಡಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್, ಮಹಿಳಾ ಘಟಕದ ಅಧ್ಯಕ್ಷೆ ಅನಿತಾ ಕುಮಾರಿ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನಕುಮಾರ್, ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಮುಖಂಡರಾದ ಇಸ್ಮಾಯಿಲ್‌ ಖಾನ್, ಎಸ್‌.ಪಿ.ಶೇಷಾದ್ರಿ, ಎಲ್.ರಾಮೇಗೌಡ, ಮುಕ್ತಿಯಾರ್ ಅಹಮದ್, ತೀ.ನಾ.ಶ್ರೀನಿವಾಸ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ಪ್ರತಿಕ್ರಿಯಿಸಿ (+)