ಶನಿವಾರ, ಫೆಬ್ರವರಿ 22, 2020
19 °C
ಒಗ್ಗಟ್ಟಿನ ಮಂತ್ರ ಜಪಿಸಿದ ಕಾಂಗ್ರೆಸ್; ಸಿದ್ದರಾಮಯ್ಯ ಅಭಿಮತ

ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ರಾಜ್ಯದಲ್ಲಿ ಯಾವತ್ತೇ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ದರಬಾರ ಪ್ರೌಢಶಾಲೆ ಮೈದಾನದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಕಾಂಗ್ರೆಸ್ ಸಮಿತಿ ನೂತನ ಅಧ್ಯಕ್ಷ ಪ್ರೊ.ರಾಜು ಆಲಗೂರ ಅವರ ಪದಗ್ರಹಣ ಹಾಗೂ ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ವಿರುದ್ಧ ಜನಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕುದುರೆ ವ್ಯಾಪಾರ ಮಾಡಿ ಮಿಸ್ಟರ್ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದಾರೆ. ಅಧಿಕಾರಿಗಳ ವರ್ಗಾವಣೆ, ಟಿಪ್ಪು ಜಯಂತಿಯನ್ನು ರದ್ದು ಮಾಡಿದ್ದೇ ಇವರ ನೂರು ದಿನಗಳ ಸಾಧನೆಯಾಗಿದೆ. ಉಪ ಚುನಾವಣೆ ನಡೆಯುವ 15 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದರೆ ಆಶ್ಚರ್ಯವಿಲ್ಲ. ಆಗ ಬಿಎಸ್‌ವೈ ರಾಜೀನಾಮೆ ಕೊಡಬೇಕಾಗುತ್ತದೆ’ ಎಂದು ಕುಟುಕಿದರು.

‘ಬಿಜೆಪಿಯವರು ಭಾವನಾತ್ಮಕವಾಗಿ ದೇಶದ ಯುವಜನತೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಸುಳ್ಳು ಹೇಳಿ ಅಧಿಕಾರದ ಗದ್ದುಗೆ ಏರಿದ್ದಾರೆ. ಆರ್ಥಿಕ ಹಿಂಜರಿತ, ಪ್ರವಾಹ ಸಂತ್ರಸ್ತರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿಲ್ಲ. ಈ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು’ ಎಂದು ಮನವಿ ಮಾಡಿದರು.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾತನಾಡಿ, ‘ಮೋದಿ ಅವರು ಹುಸಿ ಭರವಸೆಗಳನ್ನು ನೀಡಿದ್ದು, ಯಾವುದನ್ನೂ ಈಡೇರಿಸಿಲ್ಲ. ದೇಶದ ಅರ್ಥ ವ್ಯವಸ್ಥೆ ಕೆಟ್ಟು ಹೋಗಿದೆ. ಉದ್ಯೋಗ ಸೃಷ್ಟಿಯಾಗಿಲ್ಲ, ಕಪ್ಪು ಹಣ ವಾಪಸು ಬಂದಿಲ್ಲ. ಮೋದಿ ಯಾರ ಮಾತನ್ನೂ ಕೇಳುವುದಿಲ್ಲ, ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಕಾಂಗ್ರೆಸ್ ಮುಖಂಡರಾದ ಸಿ.ಎಸ್.ನಾಡಗೌಡ, ಹಮೀದ್ ಮುಶ್ರೀಫ್, ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ ಮಾತನಾಡಿದರು.

ಶಾಸಕರಾದ ಪ್ರಕಾಶ ರಾಠೋಡ, ಸುನಿಲ್‌ಗೌಡ ಪಾಟೀಲ, ಮುಖಂಡರಾದ ಶರಣಪ್ಪ ಸುಣಗಾರ, ವಿಠ್ಠಲ ಕಟಕದೊಂಡ, ನಿಂಗನಗೌಡ ಪಾಟೀಲ, ಮಕಬುಲ್ ಬಾಗವಾನ್, ಹಾಸಿಂಪೀರ ಯಾಳಗಿ, ಬಿ.ಎಸ್.ಪಾಟೀಲ ಯಾಳಗಿ, ರವಿಗೌಡ ಪಾಟೀಲ ಇದ್ದರು.

ಡಾ.ಮಹಾಂತೇಶ ಬಿರಾದಾರ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)